ಶ್ರೀಮಂಗಲ, ಮೇ 4: ಸಾಹಿತ್ಯ ಇದ್ದಲ್ಲಿ ಸಂಸ್ಕಾರವಿರುತ್ತದೆ. ಸಾಹಿತ್ಯ ಬೆಳೆದರೆ ಎಲ್ಲವೂ ಬೆಳೆಯುತ್ತದೆ. ಎಂದು ಬೆಂಗಳೂರಿನ ಉದ್ಯಮಿ ಹಾಗೂ ಭಾಷಾ ಸಮ್ಮಾನ್ ಪ್ರಶಸ್ತಿ ಪಡೆದ ದಿ. ಮಂಡೀರ ಜಯಾ ಅಪ್ಪಣ್ಣ ಅವರ ಪುತ್ರ ಮಂಡೀರ ವಿವೇಕ್ ಚಂಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡವ ತಕ್ಕ್ ಎಳ್ತ್ ಕಾರಡ ಕೂಟದ ಆಶ್ರಯದಲ್ಲಿ ವೀರಾಜಪೇಟೆಯಲ್ಲಿ ನಡೆದ ಮಂಡೀರ ಜಯಾ ಅಪ್ಪಣ್ಣ, ಮುದ್ದಿಯಡ ಕುಶಾ ಪೊನ್ನಪ್ಪ, ಇಟ್ಟೀರ ರಾಜಪ್ಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತಿಗೆ ಸಮಾಜದಲ್ಲಿ ಗೌರವ, ಮನ್ನಣೆ ಸಿಗುತ್ತದೆ. ಸಾಹಿತ್ಯ ಬೆಳೆದರೆ ಸಂಸ್ಕøತಿ ಕಲೆ ಸೇರಿದಂತೆ ಆ ಜನಾಂಗದ ಹಾಗೂ ಭಾಷಿಕರ ಸರ್ವಾಂಗೀಣ ಅಭಿವೃದ್ದಿ ಆಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಹಿತಿ ಕೂಪದಿರ ಸುಂದರಿ ಮಾಚಯ್ಯ ಮಾತನಾಡಿ ಮಕ್ಕಳಲ್ಲಿ ಪ್ರಾಥಮಿಕ ಹಂತದಲ್ಲೇ ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕøತಿಯಲ್ಲಿ ಆಸಕ್ತಿ ಹಾಗೂ ಅಭಿಮಾನ ಹುಟ್ಟುವಂತೆ ಮಾಡುವದು ಪೋಷಕರ ಜವಾಬ್ದಾರಿ ಆಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ‘ಕೊಡವ ತಕ್ಕ್ ಎಳ್ತ್ ಕಾರಡ ಕೂಟ’ದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಪ್ರಾಸ್ತಾವಿಕ ನುಡಿಯಲ್ಲಿ ‘ಕೂಟ’ದ ಇದುವರೆಗಿನ ಹಾಗೂ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸುವದರೊಂದಿಗೆ ಕೊಡವ ಭಾಷೆ ಸಾಹಿತ್ಯ, ಕಲೆಯ ಬೆಳವಣೆಗೆಗೆ ಸಂಘ ಸಂಸ್ಥೆಗಳಿಂದ ಮಾತ್ರ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.

ಈ ಸಂದರ್ಭ ತ್ರಿಭಾಷಾ ಸಾಹಿತಿ ದಿ. ಮಂಡೀರ ಜಯಾ ಅಪ್ಪಣ್ಣ ದತ್ತಿ ಕಾರ್ಯಕ್ರಮ ಪ್ರಯುಕ್ತ ಏರ್ಪಡಿಸಿದ್ದ ಕೊಡವ ಜಯಾ ಭಾರತ ವಾಚನ ಸ್ಪರ್ಧೆಯಲ್ಲಿ ಪ್ರಥಮ-ಮೂಕೈರೀರ ನಳಿನಾಕ್ಷಿ, ದ್ವಿತೀಯ-ಪುಷ್ಪಲತಾ ಶಿವಪ್ಪ, ತೃತೀಯಾ-ತಂಬಾಂಡ ಡ್ಯಾನಿ ನಾಣಯ್ಯ, ಮುದ್ದಿಯಡ ಕುಶಾ ಪೊನ್ನಪ್ಪ ದತ್ತಿ ಕಥೆ ಸ್ಪರ್ಧೆಯಲ್ಲಿ ಪ್ರಥಮ- ಕೋಟ್ರಂಗಡ ಸಜನಿ ಸೋಮಯ್ಯ, ದ್ವಿತೀಯ-ಪುಷ್ಪಲತಾ ಶಿವಪ್ಪ, ತೃತೀಯ-ಉಳುವಂಗಡ ಕಾವೇರಿ ಉದಯ, ಇಟ್ಟಿರ ರಾಜಪ್ಪ ದತ್ತಿ ಚುಟುಕು ಸ್ಪರ್ಧೆಯಲ್ಲಿ ಪ್ರಥಮ-ಮೂಕೈರೀರ ನಳಿನಾಕ್ಷಿ, ದ್ವಿತೀಯ-ಚೊಟ್ಟೆಯಾಂಡಮಾಡ ಲಲಿತಾ ಕಾರ್ಯಪ್ಪ, ತೃತೀಯ ಬಹುಮಾನ ಮಳುವಂಡ ನಳಿನಿ ಬಿಂದು ಅವರುಗಳು ಪಡೆದುಕೊಂಡರು. ಇವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.