ಕೂಡಿಗೆ, ಮೇ 4: ಗ್ರಾಮದ ಅಭಿವೃದ್ಧಿಯ ಬಗ್ಗೆ ಚರ್ಚಿಸದೆ ಸದಸ್ಯರುಗಳು ತಮ್ಮ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚಿಸುವ ಪರಿಪಾಟ ಈ ಬಾರಿ ಕೂಡುಮಂಗಳೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಗೋಚರಿಸಿತು.

ಕಳೆದ ಒಂದು ವಾರಗಳಿಂದ ಸುರಿಯುತ್ತಿರುವ ಭಾರಿ ಮಳೆ-ಗಾಳಿಯಿಂದಾಗಿ ಗ್ರಾಮಗಳ 10ಕ್ಕೂ ಅಧಿಕ ಮನೆಗಳ ಶೀಟುಗಳು ಪುಡಿ ಪುಡಿಯಾಗಿವೆ. ಮಳೆಯ ನೀರು ಚರಂಡಿಯಲ್ಲಿ ಹರಿಯಲು ವ್ಯವಸ್ಥೆ ಮಾಡದೆ ಕೈಗಾರಿಕಾ ಬಡಾವಣೆಯ ಹೆದ್ದಾರಿಯ ಮೇಲೆ ಮಳೆ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಎಲ್ಲ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಚರ್ಚಿಸದ ಗ್ರಾ.ಪಂ. ಸದಸ್ಯರುಗಳು ತಮ್ಮ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಾ ಸಭೆಯನ್ನು ಮುಕ್ತಾಯಗೊಳಿಸಿದರು.

ಕಳೆದ ತಿಂಗಳಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ಸದಸ್ಯರುಗಳ ಮೇಲೆ ದೂರಿನ ಅರ್ಜಿ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಜಿಲ್ಲಾಧಿಕಾರಿಗಳ ಕಛೇರಿಯಿಂದ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳ ಕಛೇರಿಗೆ ಈ ಅರ್ಜಿಯ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುವಂತೆ ಆದೇಶ ಬಂದಿರುವದರಿಂದ ಕಾರ್ಯನಿರ್ವಹಣಾಧಿಕಾರಿಗಳು ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗೆ ಇದರ ಬಗ್ಗೆ ಮಾಹಿತಿ ನೀಡುವಂತೆ ಪತ್ರ ರವಾನಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯರುಗಳು ತಮ್ಮ ತಮ್ಮಲ್ಲಿಯೆ ಸಭೆಯನ್ನು ಮರೆತು, ಅವಾಚ್ಯ ಶಬ್ದಗಳನ್ನು ಬಳಸಿ ಕೂಗಾಟದಲ್ಲಿ ತೊಡಗಿದ್ದರು.

ಈ ಸಂದರ್ಭ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಯಿಷಾ ಸಭೆಯನ್ನು ಹತೋಟಿಗೆ ತರಲು ಪ್ರಯತ್ನಿಸಿದರೂ, ಯಾವದಕ್ಕೂ ಕಿವಿಗೊಡದ ಸದಸ್ಯರು ಕೂಗಾಟದಲ್ಲಿ ಮಗ್ನರಾಗಿದ್ದರು.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ಜಿಲ್ಲೆಯಲ್ಲೇ ಹೆಚ್ಚು ಸದಸ್ಯರನ್ನು ಹೊಂದಿರುವ ಹಾಗೂ ಹೆಚ್ಚು ಆದಾಯ ಬರುವಂತಹ ಗ್ರಾಮ ಪಂಚಾಯಿತಿಯಾಗಿದ್ದು, ಈ ವ್ಯಾಪ್ತಿಯಲ್ಲಿ ವಿವಿಧ ಬೃಹತ್ ಕಾಫಿ ಸಂಸ್ಕರಣಾ ಘಟಕಗಳು, ಹಾಲಿನ ಡೈರಿ ಸೇರಿದಂತೆ ಇನ್ನಿತರ ಉಪ ಕೈಗಾರಿಕಾ ಘಟಕಗಳನ್ನು ಹೊಂದಿದೆ. ಹೆಚ್ಚು ತೆರಿಗೆಯ ರೂಪದಲ್ಲಿ ಆದಾಯ ಬರುವ ಗ್ರಾ.ಪಂ. ಇದಾಗಿದೆ.

ಇಷ್ಟೆಲ್ಲ ಆದಾಯ ಬರುವ ಗ್ರಾ.ಪಂ ಸದಸ್ಯರುಗಳು ಅಭಿವೃದ್ಧಿಯ ಬಗ್ಗೆ ಚರ್ಚಿಸದೆ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಕೂಗಾಡುತ್ತಿರುವದು ವಿಪರ್ಯಾಸ. -ನಾಗರಾಜ ಶೆಟ್ಟಿ