ಆಲೂರು-ಸಿದ್ದಾಪುರ, ಏ. 19: ಸಮೀಪದ ಮಾಲಂಬಿ ಗ್ರಾಮದಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ, ಶ್ರೀ ಬಸವಣ್ಣ ದೇವರು ಮತ್ತು ಶ್ರೀ ಕನ್ನಂಬಾಡಿ ಅಮ್ಮನವರ ವಾರ್ಷಿಕ ಮಹೋತ್ಸವ ನೆರವೇರಿತು.

ಗ್ರಾಮದಲ್ಲಿರುವ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವದರೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರಸಾದ ವಿನಿಯೋಗದ ನಂತರ ದೇವಾಲಯದಲ್ಲಿ ಕದಲಿ ಪೂಜೆಯನ್ನು ನೆರವೇರಿಸಲಾಯಿತು. ನಂತರ ಆರತಿಯೊಂದಿಗೆ ದೇವರುಗಳ ಉತ್ಸವವನ್ನು ಗಂಗಾಸ್ನಾನಕ್ಕೆ ಕೊಂಡೊಯ್ಯಲಾಯಿತು. ಈ ಸಂದರ್ಭ ಕಲಶ ಹೊತ್ತ ಮಹಿಳೆಯರು, ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಗ್ರಾಮದ ಶ್ರೀ ಮಲ್ಲಿಕಾರ್ಜುನಸ್ವಾಮಿ, ಶ್ರೀ ಬಸವಣ್ಣ ದೇವರು ಮತ್ತು ಶ್ರೀ ಕನ್ನಂಬಾಡಿ ಅಮ್ಮನವರ ದೇವರ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ನಡೆಸಿ ಆಯಾಯ ದೇವಾಲಯಗಳಲ್ಲಿ ಕುಳ್ಳಿರಿಸಲಾಯಿತು. ನಂತರ ವಿಶೇಷ ಪೂಜೆ ಜರುಗಿತು.

ಸಿಡಿಮದ್ದಿನ ಪ್ರದರ್ಶನವನ್ನು ನಡೆಸಲಾಯಿತು. ಈ ಸಂದರ್ಭ ದೇವಾಲಯ ಸಮಿತಿಯಿಂದ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಪೂಜಾ ಮಹೋತ್ಸವದಲ್ಲಿ ದೇವಾಲಯ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.