ಮಡಿಕೇರಿ, ಮೇ 5: ದೇಶಾಭಿಮಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ತಾವು ನಡೆಸಿರುವ ಒಂದು ಸಾವಿರ ಕಿ.ಮೀ. ಪಾದಯಾತ್ರೆಯ ಯಶಸ್ಸನ್ನು ಕೊಡಗಿನ ವೀರ ಯೋಧರಿಗೆ, ಕ್ರೀಡಾಪಟುಗಳಿಗೆ ಹಾಗೂ ಕೊಡಗಿನ ಜನತೆಗೆ ಸಮರ್ಪಿಸುವದಾಗಿ ಮುಂಬೈನ ಜಯಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಮೂಲತಃ ಉಡುಪಿಯ ಕಡೆಕಾರ್‍ನವನಾಗಿದ್ದು, 2003ರಲ್ಲಿ ಕೊಡಗಿಗೆ ಭೇಟಿ ನೀಡಿದ ಸಂದರ್ಭ ಈ ಪುಟ್ಟ ಜಿಲ್ಲೆಯ ಪ್ರತಿಯೊಂದು ಮನೆಯ ಒಬ್ಬ ಸದಸ್ಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವದನ್ನು ಗಮನಿಸಿದೆ. ರಾಷ್ಟ್ರೀಯ ಕ್ರೀಡೆಯಾದ ಹಾಕಿಯನ್ನು ಜಿಲ್ಲೆಯ ಜನತೆ ಹೆಚ್ಚು ಪ್ರೀತಿಸುವದರೊಂದಿಗೆ ಹಾಕಿ ತಂಡಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಪ್ರಸಕ್ತ ಕೊಡವ ಕೌಟುಂಬಿಕ ಹಾಕಿ ಮೂಲಕ ಕ್ರೀಡೆಯನ್ನು ಜೀವಂತವಾಗಿಡಲು ಇಲ್ಲಿನ ಜನತೆ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ಮಾ.25 ರಂದು ಉಡುಪಿಯಿಂದ ಮುಂಬೈಗೆ 1000 ಕಿ.ಮೀ. ಪಾದಯಾತ್ರೆಯನ್ನು ಆರಂಭಿಸಿದ್ದು, 32 ದಿನಗಳಲ್ಲಿ (ಏ.25)ಈ ಗುರಿಯನ್ನು ತಲುಪಿದ್ದೇನೆ. ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಸೇರಿದಂತೆ ಮೂರು ರಾಜ್ಯಗಳ ಮೂಲಕ ರಾಷ್ಟ್ರಧ್ವಜದೊಂದಿಗೆ ತಾನು ಪಾದಯಾತ್ರೆ ಮಾಡಿದ್ದು, ಜನರಿಂದ ಉತ್ತಮವಾದ ಸ್ಪಂದನ ದೊರಕಿದೆ ಎಂದರು.
ಪಾದಯಾತ್ರೆಯಲ್ಲಿ ತಾನು ಹಿಡಿದಿದ್ದ ರಾಷ್ಟ್ರಧ್ವಜವನ್ನು ದೇಶಕ್ಕಾಗಿ ಬಲಿದಾನ ಮಾಡಿದ ಕೊಡಗಿನ ಯೋಧರಿಗೆ, ಕ್ರೀಡಾಪಟುಗಳಿಗೆ ಹಾಗೂ ಕೊಡಗಿನ ಜನತೆಗೆ ಸಮರ್ಪಿಸುವದಾಗಿ ಇದೇ ಸಂದರ್ಭ ಹೇಳಿದರು.