ಕೂಡಿಗೆ, ಮೇ 16: ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಂದರನಗರ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಶಾಸಕರಿಗೆ ಗ್ರಾಹಕರು ನೀಡಿದ ದೂರಿನನ್ವಯ ಶಾಸಕರು ನ್ಯಾಯಬೆಲೆ ಅಂಗಡಿಗೆ ದಿಢೀರ್ ಭೇಟಿ ನೀಡಿದರು. ಪಡಿತರ ಚೀಟಿಗೆ ಆಧಾರ್ ಕಾರ್ಡ್ ಸೇರ್ಪಡೆಗೊಳಿಸಲು ಆಧಾರ್ ಕಾರ್ಡ್ ನೀಡಿದರೂ ಸೇರ್ಪಡೆಗೊಳಿಸದೆ ನಮಗೆ ಬರುವ ಪಡಿತರ ವಸ್ತುಗಳು ಸಿಗುತ್ತಿಲ್ಲ. ಇದರಿಂದ ನಮಗೆ ಅನ್ಯಾಯವಾಗುತ್ತಿದ್ದು, ಇದನ್ನು ಸರಿಪಡಿಸುವಂತೆ . ಸ್ಥಳದಲ್ಲಿದ್ದ ಗ್ರಾಹಕರು ಶಾಸಕರಲ್ಲಿ ಕೋರಿಕೊಂಡರು.

ನ್ಯಾಯಬೆಲೆ ಅಂಗಡಿಯ ಕಡತಗಳನ್ನು ಪರಿಶೀಲಿಸಿ ಬಡಜನರಿಗೆ ಸೇರಬೇಕಾದ ಪಡಿತರ ವಸ್ತುಗಳನ್ನು ಸಮರ್ಪಕವಾಗಿ ವಿತರಿಸಬೇಕು. ಅಲ್ಲದೆ, ಇಲಾಖೆಯ ನಿಯಮಗಳನುಸಾರವಾಗಿ ಗ್ರಾಹಕರ ನೊಂದಣಿ ಮತ್ತು ಆಧಾರ್ ಕಾರ್ಡ್ ಅನ್ನು ಸೇರ್ಪಡೆಗೊಳಿಸಿ ಗ್ರಾಹಕರಿಗೆ ಪಡಿತರ ವಸ್ತುಗಳು ಸಿಗುವಂತಾಗಬೇಕೆಂದು ನ್ಯಾಯಬೆಲೆ ಅಂಗಡಿಯ ಪಡಿತರ ವಸ್ತುಗಳ ವಿತರಕನಿಗೆ ಶಾಸಕರು ಸೂಚಿಸಿದರು. ಈ ಸಂದರ್ಭ ಜಿ.ಪಂ ಸದಸ್ಯೆ ಮಂಜುಳಾ, ತಾ.ಪಂ ಸದಸ್ಯ ಗಣೇಶ್, ಕೂಡುಮಂಗಳೂರು ಗ್ರಾ.ಪಂ. ಸದಸ್ಯ ಬಾಸ್ಕರ್ ನಾಯಕ್, ಸಾವಿತ್ರಿ, ಜ್ಯೋತಿಪ್ರಮೀಳ, ಜಯಮ್ಮ, ಮಾಜಿ ಸದಸ್ಯ ಕುಮಾರಸ್ವಾಮಿ, ಕೂಡುಮಂಗಳೂರು ಬಿಜೆಪಿ ಬ್ಲಾಕ್ ಅಧ್ಯಕ್ಷ ಮಂಜುನಾಥ್, ತಾಲೂಕು ಬಿಜೆಪಿ ಉಪಾಧ್ಯಕ್ಷ ಕೆ.ಕೆ.ಭೋಗಪ್ಪ, ಬಿಜೆಪಿ ಸ್ಥಳೀಯ ಮುಖಂಡ ಕೆ.ಎಂ.ಚಂದ್ರು ಸೇರಿದಂತೆ ಸ್ಥಳೀಯ ಗ್ರಾಮಸ್ಥರುಗಳು ಇದ್ದರು.