ಸಿದ್ದಾಪುರ, ಮೇ 4: ಮಹಿಳೆಯರು ರ್ಯಾಲಿಯಲ್ಲಿ ಧೈರ್ಯದಿಂದ ತೊಡಗಿಸಿಕೊಳ್ಳಬೇಕೆಂದು ಖ್ಯಾತ ರ್ಯಾಲಿ ಪಟು 21 ವರ್ಷ ಪ್ರಾಯದ ಹರ್ಷಿತಾ ಗೌಡ ಅಭಿಪ್ರಾಯಪಟ್ಟರು.
ಸಿದ್ದಾಪುರದ ಮಡಿಕೇರಿ ರಸ್ತೆಯ ರಿವರ್ ಸೈಡ್ ತೋಟದ ಗದ್ದೆಯಲ್ಲಿ ಏರ್ಪಡಿಸಲಾಗಿದ್ದ ಆಟೋಕ್ರಾಸ್ ರ್ಯಾಲಿಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದುಕೊಂಡ ಬಳಿಕ ‘ಶಕ್ತಿ’ಯೊಂದಿಗೆ ಅಭಿಪ್ರಾಯವನ್ನು ಹಂಚಿಕೊಂಡರು.
ಕಳೆದ 6 ವರ್ಷಗಳಿಂದ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದು, ಚೆನೈ, ಕೊಯಂಬತ್ತೂರು, ನಾಸಿಕ್ ಸೇರಿದಂತೆ ವಿವಿಧೆಡೆಯಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ್ದೇನೆ. ಇಂಡಿಯನ್ ನ್ಯಾಷನಲ್ ರ್ಯಾಲಿಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದು, ಏಷ್ಯ ಫೆಸಿಫಿಕ್ ರ್ಯಾಲಿಯಲ್ಲಿ ವಿದೇಶಿಗರೊಂದಿಗೆ ಸ್ಪರ್ಧೆ ನೀಡಿದ್ದೇನೆ ಎಂದರು.
ತನ್ನ ಕುಟುಂಬದ ಸಹಕಾರ, ಪುರುಷರಿಗಿಂತಲೂ ವೇಗವಾಗಿ ರ್ಯಾಲಿ ಪಟುವಾಗಿ ಬೆಳೆಸಬೇಕೆಂಬ ತಂದೆಯ ಪ್ರೋತ್ಸಾಹ ನನಗೆ ಶ್ರೀರಕ್ಷೆ ಎಂದರು. ಮೂಲತಃ ಮಡಿಕೇರಿ ಸಮೀಪದ ಬಿಳಿಗೇರಿ ಗ್ರಾಮದ ರಾಜಶೇಖರ್ ಗೌಡ ಹಾಗೂ ಮಂಜು ದಂಪತಿಗಳ ಪುತ್ರಿಯಾಗಿರುವ ಹರ್ಷಿತಾ ಗೌಡ ಬೆಂಗಳೂರಿನಲ್ಲಿ ನೆಲೆಸಿದ್ದು, ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಹೊಟೇಲ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡುತ್ತಿದ್ದಾರೆ. ಸಿದ್ದಾಪುರದಲ್ಲಿ ನಡೆದ ಆಟೋಕ್ರಾಸ್ ರ್ಯಾಲಿಯಲ್ಲಿ ಅದ್ಭುತವಾಗಿ ವಾಹನ ಚಾಲನೆ ಮಾಡಿದ ಹರ್ಷಿತಾ ಪ್ರೇಕ್ಷಕರಿಂದ ಚಪ್ಪಾಳೆಯನ್ನು ಗಿಟ್ಟಿಸಿಕೊಂಡರು. ಹರ್ಷಿತಾ ತಂದೆ ರಾಜಶೇಖರ್ ಗೌಡ ಕೂಡ ರ್ಯಾಲಿ ಪಟುವಾಗಿದ್ದು, ದೇಶದ ವಿವಿಧೆಡೆಗಳಲ್ಲಿ ನಡೆದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.
- ವಾಸು ಆಚಾರ್ಯ