ಮಡಿಕೇರಿ, ಮೇ 4: ಕೊಡಗಿನ ಗ್ರಾಮೀಣ ಕ್ರೀಡೆಗಳನ್ನು ಯುವ ಪ್ರತಿಭೆಗಳಿಗೆ ಪೆÇ್ರೀತ್ಸಾಹ ನೀಡುವ ಉದ್ದೇಶದಿಂದ ತಾ. 22 ರಿಂದ 26 ರವರೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಿರುವದಾಗಿ ಆದಿಪರಾಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ನಾಪಂಡ ಪೂವಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲಿ ನಡೆಯುವ ಗ್ರಾಮೀಣ ಕ್ರೀಡಾಕೂಟವನ್ನು ಜಾತಿ-ಮತಗಳ ಭೇದವಿಲ್ಲದೆ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಕ್ರೀಡಾಕೂಟಕ್ಕೆ ಭರದ ಸಿದ್ಧತೆ ನಡೆಸಿರುವದಾಗಿ ಮಾಹಿತಿ ನೀಡಿದರು.
ಆದಿಪರಾಶಕ್ತಿ ಸೇವಾ ಟ್ರಸ್ಟ್‍ನ ಟ್ರಸ್ಟಿ ದಿಶಾ ಪೂವಯ್ಯ ಮಾತನಾಡಿ, ಟ್ರಸ್ಟ್ ಮೂಲಕ ಗ್ರಾಮೀಣ ಕ್ರೀಡೆಗಳ ಪುನಶ್ಚೇತನಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದರು. ಕ್ರೀಡಾಕೂಟದ ಉದ್ಘಾಟನಾ ದಿನ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಟ್ರಸ್ಟ್‍ನ ಸಲಹೆಗಾರ ಹರೀಶ್ ಸರಳಾಯ ಮಾತನಾಡಿ, ಗ್ರಾಮೀಣ ವಿಭಾಗದ ಕ್ರೀಡಾಸಕ್ತರು ವಯಸ್ಸಿನ ಮಿತಿಯಿಲ್ಲದೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬಹುದೆಂದು ತಿಳಿಸಿದರು.
ಐದು ದಿನಗಳ ಕಾಲ ನಡೆಯುವ ಗ್ರಾಮೀಣ ಕ್ರೀಡಾಕೂಟದಲ್ಲಿ ಹಗ್ಗಜಗ್ಗಾಟ, ತೆಂಗಿನಕಾಯಿಗೆ ಗುಂಡು ಹಾಗೂ ಕಲ್ಲು ಹೊಡೆಯುವ ಸ್ಪರ್ಧೆಗಳು, ಕೃಷಿ ಚಟುವಟಿಕೆಗಳನ್ನು ಮೆಲುಕು ಹಾಕುವಂತಹ ಮೂಟೆ ಹೊತ್ತು ಓಡುವ ಸ್ಪರ್ಧೆ, ಮೂರು ಕಾಲು ಓಟ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವದು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿರುವದಾಗಿ ಮಾಹಿತಿ ನೀಡಿದರು.
ಹಗ್ಗಜಗ್ಗಾಟ ಮತ್ತು ತೆಂಗಿನಕಾಯಿ ಎಳೆಯುವ ಸ್ಪರ್ಧೆಗಳಿಗೆ ತಾ. 10 ರೊಳಗಾಗಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದ್ದು, ಹೆಚ್ಚಿನ ವಿವರಗಳಿಗೆ ಮೊ.7026269344ನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಲಾಂಛನ ಬಿಡುಗಡೆ
ಗ್ರಾಮಿಣ ಕ್ರೀಡಾಕೂಟದ ಲಾಂಛನವನ್ನು ಇದೇ ಸಂದರ್ಭ ಆದಿಪರಾಶಕ್ತಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಅನಾವರಣಗೊಳಿಸಿದರು. ಗೋಷ್ಠಿಯಲ್ಲಿ ಪ್ರಮುಖರಾದ ಕಾವೇರಪ್ಪ ಹಾಗೂ ಪೊನ್ನಚೆಟ್ಟೀರ ರಾಜೇಶ್ ಉಪಸ್ಥಿತರಿದ್ದರು.