ಮಡಿಕೇರಿ, ಮೇ 5: ಕಾಫಿ ಬೆಳೆಗಾರರ ಹಿತ ಕಾಪಾಡಲು ಮೊದಲ ಆದ್ಯತೆ ನೀಡುವದಾಗಿ ಕಾಫಿ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಚಿಕ್ಕಮಗಳೂರು ಜಿಲ್ಲೆಯವರಾದ ಎಂ.ಎಸ್. ಬೋಜೇಗೌಡ ಅವರು ಇಂಗಿತ ವ್ಯಕ್ತಪಡಿಸಿದ್ದಾರೆ. ಇದೇ ಮೊದಲ ಬಾರಿಗೆ ಬೆಳೆಗಾರರೊಬ್ಬರನ್ನು ಮಂಡಳಿಯ, ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ತನಕ ಹಿರಿಯ ಅಧಿಕಾರಿಗಳೇ ಮಂಡಳಿಯ ಅಧ್ಯಕ್ಷರಾಗಿರುತ್ತಿದ್ದು, ಇದೀಗ ಹಿರಿಯ ಅಧಿಕಾರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದು, ಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ಶ್ರೀವತ್ಸ ಕೃಷ್ಣ ನಿಯೋಜಿತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಮಿತಿ ಈ ಆದೇಶ ಹೊರಡಿಸಿದೆ.
‘ಶಕ್ತಿ’ಯೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಬೋಜೇಗೌಡ ಅವರು ಬೆಳೆಗಾರರ ಹಿತ ಕಾಪಾಡುವದು ತಮ್ಮ ಮೊದಲ ಆದ್ಯತೆ, ಕಾಫಿಯಲ್ಲಿ ಕ್ವಾಲಿಟಿ, ಕ್ವಾಂಟಿಟಿ ಹಾಗೂ ಸ್ಪೆಷಾಲಿಟಿ ಈ ಮೂರು ಪ್ರಮುಖವಾಗಿದ್ದು, ಬೆಳೆಗಾರರು ಈ ಮೂರು ಅಂಶಗಳನ್ನು ಪಾಲಿಸಿದರೆ, ಹೆಚ್ಚು ಪ್ರಯೋಜನಕಾರಿಯಾಗುತ್ತದೆ.
ಬೆಳೆಗಾರರೊಂದಿಗೆ ಉದ್ಯಮಿಗಳು, ಬಳಕೆದಾರರು ಕೂಡ ಪ್ರಮುಖ ಪಾತ್ರ ವಹಿಸುತ್ತಾರೆ. ಇವರ ಹಿತವನ್ನು ಕಾಯುವದರೊಂದಿಗೆ ಕಾರ್ಮಿಕರ ಕುರಿತು ಚಿಂತನೆ ನಡೆಸಬೇಕು. ಜಾಗತಿಕವಾಗಿ ಭಾರತದ ಕಾಫಿ ಉತ್ತಮವಾಗಿದ್ದಲ್ಲಿ ಮಾತ್ರ ಚೇತರಿಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.
ವಾತಾವರಣದ ಏರುಪೇರು, ನೀರಿನ ಸಮಸ್ಯೆ, ಕಾರ್ಮಿಕರ ಕೊರತೆಯಂತಹ ಹಲವಾರು ಸಮಸ್ಯೆಗಳನ್ನು ಬೆಳೆಗಾರರು ಎದುರಿಸುತ್ತಿದ್ದಾರೆ. ಇವೆಲ್ಲದರ ಬಗ್ಗೆ ಸರಕಾರ ಹಾಗೂ ಬೆಳೆಗಾರರ ನಡುವೆ ಸೇತುವೆಯಾಗಿ ಕೆಲಸ ನಿರ್ವಹಿಸುವದಾಗಿ ಅವರು ಹೇಳಿದರು.
ಕೆಜಿಎಫ್, ಕೆಪಿಎ, ಉಪಾಸಿ ಸೇರಿದಂತೆ ಬೆಳೆಗಾರರ ಸಂಘಟನೆಗಳ ಪ್ರಮುಖರೊಂದಿಗೆ ಚರ್ಚಿಸಿ ಬೇಕು - ಬೇಡಗಳ ಬಗ್ಗೆ ನಿರ್ಧರಿಸಿ ಸರಕಾರದ ಗಮನ ಸೆಳೆಯುವದಾಗಿ ತಿಳಿಸಿದ ಅವರು, ಕೊಡಗು ಜಿಲ್ಲೆಗೂ ಭೇಟಿ ನೀಡಲಿರುವದಾಗಿ ಹೇಳಿದರು.
ಸ್ವತಃ ಕಾಫಿ ಬೆಳೆಗಾರರಾಗಿರುವ ಬೋಜೇಗೌಡ ಅವರು ಈ ಹಿಂದೆ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಎರಡು ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಈ ಹಿಂದೆ ಎಂಎಲ್ಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪಮತದಿಂದ ಸೋಲುಕಂಡಿದ್ದರು.