ವೀರಾಜಪೇಟೆ, ಮೇ 4: ಓದಿನ ಬಳಿಕ ಉದ್ಯೋಗ ಅರಸಿ ನಗರಕ್ಕೆ ಯುವ ಜನತೆ ತೆರಳುವ ಬದಲು ಕೊಡಗಿನ ಜೀವನಾಡಿ ಕೃಷಿಯನ್ನು ಉಳಿಸಿ ಬೆಳೆಸಿ. ಇದರೊಂದಿಗೆ ಆರ್ಥಿಕವಾಗಿ ಸದೃಢರಾಗಿ, ನಮ್ಮ ಭೂಮಿಯನ್ನು ಖಾಲಿ ಬಿಡದೆ ಹಸಿರನ್ನು, ಜಲವನ್ನು ಉಳಿಸುವ ಮೂಲಕ ಪ್ರಕೃತಿಯನ್ನು ಉಳಿಸಿ ಬೆಳೆಸಿ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್ ಹೇಳಿದರು.
ವೀರಾಜಪೇಟೆ ಪುರಭವನದಲ್ಲಿ ಜಿಲ್ಲಾ.ಪಂಚಾಯಿತಿ , ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ , ಮಡಿಕೇರಿ ಕೈಗಾರಿಕೆÀ ವಿಭಾಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಒಂದು ದಿನದ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಉದ್ಯಮ ಶೀಲತಾ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಹರೀಶ್ ಅವರು ಕೈಗಾರಿಕೆ ಎಂಬದು ಇಂದು ಆರ್ಥಿಕ ಬೆನ್ನೆಲುಬು ಆಗಿದೆ, ಸ್ವ ಬಂಡವಾಳದ ಮೂಲಕ ಆರಂಭಿಸುವ ಕೈಗಾರಿಕೆ ಅನೇಕರಿಗೆ ಉದ್ಯೋಗ ಕಲ್ಪಿಸುತ್ತದೆ.. ಜೊತೆಗೆ ಕೈಗಾರಿಕೆಗಳ ತೆರಿಗೆಯಿಂದ ಆರ್ಥಿಕ ವ್ಯವಸ್ಥೆಗೂ ಬಲ ಬರುತ್ತದೆ. ಕೊಡಗಿನಲ್ಲಿ ದೊಡ್ಡ ನಗರಗಳÀಂತೆ ದೊಡ್ಡ ಕೈಗಾರಿಕಾ ಘಟಕಗಳು ಇಲ್ಲದಿದ್ದರೂ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿ ಆರ್ಥಿಕತೆಯ ಸುಧಾರಣೆಯನ್ನು ತರುವಂತಾಗಬೇಕು ಎಂದರು.
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಕೈಗಾರಿಕೆ ಸಮಿತಿ ಅಧ್ಯಕ್ಷ ಬಿ.ಎನ್. ಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕೊಡಗಿನಲ್ಲಿ ಸಣ್ಣ ಉದ್ದಿಮೆಗೆ ಧಾರಾಳವಾದ ಅವಕಾಶವಿರುವದರಿಂದ ಉತ್ತಮವಾದ ಉತ್ಪನ್ನಗಳು ತಯಾರಾಗುತ್ತಿವೆ ಇದರಲ್ಲಿ ಗೃಹ ಉತ್ಪನ್ನಗಳು ಸೇರಿವೆ. ಜನರಲ್ಲಿನ ಸಣ್ಣ ಉದ್ದಿಮೆ ಸ್ಥಾಪನೆಯ ಕನಸನ್ನು ನನಸಾಗಿ ಸಾಕಾರಗೊಳಿಸಲು ಇಲಾಖೆಯ ಅಧಿಕಾರಿಗಳು ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು..
ಅತಿಥಿಯಾಗಿ ಭಾಗವಹಿಸಿದ್ದ ಕೊಡಗು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಹೆಚ್. ರಾಮಕೃಷ್ಣೆ ಗೌಡ ಮಾತನಾಡಿ, ಮಾಯಮುಡಿಯ ಮಡಿಕೆ ಬೀಡಿನಲ್ಲಿ ಹಂಚು ಕೈಗಾರಿಕೆ ಮೂಲೆ ಗುಂಪಾಗಿ, ಕಾಡು ಬೆಳೆದು ನಿಂತಿದೆ. ಈ ಸಂಬಂಧ ಇಲಾಖೆ ಆಯುಕ್ತರೊಂದಿಗೆ ಚರ್ಚೆ ನಡೆಸಿದ್ದು ಅಲ್ಲಿನ ಬೇಡಿಕೆಗನುಗುಣವಾಗಿ 40ರಿಂದ 50 ಸಣ್ಣ ಕೈಗಾರಿಕಾ ಘಟಕಗಳ ನಿವೇಶನವಾಗಿ ಪರಿವರ್ತಿಸಿ ಸಣ್ಣ ಕೈಗಾರಿಕೆ ಅಭಿವೃದ್ದಿ ನಿಗಮದಿಂದ ಯೋಜನೆ ಕಾರ್ಯ ರೂಪಕ್ಕೆ ಶೀಘ್ರವಾಗಿ ಬರಲಿದೆ. ಅದೇ ರೀತಿ ಕಕ್ಕಬೆಯಲ್ಲಿ ಫುಡ್ ಕ್ಲಸ್ಟರ್ ಕೇಂದ್ರಕ್ಕೂ ಚಾಲನೆ ನೀಡಲಾಗುವದು. ಇದರಲ್ಲಿ ಉದ್ಯೋಗಕ್ಕೆ ಮಹಿಳೆಯರಿಗೆ ಆದ್ಯತೆ ನೀಡಲಾಗುವದು. ಇಲಾಖೆಯ ಬಳಿ ಸುಮಾರು ಮೂರು ಏಕ್ರೆ ಜಾಗವಿದೆ ಇದರಲ್ಲಿ ಹನಿ ಕ್ಲಸ್ಟರ್ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಕೂಡಿಗೆಯಲ್ಲಿ ಕೈಗಾರಿಕಾ ಬಡಾವಣೆ ಭರ್ತಿಯಾದ ಕಾರಣ ಸೋಮವಾರಪೇಟೆಯಲ್ಲಿ ಕೈಗಾರಿಕಾ ಬಡಾವಣೆಗೆ ಜಾಗ ಗುರುತಿಸಲಾಗಿದೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಸ್ಲಿಂ ಅಕ್ತರ್, ಕೊಡಗು ಜಿಲ್ಲಾ ತೋಟಗಾರಿಕ ಇಲಾಖೆಯ ಸಹಾಯಕ ನಿರ್ದೇಶಕ ಗುರುರಾಜು, ಸಾವಯವ ಕೃಷಿ ಸಹಕಾರಿ ಸೌಹಾರ್ದ ನಿಗಮದ ಅಧ್ಯಕ್ಷ ಎಂ. ಕಾಳಿದಾಸ್ ರಾಜ್ ಸಭೆಯನ್ನುಉದೇಶಿಸಿ ಮಾತನಾಡಿ ದರು. ಸಮಾರಂಭದ ಅಧ್ಯಕ್ಷತೆಯನ್ನು ತಾ ಪಂ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ವಹಿಸಿದ್ದರು. ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಎಸ್.ಎಚ್ ಮತೀನ್ ಹಾಗೂ ಎಸ್.ಎಚ್. ಮೊಹಿನುದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.