ಮಡಿಕೇರಿ, ಮೇ 4: ಗ್ರಾಮಸ್ಥರು ಒಗ್ಗೂಡಿ ಬಾಳುವ ಮೂಲಕ ಗ್ರಾಮ ಸ್ವರಾಜ್ಯದಿಂದ ರಾಮ ರಾಜ್ಯದ ಕನಸು ಸಾಕಾರಗೊಳಿಸುವ ದಿಸೆಯಲ್ಲಿ ಪರಸ್ಪರ ನಂಬಿಕೆಯಿಂದ ಬಾಳಬೇಕೆಂದು ‘ಶಕ್ತಿ’ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್ ಕರೆ ನೀಡಿದರು.
ಮುಟ್ಲು ಗ್ರಾಮದಲ್ಲಿ ಶ್ರೀ ಮಂಜುನಾಥ ಯುವಕ ಸಂಘ ಹಾಗೂ ಸ್ತ್ರೀಶಕ್ತಿ ಮಂಡಳಿ, ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಡಿಕೇರಿ ತಾ.ಪಂ. ಸದಸ್ಯ ಮುದ್ದಂಡ ರಾಯ್ ತಮ್ಮಯ್ಯ ಈ ಸಂದರ್ಭ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಗ್ರಾಮ ಜೀವನದಿಂದ ಪಟ್ಟಣಗಳಿಗೆ ವಲಸೆ ಹೋಗದಂತೆ ಸಲಹೆ ನೀಡಿದರು. ಹಿಂದಿನ ಪದ್ಧತಿ, ಪರಂಪರೆ, ಮಂದ್-ಮಾನಿಗಳನ್ನು ಚಟುವಟಿಕೆಯ ತಾಣವಾಗಿ ಉಳಿಸಿಕೊಳ್ಳಬೇಕಾದರೆ ಗ್ರಾಮೀಣ ಬದುಕು ಅಗತ್ಯವೆಂದು ಅವರು ನೆನಪಿಸಿದರು.
ಬೆಳಿಗ್ಗೆ ಆರಂಭಗೊಂಡ ಕ್ರೀಡಾಕೂಟಕ್ಕೆ ಗ್ರಾ.ಪಂ. ಸದಸ್ಯ ಮೊಣ್ಣಂಡ ಕಾಶಿ ರಮೇಶ್ ಚಾಲನೆ ನೀಡಿ ಶುಭ ಹಾರೈಸಿದರು. ಮಹಿಳೆಯರು ಹಾಗೂ ಪುರುಷರಿಗೆ ವಾಲಿಬಾಲ್, ಕಬಡ್ಡಿ, ಬಾರದಗುಂಡು ಎಸೆತ, ರಸ್ತೆ ಓಟದೊಂದಿಗೆ ಮಹಿಳೆಯರಿಗೆ ಪ್ರತ್ಯೇಕ ಸಂಗೀತ ಕುರ್ಚಿ, ಥ್ರೋಬಾಲ್ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಮಕ್ಕಳಿಗೆ ಓಟ, ಕಪ್ಪೆ ಜಿಗಿತ, ಕಾಳು ಹೆಕ್ಕುವದು ಮುಂತಾದ ಸ್ಪರ್ಧೆಯೊಂದಿಗೆ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಗ್ರಾಮದ ಹಿರಿಯ ಯು.ಸಿ. ದೇವಯ್ಯ, ದಾನಿ ಉದಿಯಂಡ ರಘು ಪೂವಯ್ಯ, ಯುವ ಸಂಘದ ಅಧ್ಯಕ್ಷ ಎಂ.ಡಿ. ನೇತ್ರು, ಸ್ತ್ರೀಶಕ್ತಿ ಸಂಘದ ಪಿ.ಬಿ. ಪಾರ್ವತಿ, ಸೂರ್ಲಬ್ಬಿ ಶಾಲೆಯ ಶಿಕ್ಷಕರುಗಳಾದ ಸೋಮಶೇಖರ್ ನಾಯಕ್, ರಂಜಿತ್ ಮೊದಲಾದವರು ಪಾಲ್ಗೊಂಡು ಶುಭ ಕೋರಿದರು.
ಸ್ಪರ್ಧಾ ವಿಜೇತರು
ವಾಲಿಬಾಲ್ ಪಂದ್ಯಾಟದಲ್ಲಿ ಸಿದ್ಧಲಿಂಗಪುರ ಪ್ರಥಮ ಹಾಗೂ ತಾಕೇರಿ ‘ಬಿ’ ತಂಡ ದ್ವಿತೀಯ ಸ್ಥಾನ, ಕಬಡ್ಡಿಯಲ್ಲಿ ಎಸ್.ಕೆ. ಫ್ರೆಂಡ್ಸ್ ತೋಳೂರು ಶೆಟ್ಟಳ್ಳಿ ಪ್ರಥಮ ಹಾಗೂ ಎನ್.ಆರ್.ವೈ.ಸಿ. ತಲ್ತರೆ ಶೆಟ್ಟಳ್ಳಿ ‘ಎ’ ತಂಡ ದ್ವಿತೀಯ ಸ್ಥಾನ ಗೆದ್ದುಕೊಂಡಿತು.
ಮಹಿಳಾ ಕಬಡ್ಡಿ ಹಾಗೂ ಥ್ರೋಬಾಲ್‍ನಲ್ಲಿ ಕ್ರಮವಾಗಿ ಮುಟ್ಲು ಮತ್ತು ಹಮ್ಮಿಯಾಲ ತಂಡಗಳು ಉಭಯ ಸ್ಪರ್ಧೆಗಳಲ್ಲಿ ಮೊದಲನೆಯ ಮತ್ತು ಎರಡನೇ ಸ್ಥಾನ ಹಂಚಿಕೊಂಡಿತು.
ಗುಡ್ಡಗಾಡು ಓಟ
ಗುಡ್ಡಗಾಡು ಓಟದಲ್ಲಿ ಪುರುಷರ ಸ್ಪರ್ಧೆಯಲ್ಲಿ ಎಂ.ಪಿ. ಓಂಕಾರಪ್ಪ ಹಾಗೂ ತಮ್ಮಯ್ಯ ಸಹೋದರರು ಪ್ರಥಮ, ದ್ವಿತೀಯ ಸ್ಥಾನ ಪಡೆದರೆ, ಎಸ್.ಎಂ. ಭರತ್ ತೃತೀಯ ಸ್ಥಾನಗಳಿಸಿದರು. ವನಿತೆಯರ ವಿಭಾಗದಲ್ಲಿ ಸಿ.ವೈ. ಪುನಿತ್ ಪ್ರಥಮ, ಯು.ಎಸ್. ಸವಿತ ದ್ವಿತೀಯ, ಕೆ. ರಶಿಕ ತೃತೀಯ ಸ್ಥಾನ ಗಳಿಸಿದರು.
ಬಾರದ ಗುಂಡು ಎಸೆತ ಪುರುಷರಲ್ಲಿ ಎಸ್.ಪಿ. ಚೇತನ್, ಪಿ.ಪಿ. ಪ್ರಜೇತ್ ಕ್ರಮವಾಗಿ ಸ್ಥಾನಪಡೆದರೆ, ಯು.ಡಿ. ಸೌಮ್ಯ ಹಾಗೂ ಸಿ.ಎ. ಡೈನಿ ಗೆಲವು ಸಾಧಿಸಿದರು. 100 ಮೀಟರ್ ಓಟದಲ್ಲಿ ಪ್ರಥಮ ಯು.ಡಿ. ಬೋಪಯ್ಯ, ದ್ವಿತೀಯ ಕೆ.ಡಿ. ಪವನ್, ಮಹಿಳಾ ವಿಭಾಗದಲ್ಲಿ ಹೆಚ್.ಟಿ. ಕಾವ್ಯ ಹಾಗೂ ಸಿ.ವೈ. ಪುನಿತ ಸಾಧನೆ ತೋರಿದರು.
ಮಕ್ಕಳ ಸ್ಪರ್ಧೆ
ಕಪ್ಪೆ ಜಿಗಿತ ನಿತಿನ್ ನಾಣಯ್ಯ ಪ್ರಥಮ, ಕೆ.ಆರ್. ಶರತ್ ದ್ವಿತೀಯ, ಕಾಳು ಹೆಕ್ಕುವದು ಸಿ.ಎ. ಆಶಾ ಪ್ರಥಮ, ಕೆ.ಎಸ್. ಶರತ್ ದ್ವಿತೀಯ ಸ್ಥಾನ ಪಡೆದರು. ಓಟದಲ್ಲಿ ಕೆ.ಡಿ. ಪವನ್ ಪ್ರಥಮ, ಕೆ.ಈ. ಲೋಹಿತ್ ಹಾಗೂ ಬಾಲಕಿಯರಲ್ಲಿ ಕೆ.ಪಿ. ಪ್ರಿಯಾಂಕ, ಪಿ.ಆರ್. ಪುಷ್ಪಾವತಿ ಸ್ಥಾನ ಹಂಚಿಕೊಂಡರು. ಪ್ರೌಢಶಾಲಾ ವಿಭಾಗದಲ್ಲಿ ಕಿಶನ್ ಪ್ರಥಮ, ಸಚಿನ್ ದ್ವಿತೀಯ ಸ್ಥಾನಗಳಿಸಿದರು. ಬಾಲಕಿಯರಲ್ಲಿ ಕಾವ್ಯ ಮತ್ತು ಸವಿತ ಜಯ ಪಡೆದರು. ಅಂತೆಯೇ ಪ್ರಾಥಮಿಕ ಹಂತದಲ್ಲಿ ಕಿರಣ್ ಹಾಗೂ ಬಿಪಿನ್ ಬಾಲಕರಲ್ಲಿ, ರಶಿಕ, ಬೀನಾ ಬಾಲಕಿಯರಲ್ಲಿ ಸಾಧನೆ ತೋರಿದರು.
ವಯಸ್ಕರ ಓಟದಲ್ಲಿ ಬಿ.ಪಿ. ಮುದ್ದಪ್ಪ, ಯು.ಎಸ್. ದೇವಯ್ಯ ಮುನ್ನಡೆ ಪಡೆದರೆ, ಮಹಿಳೆಯರಲ್ಲಿ ಕೆ.ಪಿ. ಮುತ್ತಮ್ಮ, ಪಿ.ಎಸ್. ಚೋಂದಮ್ಮ ಸ್ಥಾನ ಹಂಚಿಕೊಂಡರು.
ಕಾನನದ ನಡುವೆ ಜರುಗಿದ ಗ್ರಾಮೀಣ ಕ್ರೀಡಾಕೂಟದ ಬಹುಮಾನ ವಿತರಣಾ ಸಮಾರಂಭದ ಬಳಿಕ ಗ್ರಾಮಸ್ಥರು ಭೇದ-ಭಾವ ಮರೆತು ಕೊಡವ ವಾಲಗಕ್ಕೆ ಕುಣಿದು ಸಂಭ್ರಮಿಸಿದ್ದು ಗೋಚರಿಸಿತು.
ಚಿತ್ರ-ವರದಿ: ಪಿ.ಎಸ್. ಪವನ್.