ಗೋಣಿಕೊಪ್ಪಲು, ಮೇ 17: ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಅಳಮೇಂಗಡ ಕ್ರಿಕೆಟ್ ಕಪ್‍ನಲ್ಲಿ ಆತಿಥೇಯ ಅಳಮೇಂಗಡ ಸೇರಿದಂತೆ ಕಾಣತಂಡ, ಕಳಕಂಡ ಹಾಗೂ ಅಣ್ಣಳಮಾಡ (ಬಿರುನಾಣಿ) ತಂಡಗಳು ಸೆಮಿಫೈನಲ್ ಪ್ರವೇಶ ಪಡೆದಿವೆ.

ಆತಿಥೇಯ ಅಳಮೇಂಗಡ ತಂಡವು ಅಮ್ಮಚ್ಚಿಮಣಿಯಂಡ ತಂಡವನ್ನು 55 ರನ್‍ಗಳ ಮೂಲಕ ಸೋಲಿಸಿತು. ಅಳಮೇಂಗಡ 5 ವಿಕೆಟ್ ಕಳೆದುಕೊಂಡು 101 ರನ್‍ಗಳ ಗುರಿ ನೀಡಿತು. ಅಮ್ಮಚ್ಚಿಮಣಿಯಂಡವು 9 ವಿಕೆಟ್ ಕಳೆದುಕೊಂಡು 45 ರನ್ ದಾಖಲಿಸಿ ನಿರಾಸೆಯಿಂದ ಸೋಲನುಭವಿಸಿತು. ಅಮ್ಮಚ್ಚಿಮಣಿಯಂಡ ಪರ ಸನ್ನು ಉತ್ತಪ್ಪ 16 ರನ್ ಹೊಡೆದರು. ಅಳಮೇಂಗಡ ಪರ ವರುಣ್ 40 ರನ್, ದಿಲಿಪ್ 27 ರನ್ ದಾಖಲಿಸಿದರು. ಅಳಮೇಂಗಡ ದಿಲಿಪ್ ಹಾಗೂ ಸೋಮಯ್ಯ ಪಡೆದ ತಲಾ 3 ವಿಕೆಟ್ ಪಡೆದರು. ಅಮ್ಮಚ್ಚಿಮಣಿಯಂಡ ಚೇತನ್ 2 ವಿಕೆಟ್ ಪಡೆದರು. ಅಮ್ಮಚ್ಚಿಮಣಿಯಂಡ ಸನ್ನು ಉತ್ತಪ್ಪ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಮಾಜಿ ಚಾಂಪಿಯನ್ ಕಾಣತಂಡವು ಮಾಳೇಟೀರ (ಕೆದಮುಳ್ಳೂರ್) ವನ್ನು 7 ರನ್‍ಗಳಿಂದ ಸೋಲಿಸಿತು. ಮಾಳೇಟೀರ ನಿಗಧಿತ 12 ಓವರ್‍ಗಳಿಗೆ 6 ವಿಕೆಟ್ ಕಳೆದುಕೊಂಡು 70 ರನ್‍ಗಳ ಗುರಿ ನೀಡಿತು. ಕಾಣತಂಡ 3 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಕಾಣತಂಡ ಪರ ವಿಪನ್ ಉತ್ತಯ್ಯ 26 ರನ್, ಕೃಪನ್ ಅಯ್ಯಪ್ಪ 17 ರನ್, ಶರತ್ 13 ರನ್ ಪಡೆದರು. ಕಾಣತಂಡ ಕಿರಣ್ ಮೊಣ್ಣಪ್ಪ 2 ವಿಕೆಟ್ ಪಡೆದರು. ಮಾಳೇಟೀರ ಶರತ್ 11 ರನ್, ಡೆನ್ನಾ 37 ರನ್ ಹೊಡೆದರು. ಕೆದಮುಳ್ಳೂರ್ ಮಾಳೇಟೀರ ಡೆನಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಕಳಕಂಡ ತಂಡವು ಮಂದೇಯಂಡ ವಿರುದ್ಧ 34 ರನ್‍ಗಳ ಗೆಲುವು ದಾಖಲಿಸಿತು. ಕಳಕಂಡ 9 ವಿಕೆಟ್ ಕಳೆದುಕೊಂಡು 78 ರನ್ ಸೇರಿಸಿತು. ಮಂದೇಯಂಡ 46 ರನ್ ದಾಖಲಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು. ಕಳಕಂಡ ಭರತ್ 22 ರನ್, ಬಬ್ಲಿ 11 ರನ್, ಮಂದೇಯಂಡ ಬೆಲ್ಲು ಬೋಪಣ್ಣ 21 ರನ್ ಹೊಡೆದರು. ಮಂದೇಯಂಡ ಅನಿಲ್ 28 ರನ್ ನೀಡಿ 3 ವಿಕೆಟ್ ಪಡೆದರು. ಮಂದೇಯಂಡ ಬೆಲ್ಲು ಬೋಪಣ್ಣ ಪಂದ್ಯ ಶ್ರೇಷ್ಠರಾದರು.

ಬಿರುನಾಣಿ ಅಣ್ಣಳಮಾಡ ತಂಡವು ಮಂಡುವಂಡ ವಿರುದ್ಧ 7 ರನ್‍ಗಳ ರೋಚಕ ಗೆಲುವು ದಾಖಲಿಸಿ ಸೆಮಿ ಫೈನಲ್‍ಗೆ ಲಗ್ಗೆ ಇಟ್ಟಿತು. ಉತ್ತಮ ಆಟ ಪ್ರದರ್ಶಿಸಿದ ಅಣ್ಣಳಮಾಡ ಚಾಂಪಿಯನ್ ಚೆಕ್ಕೇರವನ್ನು ಮಣಿಸಿದ ಮಂಡುವಂಡವನ್ನು ಸೋಲಿಸಿತು. ಅಣ್ಣಳಮಾಡವು 6 ವಿಕೆಟ್ ನಷ್ಟಕ್ಕೆ 94 ರನ್ ದಾಖಲಿಸಿತು. ಗುರಿ ಬೆನ್ನತ್ತಿದ ಮಂಡುವಂಡ ನಿಧಾನಗತಿಯ ಬ್ಯಾಟಿಂಗ್ ಮುಳುವಾಯಿತು. 4 ವಿಕೆಟ್ ಕಳೆದುಕೊಂಡು 87 ರನ್ ದಾಖಲಿಸಿ ಸಣ್ಣ ರನ್‍ಗಳಿಂದ ಸೋತಿತು. ಕೊನೆಯ ಓವರ್‍ವರೆಗೂ ಪಂದ್ಯವನ್ನು ಹಿಡಿದಿಟ್ಟಿದ್ದ ಮಂಡುವಂಡ ಉತ್ತಮ ಕ್ರಿಕೆಟ್ ಪ್ರದರ್ಶಿಸಿತು. ಅಣ್ಣಳಮಾಡ ಭವನ್ 42 ರನ್ ಸೇರಿಸಿದಲ್ಲದೆ, ಬೌಲಿಂಗ್‍ನಲ್ಲಿ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಂಡುವಂಡ ದರ್ಶನ್ 54 ರನ್‍ಗಳ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಮಂಡುವಂಡ ಯುವ ಕ್ರಿಕೆಟಿಗ ದೀಕ್ಷಿತ್ ಉತ್ತಮ ಫೀಲ್ಡಿಂಗ್ ಪ್ರದರ್ಶನ ನೀಡಿದರು. ಸಿಕ್ಸರ್ ಹೋಗುತ್ತಿದ್ದ ಚೆಂಡನ್ನು ತಡೆಯಲು ಹೋಗಿ ಬೌಂಡರಿ ಲೈನ್‍ನಲ್ಲಿದ್ದ ಜಾಹೀರಾತು ಬೋರ್ಡ್‍ಗೆ ಬಡಿದು ಗಾಯಗೊಂಡರೂ ಮತ್ತೆ ಅಟವಾಡಿದರು. ಈ ಸಂದರ್ಭ ಪ್ರತಿಸ್ಪರ್ಧಿ ತಂಡ ಅಣ್ಣಳಮಾಡ ಅಟಗಾರರು ಗಾಯಾಳುವಿನ ಸಮೀಪ ಬಂದು ಅರೋಗ್ಯ ವಿಚಾರಿಸುವ ಮೂಲಕ ಕ್ರೀಡಾಭಿಮಾನಿಗಳ ಮನ ಗೆದ್ದರು.

ಗೊಂದಲ : ಮಾಳೇಟೀರ ತಂಡವು ಕುಕ್ಲೂರ್ ಭಾಗದ ಆಟಗಾರರನ್ನು ಸೇರಿಸಿದ್ದಾರೆ ಎಂದು ಕಾಣತಂಡ ಆಕ್ಷೇಪ ವ್ಯಕ್ತಪಡಿಸಿತು. ಕೆದಮುಳ್ಲೂರ್ ಮಾಳೇಟೀರ ಹೆರಿನಲ್ಲಿ ಭಾಗವಹಿಸಿದ್ದ ತಂಡವು ಕುಕ್ಲೂರ್ ಭಾಗದ ಆಟಗಾರರನ್ನು ಸೇರಿಸುವಂತಿಲ್ಲ ಎಂದು ಕಾಣತಂಡ ಆಟಗಾರರು ಹೇಳಿದರು. ಮಾಳೇಟೀರ ಎಂದು ಆಡುತ್ತೇವೆ ಎಂದು ಕೆದಮುಳ್ಳೂರ್ ಆಟಗಾರರು ಹೇಳಿದರಾದರೂ, ಹಿಂದಿನಂತೆ ಕೆದಮುಳ್ಳೂರ್ ಮಾಳೇಟಿರ ಎಂದು ಪಂದ್ಯ ನಡೆಯಿತು.

ಮಂದೇಯಂಡ ಬ್ಯಾಟ್ಸ್‍ಮನ್ ಸುಜು ಅಂಪೈರ್ ನೀಡಿದ ಔಟ್ ತೀರ್ಪನ್ನು ಪ್ರಶ್ನಿಸಿ ಮೈದಾನದಿಂದ ಹೊರ ಹೋಗದೆ ಪ್ರಶ್ನಿಸಿದರು. ವಿಕೆಟ್ ಕೀಪರ್‍ಗೆ ಕ್ಯಾಚ್ ನೀಡಿದ್ದರಿಂದ ಅಂಪೈರ್ ಔಟ್ ನೀಡಿದರು. ತಂಡದ ಮತ್ತೊಬ್ಬ ಬ್ಯಾಟ್ಸ್‍ಮನ್ ಮೈದಾನಕ್ಕೆ ಬಂದರೂ ತೀರ್ಪು ಪ್ರಶ್ನಿಸುವ ಅಭಿಮಾನಿಗಳಲ್ಲಿ ಕಿರಿಕಿರಿ ಉಂಟಾಗುವಂತೆ ಮಾಡಿದರು.