ಶ್ರೀಮಂಗಲ, ಮೇ 5: ಜಿಲ್ಲೆಯ ಕಂದಾಯ ಕಚೇರಿಗಳು ಭ್ರಷ್ಟಾಚಾರ, ಅರಾಜಕತೆಯಿಂದ ಅವ್ಯವಸ್ಥೆಯ ಕೇಂದ್ರವಾಗಿದ್ದು, ಇದರಿಂದ ಜನರು ದಿನನಿತ್ಯ ಪರಿತಪಿಸುವಂತಾಗಿದೆ. ಮುಂದಿನ ಒಂದು ತಿಂಗಳೊಳಗೆ ಈ ಅವ್ಯವಸ್ಥೆಗಳನ್ನು ಸರಿಪಡಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾ ಭಾರತೀಯ ಕಿಸಾನ್ ಸಂಘದ ವತಿಯಿಂದ ಪ್ರತಿಭಟನೆ ಕೈಗೊಳ್ಳಲು ಸಂಘದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಪೊನ್ನಂಪೇಟೆ ಪ್ರವಾಸಿ ಮಂದಿರದಲ್ಲಿ ವೀರಾಜಪೇಟೆ ತಾಲೂಕು ಕಿಸಾನ್ ಸಂಘದ ಅಧ್ಯಕ್ಷ ಮುಕ್ಕಾಟಿರ ಪ್ರವೀಣ್ ಭೀಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲೆಯ ತಾಲೂಕು ಕಚೇರಿ, ನಾಡು ಕಚೇರಿ ಸೇರಿದಂತೆ ಕಂದಾಯ ಕಚೇರಿ ಮತ್ತು ಸರ್ವೆ ಇಲಾಖೆಯ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಪ್ರತಿಯೊಂದು ಕೆಲಸಕ್ಕೂ ಲಂಚಕ್ಕಾಗಿ ಹಾತೊರೆಯುತ್ತಾರೆ. ಇದಲ್ಲದೆ ದಲ್ಲಾಳಿಗಳ ಹಾವಳಿಯಿಂದ ಜನ ಸಾಮಾನ್ಯರು ನೇರವಾಗಿ ತಮ್ಮ ಕೆಲಸ ಮಾಡಿಕೊಳಲು ಆಗುತ್ತಿಲ್ಲ. ಕಂದಾಯ ಕಚೇರಿಯ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಅಥವಾ ಲಂಚ ನೀಡದಿದ್ದರೆ ಅಂತಹವರ ಕಡತಗಳ ನಾಪತ್ತೆ ಅಥವಾ ಅನಗತ್ಯ ಕಾರಣ ನೀಡಿ ಕಡತ ವಿಲೇವಾರಿ ವಿಳಂಬ ಮಾಡಿ ಕಿರುಕುಳ ನೀಡಲಾಗುತ್ತಿದೆ. ಎಂಬ ಬಗ್ಗೆ ಸಭೆಯಲ್ಲಿ ಸಂಘದ ಪದಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತಾ. 8 ರಂದು ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳಿಗೆ ಈ ಬಗ್ಗೆ ಕ್ರಮ ಕೈಗೊಂಡು ಅವ್ಯವಸ್ಥೆ ಸರಿಪಡಿಸಲು ಕಿಸಾನ್ ಸಂಘದಿಂದ ಮನವಿ ಪತ್ರ ಸಲ್ಲಿಸಲಾಗುವದು.

ಒಂದು ತಿಂಗಳ ಗಡುವಿನೊಳಗೆ ಅವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಜೂನ್ 7 ರಂದು ವೀರಾಜಪೇಟೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಶೀಘ್ರದಲ್ಲಿಯೇ ಕಿಸಾನ್ ಸಂಘದ ಕಚೇರಿಯನ್ನು ಪೊನ್ನಂಪೇಟೆಯಲ್ಲಿ ಆರಂಭಿಸಿ ಜನರ ಸಮಸ್ಯೆಗೆ ಸ್ಪಂದಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಕಿಸಾನ್ ಸಂಘದ ವೀರಾಜಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿ ನೂರೇರ ಮನೋಜ್, ಉಪಾಧ್ಯಕ್ಷರುಗಳಾದ ಚೊಟ್ಟ್ಟೆಯಂಡಮಾಡ ಡಿ. ಮಾದಪ್ಪ, ಎಸ್.ಎಸ್. ಸುರೇಶ್, ಕಾರ್ಯದರ್ಶಿಗಳಾದ ಗಾಂಡÀಂಗಡ ಕೌಶಿಕ್ ದೇವಯ್ಯ, ಮಚ್ಚಮಾಡ ಅಯ್ಯಪ್ಪ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಯುವ ಪ್ರಮುಖ್ ದೇಯಂಡ ರತನ್ ಬೋಪಣ್ಣ, ಪದಾಧಿಕಾರಿಗಳಾದ ಚೋಡುಮಾಡ ವಿಕ್ರಂ, ಮಹಿಳಾ ಪ್ರಮುಖ್ ನೂರೇರ ರತಿ ಅಚ್ಚಪ್ಪ, ಮೀದೇರಿರ ಕವಿತಾ ರಾಮು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ಸದಸ್ಯ ಕೆ.ಟಿ. ಬಿದ್ದಪ್ಪ ಮತ್ತಿತರರು ಹಾಜರಿದ್ದರು.