ಸೋಮವಾರಪೇಟೆ, ಮೇ 4: ಇಲ್ಲಿಗೆ ಸಮೀಪದ ಗೌಡಳ್ಳಿಯ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ನಿರ್ಮಾಣವಾಗಿರುವ ಸಮುದಾಯಭವನ ಕಾಮಗಾರಿ ಪೂರ್ಣಗೊಂಡಿದ್ದು, ಜೂನ್ 9 ರಂದು ಲೋಕಾರ್ಪಣೆಗೊಳ್ಳಲಿದ್ದು, ಈ ಪ್ರಯುಕ್ತ ಸಾಮೂಹಿಕ ವಿವಾಹವನ್ನು ಉಚಿತವಾಗಿ ನಡೆಸಲಾಗುವದು ಎಂದು ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಆರ್. ಮುತ್ತಣ್ಣ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷಗಳ ಹಿಂದೆ ಗ್ರಾಮದಲ್ಲಿ ನವದುರ್ಗ ದೇವಾಲಯವನ್ನು ನಿರ್ಮಾಣ ಮಾಡಲಾಗಿತ್ತು. ಪ್ರತೀ ದಿನ ಪೂಜಾ ಕಾರ್ಯಗಳೊಂದಿಗೆ ಜಾತ್ರಾ ಮಹೋತ್ಸವ ನಡೆಸಲಾಗುತ್ತಿದೆ. ಇದರೊಂದಿಗೆ ಸುತ್ತಲಿನ ಗ್ರಾಮಸ್ಥರ ಅನುಕೂಲಕ್ಕಾಗಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಸತ್ಯನಾರಾಯಣ ಪೂಜೆ ನಡೆಯಲಿದೆ. ನಂತರ ಸಭಾ ಕಾರ್ಯಕ್ರಮ ನಡೆಯುವದು. ಈ ಸಂದರ್ಭ ಸಮುದಾಯ ಭವನಕ್ಕೆ ಸಹಾಯ ಮಾಡಿದವರನ್ನು ಸನ್ಮಾನಿಸಲಾಗುವದು ಎಂದ ಅವರು, ಮುಂದಿನ ದಿನಗಳಲ್ಲಿ ದೇವಾಲಯದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಗ್ರಾಮಸ್ಥರು ಹೆಚ್ಚಿನ ಸಹಕಾರ ನೀಡಬೇಕೆಂದರು.
ಸಮುದಾಯ ಭವನದ ನಿರ್ಮಾಣ ಸಮಿತಿ ಅಧ್ಯಕ್ಷ ಜಿ.ಎ. ಮಹೇಶ್ ಮಾತನಾಡಿ, ಉದ್ಘಾಟನಾ ಕಾರ್ಯಕ್ರಮದ ಪ್ರಯುಕ್ತ ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ವಧು-ವರರಿಗೆ ಬಟ್ಟೆ ಹಾಗೂ ತಾಳಿಯನ್ನು ನೀಡಲಾಗುವದು. ಇದರಲ್ಲಿ ಪಾಲ್ಗೊಳ್ಳುವವರು ತಾ. 20 ರೊಳಗೆ ಸೂಕ್ತ ದಾಖಲಾತಿಯೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ ಮೊ: 9448376129, 9449254454, 8762111378 ಸಂಪರ್ಕಿಸಲು ಕೋರಿದ್ದಾರೆ.
ಗೋಷ್ಠಿಯಲ್ಲಿ ಸಮುದಾಯ ಭವನ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿ.ಎಂ. ಹೂವಯ್ಯ, ಗೌರವ ಕಾರ್ಯದರ್ಶಿ ನಾಗರಾಜು, ಲೆಕ್ಕಪತ್ರ ಪರಿಶೋಧಕ ಜಿ.ಎನ್. ವೀರಭದ್ರಪ್ಪ ಉಪಸ್ಥಿತರಿದ್ದರು.