ಮಡಿಕೇರಿ, ಮೇ 17 : ಸಮಾಜದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದ್ದು, ಭ್ರಷ್ಟಾಚಾರ ಮುಕ್ತ ಸಮಾಜಕ್ಕೆ ವಿದ್ಯಾರ್ಥಿ ಸಮುದಾಯ ಪಣ ತೊಡಬೇಕೆಂದು ಲೋಕಾಯುಕ್ತ ನಿವೃತ್ತ ನ್ಯಾಯಾಧೀಶ ಡಾ.ಎನ್. ಸಂತೋಷ್ ಹೆಗ್ಡೆ ಕರೆ ನೀಡಿದ್ದಾರೆ. ಈ ಸಾಧನೆ ವಿದ್ಯಾರ್ಥಿ ಸಮೂಹದಿಂದ ಮಾತ್ರ ಸಾಧ್ಯವೆಂದು ಅವರು ಆಶಿಸಿದ್ದಾರೆ.ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಆಯೋಜಿತ ಭಾರತೀಯ ವಿದ್ಯಾಭವನ ಶಾಲೆಗಳ 8ನೇ ರಾಷ್ಟ್ರೀಯ ಏಕತಾ ಸಮಾವೇಶದ ಮೂರನೇ ದಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು ವಿದ್ಯಾರ್ಥಿಗಳೇ ಸಮಾಜ ಬದಲಾವಣೆಯ ಹರಿಕಾರರಾಗಿದ್ದು, ವಿದ್ಯಾರ್ಥಿಗಳಿಗೆ ಸಮಾಜ ಸುಧಾರಣೆಯ ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು.

ಭ್ರಷ್ಟರನ್ನು ಸಮಾಜದಿಂದ ಬಹಿಷ್ಕರಿಸಿ ಎಂಬ ನೀತಿ ಪಾಠವನ್ನು ವಿದ್ಯಾರ್ಥಿಗಳಿಗೆ

(ಮೊದಲ ಪುಟದಿಂದ) ಹೇಳಿ ಕೊಡಬೇಕಾದ ಅಗತ್ಯವಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದ ಸಂತೋಷ್ ಹೆಗ್ಡೆÉ, ಭಾರತವನ್ನು ಸ್ವಾತಂತ್ರ್ಯಾನಂತರದ 70 ವರ್ಷಗಳ ಕಾಲ ಒಗ್ಗಟ್ಟಿನಿಂದ ಕಾಪಾಡಿದ್ದೇವೆ. ಆದರೆ ಭ್ರಷ್ಟಾಚಾರ, ಅಮಾನವೀಯತೆಗಳು ದೇಶದ ಐಕ್ಯತೆಗೆ ಧಕ್ಕೆ ತರುವ ವಿದ್ರೋಹಿಗಳಿಂದ ದೇಶವನ್ನು ಮುಕ್ತವಾಗಿಸಲು ಒಗ್ಗಟ್ಟು, ಅಗತ್ಯವಾಗಿದೆ ಎಂದು ಅವರು ಹೇಳಿದರು.

ವಷರ್Àದಿಂದ ವರ್ಷಕ್ಕೆ ದೇಶದಲ್ಲಿ ಹೊಸ ಹೊಸ ಭ್ರಷ್ಟಾಚಾರಗಳು ಬೆಳಕಿಗೆ ಬರುತ್ತಿದ್ದು, ಪ್ರತೀ ಭ್ರಷ್ಟಾಚಾರ ಪ್ರಕರಣಗಳಲ್ಲಿಯೂ ದುರುಪಯೋಗವಾದ ಹಣದ ಮೌಲ್ಯ ಕೋಟಿಕೋಟಿ ಹೆಚ್ಚುತ್ತಿದೆ. ಇದು ಭಾರತದ ದೌರ್ಭಾಗ್ಯ ಎಂದು ಅವರು ವಿಷಾಧಿಸಿದರು. ‘‘ನನ್ನ ಜೀವನ ಕಾಲದಲ್ಲಿ ದೇಶದ ಸ್ಥಿತಿ ಬದಲಾದೀತು ಎಂಬ ನಿರೀಕ್ಷೆ ನನ್ನಲ್ಲಿಲ್ಲ.’’ ಆದರೆ ವಿದ್ಯಾರ್ಥಿಗಳು ಜಾಗೃತರಾದರೆ ಮುಂದೆಂದಾದರೂ ಭಾರತ ಭ್ರಷ್ಟಾಚಾರ ಮುಕ್ತವಾದೀತು ಎಂಬ ನಿರೀಕ್ಷೆಯಂತೂ ತನ್ನಲ್ಲಿದೆ ಎಂದು ನಿವೃತ್ತ ನ್ಯಾಯಾಧೀಶರು ಹೇಳಿದರು.

ಭ್ರಷ್ಟಾಚಾರಿಗಳಿಗೆ ಎಲ್ಲಿಯವರೆಗೆ ಕಠಿಣ ಕಾನೂನು ರೀತ್ಯ ಶಿಕ್ಷೆಯಾಗುವುದಿಲ್ಲವೋ ಅಲ್ಲಿಯವರೆಗೆ ಭ್ರಷ್ಟಾಚಾರ ಕೂಡ ಸಮಾಜದಲ್ಲಿ ತಾಂಡವವಾಡುತ್ತಲೇ ಇರುತ್ತದೆ. ದೇಶದಲ್ಲಿನ ನ್ಯಾಯಾಂಗ ವ್ಯವಸ್ಥೆ ಕೂಡ ಬದಲಾಗಬೇಕಾದ ಅನಿವಾರ್ಯತೆಯಿದೆ. ಮೇಲ್ಮನವಿ ಸಲ್ಲಿಸುವ ನ್ಯಾಯಾಲಯಗಳ ಸಂಖ್ಯೆ ಇಳಿಮುಖವಾಗಬೇಕು. ಆಗ ನ್ಯಾಯಾಲಯದ ಆದೇಶ ಶೀಘ್ರ ದೊರಕುವಂತಾಗುತ್ತದೆ. ಒಂದು ನ್ಯಾಯಾಲಯ ತೀರ್ಪು ನೀಡಿದ ನಂತರ ಒಂದು ನ್ಯಾಯಾಲಯದಲ್ಲಿ ಮಾತ್ರ ಮೇಲ್ಮನವಿ ಸಲ್ಲಿಸುವಂತಿರಬೇಕು ಎಂದೂ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರು ಅಭಿಪ್ರಾಯಪಟ್ಟರು.

2016 ರ ಡಿಸೆಂಬರ್ ನಲ್ಲಿ 24 ದಿನಗಳ ಕಾಲ ನಡೆದ ಸಂಸತ್ ಅಧಿವೇಶನದಲ್ಲಿ ಬರೀ ಗದ್ದಲ, ಗಲಾಟೆಗಳೇ ನಡೆದಿವೇ ವಿನಾ ಯಾವದೇ ಮಸೂದೆ ಮಂಡನೆಯಾಗಲಿಲ್ಲ. ಸಾವಿರಾರು ಕೋಟಿ ರೂ. ವ್ಯರ್ಥವಾಯಿತು ಎಂದು ವಿಷಾಧಿಸಿದ ಸಂತೋಷ್ ಹೆಗಡೆ, ಇಂಥ ವ್ಯವಸ್ಥೆ ಬದಲಾಗಲೇಬೇಕಾಗಿದೆ ಎಂದು ಹೇಳಿದರು.

ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ, ಕಾರ್ಯದರ್ಶಿ ಬಾಲಾಜಿ ಕಶ್ಯಪ್, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಸಂಚಾಲಕ ಸಿ.ಬಿ.ದೇವಯ್ಯ, ಪ್ರಾಂಶುಪಾಲ ಇ.ಶ್ರೀನಿವಾಸನ್ , ನಿವೃತ್ತ ನ್ಯಾಯಾಮೂರ್ತಿ ಸಂತೋಷ್ ಹೆಗಡೆ ಅವರಿಗೆ ಕೊಡಗಿನ ಸಾಂಪ್ರದಾಯಿಕ ಒಡಿಕತ್ತಿ ನೀಡಿ ಗೌರವಿಸಿದರು.

ಕುಟುಂಬದ ಗಾನಸುಧೆ : ಅಪ್ಪ -ಮಗ ತಬಲ ಬಾರಿಸಿದರೆ, ಮಗಳು ಸುಶ್ರಾವ್ಯವಾಗಿ ಹಾಡುವ ಮೂಲಕ ನೂರಾರು ಕೇಳುಗರನ್ನು ಗಾನಸುಧೆಯ ಅಲೆಯಲ್ಲಿ ತೇಲುವಂತೆ ಮಾಡಿದರು. ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಆಯೋಜಿತ ರಾಷ್ಟ್ರೀಯ 8 ನೇ ಸಮಾವೇಶ.

ಬೆಂಗಳೂರು ಮೂಲದ ಗುರುಚರಣ್ ಗರುಡ್ ತನ್ನ ಪುತ್ರಿ ಪೂರ್ವಿ ಮತ್ತು ಪುತ್ರ ಸುಧನ್ವ ಜತೆಗೆ ನೀಡಿದ ಜುಗಲ್ ಬಂಧಿ ಸಂಗೀತ ಕಾರ್ಯಕ್ರಮ ರಾಷ್ಟ್ರದ ವಿವಿಧೆಡೆಗಳಿಂದ ಬಂದಿದ್ದ 450 ಶಿಬಿರಾರ್ಥಿಗಳ ಮನಮುಟ್ಟುವಂತೆ ಮಾಡಿತು. ಒಂದೇ ಕುಟುಂಬಕ್ಕೆ ಸೇರಿದವರ ಈ ಅಪರೂಪದ ಸಂಗೀತ ಕಾರ್ಯಕ್ರಮ ಕಲಾ ಪ್ರೇಮಿಗಳ ಆಕರ್ಷಣೆ ಗಳಿಸುವಲ್ಲಿ ಯಶಸ್ವಿಯಾಯಿತು.

ಕಾವೇರಿ ತಾಯಿಯ ತವರು ಜಿಲ್ಲೆಯಲ್ಲಿ ಸುಧನ್ವ ನೀಡಿದ ಪ್ರಥಮ ಕಾರ್ಯಕ್ರಮ ಭವಿಷ್ಯದಲ್ಲಿ ತನ್ನ ಮಗನನ್ನು ಸಂಗೀತ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆ ಇದೆ ಎಂದು ಗುರುಚರಣ್ ಗರುಡ್ ಹೇಳಿದರು.

ಅಪ್ಪ -ಮಗಳು - ಮಗನ ಸಂಗೀತ ಕಾರ್ಯಕ್ರಮದಲ್ಲಿನ ಜುಗಲ್ ಬಂಧಿ ಕಲಾಪ್ರೇಮಿಗಳನ್ನು ರೋಮಾಂಚನಗೊಳಿಸಿತ್ತು. ಹಾರ್ಮೋನಿಯಂನಲ್ಲಿ ಸೂರ್ಯ ಉಪಾಧ್ಯಾಯ ಕೂಡ ಉತ್ತಮ ಸಾಥ್ ನೀಡಿದರು.

ಗೊಂಬೆಯಾಟ : ಸಂಜೆ ಏಕತಾ ಸಮಾವೇಶದ ಎರಡನೇ ದಿನದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ದೇಶದ ಹೆಸರಾಂತ ಗೊಂಬೆಯಾಟ ಕಲಾವಿದ ಕೊಗ್ಗ ಭಾಸ್ಕರ ಕಾಮತ್ ಅವರಿಂದ ಲಂಕಾದಹನ ಕಥಾ ಪ್ರಸಂಗದ ಗೊಂಬೆಯಾಟ ಕಲಾ ಪ್ರೇಮಿಗಳಿಗೆ ಹೊಸ ಅನುಭವ ನೀಡಿತು. ಎರಡು ಗಂಟೆಗಳ ಕಾಲ ಗೊಂಬೆಯಾಟ ಪ್ರದರ್ಶನ ಸಂದರ್ಭ ರಾಮಾಯಣದ ಪಾತ್ರಗಳನ್ನು ನೈಜವೇನೋ ಎಂಬಂತೆ ಪ್ರದರ್ಶಿಸಿದ ಕೊಗ್ಗ ಕಾಮತ್ ವೀಕ್ಷಕರನ್ನು ಪೌರಾಣಿಕ ಕಾಲಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಲಂಕಾದಹನ ಸನ್ನಿವೇಶದ ಸಂದರ್ಭ ಬೆಂಕಿಯನ್ನೂ ಸೃಷ್ಟಿಸಿದ್ದು ಪ್ರೇಕ್ಷಕರ ಅಚ್ಚರಿಗೆ ಕಾರಣವಾಯಿತು. ಗೊಂಬೆಯಾಟದ ಹಿಂದಿನ ತಂತ್ರಗಳ ಬಗ್ಗೆ ಕೊಗ್ಗ ಬಾಸ್ಕರ ಕಾಮತ್ ಪ್ರದರ್ಶನದ ಅಂತ್ಯದಲ್ಲಿ ಪ್ರಾತ್ಯಕ್ಷಿಕೆ ನೀಡಿದ್ದು ವಿಶೇಷವಾಗಿತ್ತು.