ಕುಶಾಲನಗರ, ಮೇ 4: ಕುಶಾಲನಗರ ಜಯಕರ್ನಾಟಕ ಸಂಘಟನೆ ವತಿಯಿಂದ ಕೂಡಿಗೆಯ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಸಹಭೋಜನ ಕಾರ್ಯಕ್ರಮ ಮೂಲಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಜನ್ಮ ದಿನ ಆಚರಿಸಲಾಯಿತು.

ಜಯಕರ್ನಾಟಕ ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಮುರಳೀಧರ್ ನೇತೃತ್ವದಲ್ಲಿ ಸಂಘಟನೆ ವತಿಯಿಂದ ವೃದ್ಧಾಶ್ರಮದಲ್ಲಿ ಆಶ್ರಯ ಪಡೆಯುತ್ತಿರುವ 24ಕ್ಕೂ ಅಧಿಕ ವಯೋವೃದ್ಧರಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. ವಯೋವೃದ್ಧರೊಂದಿಗೆ ಸಂಘಟನೆಯ ಕಾರ್ಯಕರ್ತರು ಕೂಡ ಸಹಭೋಜನ ನಡೆಸಿ ಮುತ್ತಪ್ಪ ರೈ ಅವರ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘಟನೆಯ ಯುವ ಘಟಕದ ನಗರಾಧ್ಯಕ್ಷ ಹೆಚ್.ಆರ್. ಗುರು, ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಅವರ ಅಭಿಲಾಷೆಯಂತೆ ಯಾವದೇ ರೀತಿಯ ಅದ್ಧೂರಿ, ಆಡಂಬರದ ಆಚರಣೆಯನ್ನು ಬದಿಗಿಟ್ಟು ನಿರ್ಲಕ್ಷ್ಯಕ್ಕೊಳಗಾದ ವಯೋವೃದ್ಧರೊಂದಿಗೆ ಸಹಭೋಜನ ನಡೆಸಿ ಸರಳವಾಗಿ ಹುಟ್ಟುಹಬ್ಬ ಆಚರಿಸಲಾಗಿದೆ ಎಂದರು.

ಸಂಘಟನೆಯ ನಗರಾಧ್ಯಕ್ಷ ಮೋಹನ್, ಸಂಘಟನೆಯ ಹೋಬಳಿ ಅಧ್ಯಕ್ಷ ಜಿ.ಎನ್. ಉತ್ತಯ್ಯ, ಪದಾಧಿಕಾರಿಗಳಾದ ಪುನಿತ್, ಡಿಜೇಶ್, ದಿಲೀಪ್, ಪ್ರಶಾಂತ್, ಆಶ್ರಮದ ಮೇಲ್ವಿಚಾರಕ ಚಂದ್ರು ಮತ್ತಿತರರು ಇದ್ದರು.