ಮಡಿಕೇರಿ, ಮೇ 5: ಯುಗ ಯುಗಗಳಿಂದ ಬೆಳೆದು ಬಂದಿರುವ ಸನಾತನ ಹಿಂದೂ ಧರ್ಮವನ್ನು ಗೌರವಿಸುವದರಿಂದ ಮಾತ್ರ ಜಗತ್ತಿನ ಕಲ್ಯಾಣದೊಂದಿಗೆ ಸಾಮರಸ್ಯದ ಬದುಕು ಕಂಡುಕೊಳ್ಳಲು ಮನುಕುಲಕ್ಕೆ ಸಾಧ್ಯವೆಂದು, ವಿ.ಹಿಂ.ಪ. ಅಂತರ್ರಾಷ್ಟ್ರೀಯ ಸಹ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್ ಪ್ರತಿಪಾದಿಸಿದರು.ಕೊಡಗು ವಿ.ಹಿಂ.ಪ. ಹಾಗೂ ಭಜರಂಗದಳ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಜೈನ್, ಅನ್ಯಮತೀಯರು ಸನಾತನ ಹಿಂದೂ ಧರ್ಮ, ರಾಷ್ಟ್ರೀಯ ಮಾನಬಿಂಧುಗಳು ಹಾಗೂ ಹಿಂದೂ ದೇವರುಗಳ ಮೇಲಿನ ವಿಡಂಬನೆ ಅಥವಾ ಅಪಮಾನ ಮಾಡುವದನ್ನು ಸಹಿಸುವದಿಲ್ಲವೆಂದು ಎಚ್ಚರಿಸಿದರು.ನೆಲ್ಲಿಹುದಿಕೇರಿ ಕಾವೇರಿ ತಟದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಸಿಲಿನ ತಾಪವನ್ನು ಲೆಕ್ಕಿಸದೆ ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತು ಮುಂದುವರಿಸಿದ ಅವರು, ಎಲ್ಲಾ ಮತ ಧರ್ಮಿಯರಿಗೆ ನೆಮ್ಮದಿಯ ಬದುಕು ಕೊಟ್ಟಿರುವ ಭಾರತದಲ್ಲಿ, ಬಹುಕೋಟಿ ಹಿಂದೂಗಳನ್ನು ಮತಾಂತರ ಗೊಳಿಸುವದು ಮತ್ತು ಭಯೋತ್ಪಾದನೆ ಯಿಂದ ಬೆದರಿಸುವ ಆಟ ನಡೆಯ ದೆಂದು ಗುಡುಗಿದರು.
ಮೊಘಲರ ಧಾಳಿ ಸೇರಿದಂತೆ ಬ್ರಿಟೀಷ್ ಆಳ್ವಿಕೆಯ ಈ ದೇಶದಲ್ಲಿ ಹೇಗೆ ಕೊನೆಗೊಂಡಿತು ಎಂದು ನೆನಪಿಸಿದ ಸುರೇಂದ್ರ ಜೈನ್, ಜಾಗತಿಕ ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸುವ ತಾಕತ್ತು ಭಾರತಕ್ಕಿದ್ದು, ಗಡಿಯಾಚೆಯ ಭಯೋತ್ಪಾದನೆಗೆ
(ಮೊದಲ ಪುಟದಿಂದ) ದೇಶದ ಸೈನಿಕರು ‘ಸರ್ಜಿಕಲ್ ಸ್ಟ್ರೈಕ್’ ಮೂಲಕ ಉತ್ತರಿಸಿದ ಸೂಕ್ಷ್ಮವನ್ನು ವಿರೋಧಿಗಳು ಅರ್ಥೈಸಿ ಕೊಂಡರೆ ಅದು ಅವರಿಗೂ ಕ್ಷೇಮವೆಂದು ಕಿವಿಮಾತು ಹೇಳಿದರು.
ಶ್ರೀರಾಮ ಮಂದಿರ
ಬ್ರಿಟೀಷ್ ಆಳ್ವಿಕೆ ದಿನಗಳಲ್ಲಿ ಹಾಗೂ ಸ್ವಾತಂತ್ರ್ಯ ದಿನಗಳಿಂದ ಇದುವರೆಗೂ ಶ್ರೀ ರಾಮ ಜನ್ಮ ಸ್ಥಳ ಅಯೋಧ್ಯೆಯಲ್ಲಿ ರಾಮದೇಗುಲವಿದ್ದು, ಮುಂದೆಯೂ ಇರಲಿದೆ ಎಂದು ವ್ಯಾಖ್ಯಾನಿಸಿದ ಅವರು, ಭವ್ಯ ಮಂದಿರ ನಿರ್ಮಾಣವನ್ನು ಜಗತ್ತಿನ ಯಾವ ಶಕ್ತಿಯೂ ತಡೆಯಲು ಅಸಾಧ್ಯವೆಂದು ಘೋಷಿಸಿದರು.
ಹಿಂದೂಗಳೊಂದಿಗೆ ಎಲ್ಲಾ ಮತಾನುಯಾಯಿಗಳು ಸಾಮರಸ್ಯದ ಬದುಕು ಬಯಸಿದರೆ, ಸ್ವಾಗತಿಸುವದಾಗಿ ನುಡಿದ ಅವರು, ಭಾರತೀಯ ಮುಸ್ಲಿಮರಿಗೆ ಡಾ. ಎಪಿಜೆ ಅಬ್ದುಲ್ ಕಲಾಂರಂತಹ ಮಾಜಿ ರಾಷ್ಟ್ರಪತಿ ‘ರೋಲ್ ಮಾಡೆಲ್’ ಆಗಬೇಕೆಂದು ವ್ಯಾಖ್ಯಾನಿಸಿದರು.
ನಮ್ಮ ಮರೆವು ತರವಲ್ಲ
ಭಜರಂಗದಳ ದಕ್ಷಿಣ ಭಾರತ ಸಂಯೋಜಕ ಸೂರ್ಯನಾರಾಯಣ ಅವರು ಈ ಸಂದರ್ಭ ಮಾತನಾಡಿ, ನಮ್ಮ ಮೈ ಮರೆವು ದೇಶದ ಇಂದಿನ ಎಲ್ಲಾ ಸವಾಲುಗಳಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸುತ್ತಾ, ಹಿಂದೂಗಳು ಮೈಕೊಡವಿ ಎದ್ದರೆ ಜಾಗತಿಕ ಭಯೋತ್ಪಾದನೆ ಹಾಗೂ ಮತಾಂತರ, ಗೋಹತ್ಯೆ ತಡೆಗಟ್ಟುವದು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಮೋದಿ ಅಭಿನಂದನಾರ್ಹರು
ವಿ.ಹಿಂ.ಪ. ರಾಜ್ಯ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಈ ಸಂದರ್ಭ ಮಾತನಾಡಿ, ಭಾರತದ ಆಂತರಿಕ ಭದ್ರತೆ ಹಾಗೂ ಗಡಿಯಾಚೆಯ ಭಯೋತ್ಪಾದನೆ ಹತ್ತಿಕ್ಕುವಲ್ಲಿ ಪ್ರಧಾನಿ ನರೇಂದ್ರ ಮೋದಿ ದಿಟ್ಟತನ ಪ್ರದರ್ಶಿಸಿರುವದು ಅಭಿನಂದನೀಯ ಎಂದು ಶ್ಲಾಘಿಸಿದರು. ಕೊಡಗು ಆರ್ಎಸ್ಎಸ್ ಮುಖಂಡ ಮಚ್ಚಾರಂಡ ಸಿ. ಮಣಿ ಕಾರ್ಯಪ್ಪ ಈ ಸಂದರ್ಭ ಮಾತನಾಡಿ, ‘ಸರ್ಜಿಕಲ್ ಸ್ಟ್ರೈಕ್’ ಮಾದರಿ ರಾಷ್ಟ್ರದ್ರೋಹಿಗಳನ್ನು ಸದಾ ಬಗ್ಗು ಬಡಿಯಬೇಕೆಂದು ಆಗ್ರಹಿಸುತ್ತಾ, ಭಾರತದ ಸೈನಿಕರ ಬಲಿದಾನ ವ್ಯರ್ಥವಾಗದಂತೆ ಕಾರ್ಯಾಚರಣೆ ಅಗತ್ಯವೆಂದು ಪ್ರತಿಪಾದಿಸಿದರು.
ಧರ್ಮಾಭಿಮಾನ ಅಗತ್ಯ
ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡುತ್ತಾ, ಪ್ರತಿಯೊಬ್ಬ ಹಿಂದೂವಿಗೂ ಧರ್ಮಾಭಿಮಾನ ಅಗತ್ಯವೆಂದು ಕರೆ ನೀಡಿದರು. ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಶ್ರೀ ಬೋಧಸ್ವರೂಪಾನಂದ ಮಹಾರಾಜ್, ಸ್ವಾಮಿ ವಿವೇಕಾನಂದರ ದೂರದೃಷ್ಟಿಯಂತೆ ಭಾರತವು ಮತ್ತೆ ವಿಶ್ವಗುರುವಾಗಿ ಕಂಗೊಳಿಸುವ ದಿನ ಸಮೀಪಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ವಿ.ಹಿಂ.ಪ. ಹಾಗೂ ಭಜರಂಗದಳದ ರಾಜ್ಯ ಮತ್ತು ವಿಭಾಗ ಪ್ರಮುಖರುಗಳಾದ ಕೃಷ್ಣಮೂರ್ತಿ, ರಘು, ಟಾಟಾ ಬೋಪಯ್ಯ, ಆರ್ಎಸ್ಎಸ್ ಸಂಘಚಾಲಕ ಮನು ಕಾವೇರಪ್ಪ, ಹಿಂ.ಜಾ.ವೇ.ಯ ಜೀವನ್ ಹಾಗೂ ವಿವಿಧ ಸಮಾಜಗಳ ಪ್ರತಿನಿಧಿಗಳು ಹಿಂದೂ ಸಂಘಟನೆಗಳ ಪ್ರಮುಖರು ಆಸೀನರಾಗಿದ್ದರು. ವಿ.ಹಿಂ.ಪ. ಕಾರ್ಯದರ್ಶಿ ಡಿ. ನರಸಿಂಹ ನಿರೂಪಿಸಿದರು. ಭಜರಂಗದಲ ಸಂಚಾಲಕ ಎನ್.ಕೆ. ಅಜಿತ್ಕುಮಾರ್ ಸ್ವಾಗತ, ನಾಣಮಂಡ ವೇಣು ಮಾಚಯ್ಯ ಗೀತೆ, ಉದ್ದಪಂಡ ಜಗತ್ ವಂದನಾರ್ಪಣೆ ನೆರವೇರಿಸಿದರು.