ಸೋಮವಾರಪೇಟೆ, ಏ. 19: ಜಿಲ್ಲೆಯಾದ್ಯಂತ ಶರಣ ಸಾಹಿತ್ಯವನ್ನು ಪಸರಿಸುವ ಕಾರ್ಯ ಶರಣ ಸಾಹಿತ್ಯ ಪರಿಷತ್ತಿನಿಂದ ಆಗಬೇಕಾಗಿದೆ ಎಂದು ಮುದ್ದಿನಕಟ್ಟೆ ಮಠಾಧೀಶರಾದ ಅಭಿನವ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿಯೇ ಶಿವ ಶರಣರು ವಚನ ಸಾಹಿತ್ಯದ ಮೂಲಕ ಸಮಾಜ ಸುಧಾರಣೆಗೆ ಮುಂದಾಗಿದ್ದರು. ಅಂತಹ ಧ್ಯೇಯ ಉದ್ದೇಶವನ್ನಿಟ್ಟುಕೊಂಡು ರಚಿತವಾಗಿರುವ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯ ಹೆಚ್ಚು ನಡೆಯಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪಟ್ಟಣದ ವಿರಕ್ತ ಮಠಾಧೀಶರಾದ ವಿಶ್ವೇಶ್ವರ ಸ್ವಾಮೀಜಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತು ಯಾವದೇ ಜಾತಿ ವರ್ಗಕ್ಕೆ ಮೀಸಲಾಗಿಲ್ಲ. ಎಲ್ಲರೂ ಇಲ್ಲಿ ಸಮಾನರೇ ಆಗಿದ್ದಾರೆ. ಆದ್ದರಿಂದ ಯಾವದೇ ಭೇದಭಾವವಿಲ್ಲದೆ ಜಿಲ್ಲೆಯಲ್ಲಿ ಶರಣ ಸಾಹಿತ್ಯದ ಪರಿಚಯ ಎಲ್ಲರಿಗೂ ಆಗಲಿ ಎಂದು ಆಶಿಸಿದರು.

ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತು ಕೂಡ ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಪರಿಷತ್ತಿನ ಮೂಲಕ ಶರಣರ ಧ್ಯೇಯಗಳನ್ನು ಸಮಾಜಕ್ಕೆ ತಿಳಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ಶರಣ ಸಾಹಿತ್ಯ ಪರಿಷತ್ತಿಗೆ ಯಾವದೇ ಜಾತಿ ವರ್ಗದ ಚೌಕಟ್ಟಿಲ್ಲ. ಎಲ್ಲರೂ ಸದಸ್ಯರಾಗಬಹುದು. ಆದ್ದರಿಂದ ಶರಣ ಸಾಹಿತ್ಯ ಆಸಕ್ತರು ಸದಸ್ಯತ್ವ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಜಿಲ್ಲೆಯಲ್ಲಿ ಪರಿಷತ್ತು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜನಸಾಮಾನ್ಯರಿಗೂ ಶರಣ ಸಾಹಿತ್ಯ ಹಾಗೂ ಪರಿಷತ್ತಿನ ಪರಿಚಯ ಮಾಡಿಕೊಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಜಿಲ್ಲೆಯ 3 ತಾಲೂಕು ಸಮಿತಿ ರಚನೆ ಹಾಗೂ ಮಹಿಳಾ ಘಟಕದ ಜಿಲ್ಲಾ ಕದಳಿ ವೇದಿಕೆ ರಚನೆಗೆ ಸಂಬಂಧಿಸಿದಂತೆ ಚರ್ಚೆ ನಡೆದು ಸೋಮವಾರಪೇಟೆ ತಾಲೂಕಿಗೆ ಮಹದೇವಪ್ಪ ಕುಶಾಲನಗರ, ವೀರಾಜಪೇಟೆ ತಾಲೂಕಿಗೆ ಎಸ್.ಎಸ್. ಸುರೇಶ್ ಮಾಯಮುಡಿ, ಮಡಿಕೇರಿ ತಾಲೂಕಿಗೆ ರಾಜಶೇಖರ್ ಯಲವಟ್ಟಿ ಅವರಿಗೆ ಜವಾಬ್ದಾರಿ ನೀಡಿ ಮುಂದಿನ 15 ದಿನಗಳೊಳಗೆ ಸಭೆ ನಡೆಸಿ ತಾಲೂಕು ಸಮಿತಿಗಳನ್ನು ರಚಿಸುವಂತೆ ಸೂಚಿಸಲಾಯಿತು.

ಮುಂದಿನ ಒಂದು ತಿಂಗಳೊಳಗೆ ಮಹಿಳೆಯರ ಸಭೆ ನಡೆಸಿ ಜಿಲ್ಲಾ ಕದಳಿ ವೇದಿಕೆ ರಚಿಸುವಂತೆ ಕೊಡ್ಲಿಪೇಟೆ ರಾಜೇಶ್ವರಿ ಹಾಗೂ ಮಮತಾ ಸತೀಶ್, ಸೋಮವಾರಪೇಟೆಯ ಜಲಜಾ ಶೇಖರ್ ಅವರಿಗೆ ಜವಾಬ್ದಾರಿ ವಹಿಸಲಾಯಿತು. ಪರಿಷತ್ತಿಗೆ ಹೊಸ ಸದಸ್ಯರ ಸೇರ್ಪಡೆ ಬಗ್ಗೆ ಗಮನಹರಿಸು ವಂತೆಯೂ ಮುಂದಿನ ಅವಧಿಯಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತೀರ್ಮಾನಿಸ ಲಾಯಿತು. ಜಿಲ್ಲೆಯಲ್ಲಿ ಶರಣ ಸಾಹಿತ್ಯ ಭವನ ನಿರ್ಮಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆದು ಭವನಕ್ಕೆ ಅವಶ್ಯವಿರುವ ನಿವೇಶನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿ ಮನವಿ ಸಲ್ಲಿಸುವಂತೆ ತೀರ್ಮಾನಿಸಲಾಯಿತು. ಸಭೆಯ ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಪ್ರೇಮ್‍ನಾಥ್, ಖಜಾಂಚಿ ಡಿ.ಬಿ. ಸೋಮಪ್ಪ ಉಪಸ್ಥಿತರಿದ್ದರು.