ಕಾಯಪಂಡ ಶಶಿ ಸೋಮಯ್ಯ

ಮಡಿಕೇರಿ, ಮೇ 5: ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಕೌಟುಂಬಿಕ ಹಾಕಿ ನಮ್ಮೆ ಆರಂಭಗೊಂಡ ನಂತರ ಪಂದ್ಯಾಟ ನಡೆಯುವ ಮೈದಾನ ಹಾಗೂ ಆಯಾ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಜೋರಾಗಿರುತ್ತದೆ. ಇದು ಕೇವಲ ಇಲ್ಲಿಗೆ ಮಾತ್ರ ಸೀಮಿತವೂ ಆಗಿರದು. ಆಯಾ ಕುಟುಂಬಗಳ ಆಟಗಾರರು, ಬೆಂಬಲಿಗರು, ಕುಟುಂಬದವರು ಆಗಮಿಸುವ ಹಾಗೂ ತೆರಳು ಮಾರ್ಗದಲ್ಲೂ ಹಾಕಿ ಉತ್ಸವ ವ್ಯಾಪಾರ ಅವಲಂಬಿತರಿಗೆ ಒಂದಷ್ಟು ಕಾಸು ಮಾಡಿಕೊಡುತ್ತದೆ.

ಈ ಸಂದರ್ಭದಲ್ಲಿ ‘ಕೊಡಗಿನ ಟಾನಿಕ್’ ಅಂಗಡಿಗಳಿಗೆ ತುಸು ಹೆಚ್ಚು ಲಾಭ ಸಹಜವಾಗಿರುತ್ತದೆ. 306 ತಂಡಗಳು ಅಂದರೆ ಸುಮಾರು ಐದು ಸಾವಿರಕ್ಕೂ ಅಧಿಕ ಆಟಗಾರರು ಎಲ್ಲಾ ತಂಡಗಳಿಗೆ ಸಮವಸ್ತ್ರದಿಂದ ಹಿಡಿದು, ಹಾಕಿ ಸ್ಟಿಕ್, ಶೂ, ಚಿನ್ ಪ್ಯಾಡ್, ಸ್ಟಾಕಿನ್ಸ್, ಗೋಲ್‍ಕೀಪರ್ ಕಿಟ್ ಇತ್ಯಾದಿ ಕ್ರೀಡಾ ಪರಿಕರಗಳೂ ಬೇಕಾಗುತ್ತದೆ. ಕೊಡಗಿನ ಕ್ರೀಡಾ ಸಾಮಗ್ರಿ ಮಳಿಗೆಗಳು ಮಾತ್ರವಲ್ಲ ಮೈಸೂರು-ಬೆಂಗಳೂರಿನ ಮಳಿಗೆಗಳಿಗೂ ಇದೊಂದು ವ್ಯಾಪಾರದ ಮೂಲ. ಹೊಟೇಲ್‍ಗಳು, ತಂಪು ಪಾನೀಯ ಅಂಗಡಿಯವರಿಗೂ ವ್ಯಾಪಾರ ಜೋರಾಗಿರುತ್ತದೆ. ಇನ್ನು ರಸ್ತೆ ಬದಿಯಲ್ಲಿ ಸೌತೆಕಾಯಿ, ವಿವಿಧ ಹಣ್ಣು - ಹಂಪಲುಗಳ ವ್ಯಾಪಾರದ ಮೂಲಕವೂ ಹಲವರು ಒಂದಷ್ಟು ನೆಮ್ಮದಿ ಕಾಣುತ್ತಾರೆ.

ಇನ್ನು ಹಾಕಿ ಮೈದಾನಕ್ಕೆ ಬಂದರೆ ಅಲ್ಲೂ ಹಲವರು ಬದುಕು ಕಂಡು ಕೊಳ್ಳುತ್ತಾರೆ. ಸಂಘಟಕರಿಗೆ ಒಂದಷ್ಟು ದುಬಾರಿ ಶುಲ್ಕ ಪಾವತಿಸಬೇಕಾದರೂ ತಿಂಗಳ ಕಾಲದ ಹಬ್ಬದ ರೀತಿಯ ಪಂದ್ಯಾಟ ಇದಾದ್ದರಿಂದ ನಷ್ಟವಾಗುವದು ಕಡಿಮೆ. ವರ್ಷದಿಂದ ವರ್ಷಕ್ಕೆ ಹಾಕಿ ಉತ್ಸವದ ಸ್ಥಳದಲ್ಲಿ ತೆರೆಯಲ್ಪಡುವ ವಾಣಿಜ್ಯ ಮಳಿಗೆಗಳು, ಹೊಟೇಲ್‍ಗಳು, ಇನ್ನಿತರ ವಹಿವಾಟು ಹೆಚ್ಚಾಗುತ್ತಿರುವದನ್ನು ಗಮನಿಸಿದರೆ ಒಂದಲ್ಲಾ ಒಂದು ರೀತಿಯಲ್ಲಿ ಲಾಭ ಖಚಿತವಿದೆ ಎನಿಸದಿರದು.

ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾಕೂಟಗಳು ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆಯುತ್ತದೆಯಾದರೂ ಹಾಕಿಯ ವೈಭವ ಸ್ವಲ್ಪ ಹೆಚ್ಚು. ಚುರುಮುರಿ, ಪಾಪ್‍ಕಾರ್ನ್‍ನಿಂದ ಹಿಡಿದು ದೊಡ್ಡ ದೊಡ್ಡ ಕಂಪೆನಿಗಳ ಉತ್ಪನ್ನಗಳು, ದುಬಾರಿ ವಾಹನಗಳ ಪ್ರದರ್ಶನ, ಬುಕ್ಕಿಂಗ್ ವ್ಯವಸ್ಥೆಗಳು, ದೊಡ್ಡ ದೊಡ್ಡ ಕಂಪೆನಿಗಳು, ಬ್ಯಾಂಕ್‍ಗಳು ಇನ್ನಿತರ ಉದ್ದಿಮೆದಾರರ ಜಾಹೀರಾತು ಫಲಕಗಳು, ಬ್ಯಾನರ್‍ಗಳು ಮೈದಾನ, ಗ್ಯಾಲರಿಗಳಲ್ಲಿ ಅಳವಡಿಕೆಯಾಗುವದರೊಂದಿಗೆ ಹಾಕಿ ನಮ್ಮೆಗೆ ಮತ್ತೊಂದು ಕಳೆ ಒದಗಿಸಿಕೊಡುತ್ತದೆ.

ವ್ಯಕ್ತಿಯೋರ್ವರು ತಾವು ಮಾರಾಟ ಮಾಡಬೇಕಿರುವ ಜೀಪ್ ಅನ್ನು ‘ಫಾರ್‍ಸೇಲ್’ ಎಂದು ಸ್ಟಿಕ್ಕರ್ ಅಂಟಿಸಿ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಿದ್ದು, ಏ. 30 ರಂದು ಕಂಡು ಬಂದಿತು. ಕಬ್ಬಿನರಸ (ಶುಗರ್‍ಕೇನ್ ಜ್ಯುಸ್) ಚುರುಮುರಿ, ಪಾಪ್ ಕಾರ್ನ್, ಐಸ್‍ಕ್ರೀಂ, ಮಿನರಲ್ ವಾಟರ್, ಕುಲ್ಫಿ ಇತ್ಯಾದಿಗಳು ಕ್ರೀಡಾಭಿಮಾನಿಗಳು ಕುಳಿತಿರುವ ಸ್ಥಳಕ್ಕೆ ಬರುತ್ತವೆ. ಮಕ್ಕಳು, ಆಬಾಲವೃದ್ಧರಾಗಿ ಹಾಕಿ ವೀಕ್ಷಣೆಗೆ ಜನ ಆಗಮಿಸುತ್ತಾರೆ. ಪಂದ್ಯದ ಕುತೂಹಲದಿಂದ ನೋಡುಗರು ಕುಳಿತ ಗ್ಯಾಲರಿಯಿಂದ ಇಳಿದು ತೆರಳುವದು ಕಡಿಮೆ. ಅಲ್ಲದೆ ಸುಮಾರು 10 ರಿಂದ 12 ಮೆಟ್ಟಿಲಿನ ಗ್ಯಾಲರಿಯಿಂದ ಆಗಾಗ್ಗೆ ಇಳಿಯುವದು ಹತ್ತುವದು ಕಷ್ಟ. ಇದನ್ನು ವ್ಯಾಪಾರಿಗಳು ಉತ್ತಮವಾಗಿಯೇ ಬಳಸಿಕೊಳ್ಳುತ್ತಾರೆ. ಬಹುತೇಕ ಅಗತ್ಯತೆಗಳು, ಟೈಮ್‍ಪಾಸ್ ‘ಐಟಂ’ಗಳು ಕುಳಿತ ಸ್ಥಳಕ್ಕೇ ಬರುತ್ತವೆ. ರೇಟ್ ಒಂದಷ್ಟು ‘ಭಾರ’ ವಾದರೂ ತರುವವರ ಶ್ರಮಕ್ಕೆ ಇಲ್ಲಿ ಮನ್ನಣೆ ಇದೆ. ಮೈಕ್, ಶಾಮಿಯಾನ ತಂಡದವರಿಗೂ ಇದೊಂದು ಉತ್ತಮ ಅವಕಾಶ.

ನಾಪೋಕ್ಲುವಿನಲ್ಲಿ ಈ ಬಾರಿ..,

ಪ್ರಸಕ್ತ ವರ್ಷ ನಾಪೋಕ್ಲುವಿನಲ್ಲಿ ನಡೆಯುತ್ತಿರುವ ಬಿದ್ದಾಟಂಡ ಕಪ್ ಹಾಕಿಯಲ್ಲೂ ಹಲವು ಮಳಿಗೆಗಳು ತೆರೆಯಲ್ಪಟ್ಟಿದ್ದು, ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಲಿರುವ ಕೊನೆಯ ದಿನಗಳಲ್ಲಿ ಇನ್ನಷ್ಟು ಮಳಿಗೆಗಳು ಪ್ರಾರಂಭಗೊಳ್ಳಲಿವೆ.

ಪ್ರಸ್ತುತ ನಾಲ್ಕು ಹೊಟೇಲ್, ಐಸ್‍ಕ್ರೀಂ ಪಾರ್ಲರ್, ಗಾರ್ಮೆಂಟ್ಸ್, ಮೂರು ಕಂಪೆನಿಗಳ ವಾಹನ ಮಳಿಗೆ ಇನ್ನಿತರ ಸಣ್ಣ ಪುಟ್ಟ ವಹಿವಾಟುಗಳು ನಡೆಯುತ್ತಿವೆ. ಪ್ರಸ್ತುತ ಸುಮಾರು 100ಕ್ಕೂ ಅಧಿಕ ಮಂದಿ ಇಲ್ಲಿ ದುಡಿಯುತ್ತಿದ್ದಾರೆ. ಈ ಬಾರಿ ಪದೇ ಪದೇ ಮಳೆಯಾಗುತ್ತಿರುವದು ವ್ಯಾಪಾರಸ್ಥರಿಗೆ ತುಸು ಅಡಚಣೆಯಾಗಿದೆ.

ಚಿತ್ರ: ದುಗ್ಗಳ