ಮಡಿಕೇರಿ, ಮೇ 4: ಹೌದು ನಮ್ಮ ದೇಶ ಸ್ವಾತಂತ್ರ್ಯ ಪಡೆದು 72 ವರ್ಷಗಳನ್ನು ದಾಟುತ್ತಿದೆ. ಹೀಗಿದ್ದರೂ ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ಶತಮಾನಗಳಿಂದ ಬದುಕು ಕಟ್ಟಿಕೊಂಡವರಿಗೆ ಸೂರಿಲ್ಲ, ನೀರಿಲ್ಲ, ಬೆಳಕಿಲ್ಲ ಸರಕಾರದ ಯಾವ ಯೋಜನೆಗಳೂ ತಲಪುತ್ತಿಲ್ಲ.

ಉಚಿತವಾಗಿ ಸರಕಾರದಿಂದ ಬಡವರಿಗೆ ಸಿಗುವ ಅಕ್ಕಿ ಕೂಡ ನಮಗೆ ಇನ್ನೂ ತಲಪಿಲ್ಲ. ಈ ತಿಂಗಳಿನಿಂದ ಅಕ್ಕಿಯಿಲ್ಲವೆಂದು ಕಳೆದ ತಿಂಗಳು ಪಡಿತರ ನೀಡುವವರೇ ಹೇಳಿ ಹೋಗಿದ್ದಾರೆ ಎಂದು ಹಾಡಿಯ ಮುಖಂಡ ನಿಂಗಣ್ಣ ಭಯದ ನಡುವೆ ಬಾಯಿಬಿಟ್ಟ.

ಅಷ್ಟರಲ್ಲಿ ಪುಟ್ಟ ಕಂದಮ್ಮಳನ್ನು ಕಂಕುಳಿನಲ್ಲಿ ಹಿಡಿದಿಟ್ಟುಕೊಂಡಿದ್ದ ಗೌರಿ ಗುಡಿಸಲೊಳಗಿಂದ ಸರ್ರನೆ ಹೊರ ಬಂದಳು. ಅಕ್ಕಿ ಏನು ಸ್ವಾಮಿ.., ‘ನಾನು ಕಲಿಯುತ್ತಿದ್ದ ಅಂಗನವಾಡಿ ಇಂದು ನಮ್ಮ ಮಕ್ಕಳಿಗೆ ಇಲ್ಲ.., ಆ ಜಾಗ ಕಾಡು ಪಾಲಾಗಿದೆ ನೋಡಿ’ ಎಂದಳು.

ಗೌರಿಯ ಮಾತಿನಲ್ಲಿ ನೋವಿತ್ತು. ಆಕೆ ಹೇಳಿದ ಕಡೆ ನಿಂಗಣ್ಣ ನಮ್ಮನ್ನು ಕರೆದೊಯ್ದು, ಕಲ್ಲಿನ ಅಡಿಪಾಯ ಹಾಕಿ ಕಾಡು ಬೆಳೆದಿರುವ ಜಾಗದಲ್ಲಿ ನಿಂತು, ಇದು ಅಂದು ಗೌರಿ ಮಗುವಿದ್ದಾಗ ಇದ್ದಂತಹ ಅಂಗನವಾಡಿ ಎಂದು ಕುರುಹು ತೋರಿಸಿದರು.

ಅಲ್ಲಿಂದ ವಾಪಾಸಾಗುವಷ್ಟರಲ್ಲಿ ಗೌರಿಯ ಗುಡಿಸಲು ಬಳಿ ನಾಲ್ಕೈದು ವರ್ಷದೊಳಗಿನ ಹತ್ತಾರು ಮಕ್ಕಳು ಗುಂಪುಗೂಡಿ ಎಲ್ಲವನ್ನು ಕುತೂಹಲದಿಂದ ನೋಡತೊಡಗಿದರು. ಗೌರಿ ಮಾತು ಮುಂದುವರಿಸುತ್ತಾ, ಸ್ವಾಮಿ ನಾನು ಮದುವೆಯಾಗಿ 2 ಮಕ್ಕಳ ತಾಯಿ. ಈ ಮಗುವಿಗೆ ಗರ್ಭಧರಿಸಿ, ಹುಟ್ಟಿ ಐದು ತಿಂಗಳಾಯಿತು. ಇದುವರೆಗೆ ಯಾರೊಬ್ಬರು ಇತ್ತ ಸುಳಿಯಲಿಲ್ಲ ಎಂದಳು. ನನ್ನ ದೊಡ್ಡ ಮಗು ಹುಟ್ಟಿದಾಗ ಇಲ್ಲೊಬ್ಬಳು ಆಗೊಮ್ಮೆ ಈಗೊಮ್ಮೆ ಬಂದು ಒಂದು ಹಿಡಿ ಕಾಳು ಕಡ್ಡಿ ನೀಡಿ ಹೋಗುತ್ತಿದ್ದಳು. ಈಚಿನ ವರ್ಷಗಳಲ್ಲಿ ಯಾರೂ ಇತ್ತ ಸುಳಿಯುತ್ತಲೇ ಇಲ್ಲ ಎಂದು ದುಃಖ ತೋಡಿಕೊಂಡಳು.

ಅಷ್ಟರಲ್ಲಿ ಗಂಡ ರವಿ ಬಾಡಿದ ಮೊಗದೊಂದಿಗೆ ಮೌನ ಮುರಿದು ನಮ್ಮ ಗುಡಿಸಲು ಬಳಿ ನಿತ್ಯ ಆನೆಗಳು ಓಡಾಡುತ್ತಿವೆ, ಗುಡಿಸಲಿನಿಂದ ಮಕ್ಕಳನ್ನು ಹೊರಬಿಡಲು ಆಗದೆ ರಾತ್ರಿ - ಹಗಲು ಜೀವ ಕೈಲಿ ಹಿಡಿದುಕೊಂಡು ಬದುಕುತ್ತಿದ್ದೇವೆ ಎಂದ.

ಈ ಹೊತ್ತಿಗೆ ಎಂಟನೆ ತರಗತಿ ತನಕ ಓದಿ ಮುಂದೆ ಓದಲಾರದೆ ಗುಡಿಸಲೊಳಗಿರುವ ಬಾಲೆಯರ ಸಹಿತ ಬಾಲಕರ ಹಿಂಡು ಅಲ್ಲಿ ಕಾಣಿಸಿಕೊಂಡಿತು. ಸರಕಾರದಿಂದ ಕಿಶೋರಿಯರಿಗೆ ಲಭಿಸುವ ಪೌಷ್ಠಿಕ ಆಹಾರ ಲಭಿಸುತ್ತಿದೆಯೇ ಎಂದಾಗ, ಶಿಶುಗಳು - ಬಾಣಂತಿಯರಿಗೆ ಏನೂ ಕೊಡದಿರುವಾಗ ಬೇರೆ ಯಾರಿಗೆ ಕೊಡುತ್ತಾರೆ ಎಂದು ಗೌರಿ ಮತ್ತೆ ಪ್ರಶ್ನಿಸಿದಳು.

ಚಿಕ್ಲಿಹೊಳೆ ದಂಡೆಯಲ್ಲಿರುವ ಕಟ್ಟೆಪುರ ಹಾಡಿಯ ಮಂದಿಯ ಕರಾಳ ಬದುಕಿನ ಭಾವನೆಗಳು ಈ ರೀತಿ ಒಂದೊಂದಾಗಿ ಬಿಚ್ಚಿಕೊಳ್ಳ ತೊಡಗಿದಾಗ, ಸಂಜೆಗತ್ತಲೆಯ ನಡುವೆ ನಮಗೂ ಕಾಡಾನೆಯ ಭಯ ಹುಟ್ಟಿಕೊಂಡು ಅಲ್ಲಿ - ಇಲ್ಲಿ ಗುಡಿಸಲುಗಳಿಂದ ಮಿಣುಕುತ್ತಿದ್ದ ಸೌರ ವಿದ್ಯುತ್ ದೀಪದ ಬೆಳಕಿನಲ್ಲಿ, ನಾಯಿಗಳ ಬೊಗಳುವಿಕೆ ನಡುವೆ ರಸ್ತೆಯಲ್ಲಿ ನಿಲ್ಲಿಸಿ ಹೋಗಿದ್ದ ವಾಹನದೆಡೆಗೆ ಹೆಜ್ಜೆ ಹಾಕಿದೆವು.

ತನ್ನ ಕಂಕಳುವಿನಲ್ಲಿದ್ದ ಪುಟ್ಟ ಮಗುವಿನ ಸಹಿತ ಹಾಡಿ ಮಂದಿಯೊಡನೆ ನಮ್ಮನ್ನು ಹಿಂಬಾಲಿಸಿದ ಗೌರಿ, ಸ್ವಾಮಿ ಏನಾದರೂ ಮಾಡಿ, ನಮಗೆ ನ್ಯಾಯಕೊಡಿಸಿ, ನಮ್ಮ ಮಕ್ಕಳಿಗೆ ಈ ಅಂಗನವಾಡಿ ಪ್ರಾರಂಭಿಸಿ ಎಂದು ಕೂಗಿ ಹೇಳಿದಳು.

ಆಕೆಯ ಕೂಗು ಸಂಬಂಧಪಟ್ಟವರಿಗೆ ಕೇಳುವಂತೆ ಮಾಡಲೇಬೇಕು, ಇಂತಹ ಹಾಡಿಗಳು ಜಿಲ್ಲೆಯಲ್ಲಿ ಅದೆಷ್ಟು ಇದ್ದು, ಮುಗ್ಧರ ಹೆಸರಿನಲ್ಲಿ ತಿಂದು ತೇಗುವವರಿಗೆ ಏನೂ ಅನ್ನಿಸದೇ ಎಂದು ನನ್ನೊಡನೆ ಸತೀಶ ಆಕ್ರೋಶದಿಂದ ಪ್ರಶ್ನಿಸಿದ. ನಾನು ಮೌನದೊಂದಿಗೆ ನಿಟ್ಟುಸಿರುಬಿಟ್ಟೆ.

- ಶ್ರೀಸುತ