ಸಿದ್ದಾಪುರ, ಮೇ 16: ಅರಣ್ಯ ಇಲಾಖೆಯಿಂದ ಗುಹ್ಯ ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಸುಮಾರು 17 ಕ್ಕೂ ಹೆಚ್ಚು ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲಾಯಿತು.ಗುಹ್ಯ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು ಕೃಷಿ ಫಸಲುಗಳನ್ನು ನಾಶಪಡಿಸುತ್ತಿರುವ ಹಿನ್ನಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ ಮೇರೆಗೆ ಅರಣ್ಯ ಇಲಾಖೆಯ ಸುಮಾರು 12 ಮಂದಿ ಸಿಬ್ಬಂಧಿಗಳು ಇಂಜಿಲಗೆರೆ ವ್ಯಾಪ್ತಿಯಿಂದ ಕಾರ್ಯಾಚರಣೆ ನಡೆಸಿದರು. ಆದರೆ ಇಂಜಿಲೆಗೆರೆ ವ್ಯಾಪ್ತಿಯ ತೋಟಗಳಲ್ಲಿ ಕಾಡಾನೆಗಳು ಇಲ್ಲದ ಕಾರಣ ಸಮೀಪದ ಗುಹ್ಯ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದಾಗ ಗುಹ್ಯ ಗ್ರಾಮದ ಎ.ಟಿ. ಕಾರ್ಯಪ್ಪ ಅವರ ತೋಟದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡಿನ ಪೈಕಿ 3 ಒಂಟಿ ಸಲಗ, 3 ಮರಿ ಆನೆಗಳು ಸೇರಿದಂತೆ ಒಟ್ಟು 17 ಕಾಡಾನೆಗಳನ್ನು ಪಟಾಕಿ ಸಿಡಿಸುವ ಮೂಲಕ ಸಮೀಪದ ಅರಣ್ಯಕ್ಕೆ ಅಟ್ಟಲಾಯಿತೆಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಉಪವಲಯ ಅರಣ್ಯಧಿಕಾರಿ ದೇವಯ್ಯ ತಿಳಿಸಿದ್ದಾರೆ.

ವೀರಾಜಪೇಟೆ ವಲಯ ಅರಣ್ಯಧಿಕಾರಿ ಗೋಪಾಲ್ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಧಿಕಾರಿ ದೇವಯ್ಯ ಸೇರಿದಂತೆ 12 ಮಂದಿ ಸಿಬ್ಬಂದಿಗಳು ಕಾಫಿ ತೋಟಗಳ ಒಳಗೆ ನುಗ್ಗಿ ಕಾರ್ಯಾಚರಣೆ ನಡೆಸಿದರು ಈ ಬಾರಿ ಕಾರ್ಯಾಚರಣೆ ಸಂದÀರ್ಭ ಕಾಡಾನೆಗಳು ಯಾವದೆ ಪ್ರತಿರೋಧ ಒಡ್ಡದೆ ಗುಂಪು ಗುಂಪಾಗಿ ತೋಟದಿಂದ ತೆರಳಿತು ಎನ್ನಲಾಗಿದೆ.

ಹಲಸಿನ ಹಣ್ಣನ್ನು ಅರಸಿಕೊಂಡು ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ತೋಟದ ಮಾಲೀಕರು ಹಾಗೂ ಕಾರ್ಮಿಕರು ಇದರಿಂದ ಆತಂಕಗೊಂಡಿದ್ದರು.