ಕೂಡಿಗೆ, ಏ. 19: ಜಿಲ್ಲೆಯ ಗಡಿಭಾಗದ ಗ್ರಾಮ ಪಂಚಾಯಿತಿಯಾದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಅಳುವಾರದಲ್ಲಿ ಇದೀಗ ಪ್ರಾರಂಭಗೊಂಡಿರುವ ಸ್ನಾತಕೋತ್ತರ ಕೇಂದ್ರ ಗ್ರಾಮಾಂತರ ಪ್ರದೇಶದ ಪದವಿ ಪಡೆದ ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಉತ್ತಮ ಭವಿಷ್ಯಕ್ಕಾಗಿ ಉತ್ತಮ ಆಯ್ಕೆ ಕೇಂದ್ರವಾಗಿರುವ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಇದೀಗ ಜಿಲ್ಲೆಯ ವಿದ್ಯಾರ್ಥಿಗಳನ್ನು ಕೈಬೀಸಿ ತನ್ನತ್ತ ಸೆಳೆಯುತ್ತಿದೆ. ಸುತ್ತಲೂ ಬೆಟ್ಟ-ಗುಡ್ಡಗಳಿಂದ ಕೂಡಿದ್ದು, ಪ್ರಶಾಂತವಾದ ಸ್ಥಳ. ಎತ್ತ ನೋಡಿದರತ್ತ ಕಾಣುವ ಹಸಿರು ಸಾಲುಗಳು, ಪಟ್ಟಣದಿಂದ ದೂರವಿರುವ ಈ ವನಸಿರಿಯ ನಡುವೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತಮ ಕೇಂದ್ರವಾಗಿರುವ ಈ ಚಿಕ್ಕಅಳುವಾರ ಸ್ನಾತಕ್ಕೋತ್ತರ ಕೇಂದ್ರ ಗ್ರಾಮಾಂತರ ಹಾಗೂ ಪಟ್ಟಣದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡುತ್ತಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಘೋಷಣೆಯೊಂದಿಗೆ ಈ ಸ್ನಾತಕೋತ್ತರ ಕೇಂದ್ರ ಕೊಡಗಿನ ಜನರ ಕನಸಿನ ಕೂಸಾಗಿ ಬೆಳೆಯುತ್ತಿದೆ. ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರ ಜಿಲ್ಲೆಯ ಗಡಿಭಾಗದ ಹಾಸನ ಜಿಲ್ಲೆ, ಮೈಸೂರು ಜಿಲ್ಲೆಗಳ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ. 2014ರಲ್ಲಿ ಪ್ರಾರಂಭಗೊಂಡ ಈ ಸ್ನಾತಕೋತ್ತರ ಕೇಂದ್ರ 80 ವಿದ್ಯಾರ್ಥಿಗಳ ಕಲಿಕೆಯ ಮೂಲಕ ಪ್ರಾರಂಭಗೊಂಡು ರಾಜ್ಯ ಮಟ್ಟದ ಕೇಂದ್ರದಲ್ಲಿರುವ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ.

ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರಕ್ಕೆ 2012ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯ ಸರ್ಕಾರದಿಂದ ರೂ. 5 ಕೋಟಿ ನೀಡುವದಾಗಿ ಭರವಸೆ ನೀಡಿ ಭೂಮಿಪೂಜೆ ನೆರವೇರಿಸಿದ್ದರು. ಆದರೆ, ರಾಜ್ಯ ಸರ್ಕಾರದಿಂದ ಇರುವರೆಗೂ ರೂ. 5 ಕೋಟಿಯ ಬದಲು ರೂ. 1 ಕೋಟಿ ಮಾತ್ರ ಬಿಡುಗಡೆಗೊಂಡಿದ್ದು, ಇನ್ನೂ ರೂ. 4 ಕೋಟಿ ಬಿಡುಗಡೆಯಾಗಬೇಕಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಯೋಜನೆಯಂತೆ ಈ ಕೇಂದ್ರದ ಕಾಮಗಾರಿ ಪ್ರಾರಂಭಗೊಂಡು ಉತ್ತಮ ಕಟ್ಟಡ ನಿರ್ಮಾಣಗೊಳ್ಳುತ್ತ ತಡೆಗೋಡೆಯೊಂದಿಗೆ ಮೊದಲ ಹಂತದ ಕೇಂದ್ರದ ಉದ್ಘಾಟನೆಯನ್ನು 2014ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿದ್ದರು.

ಈ ಕೇಂದ್ರದಲ್ಲಿ ಕಳೆದ 2014ರಿಂದ ವರ್ಷ ಕಳೆದಂತೆ ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ಸ್ನಾತಕೋತ್ತರ ಪದವಿ ತರಗತಿಗಳು ಪ್ರಾರಂಭಗೊಳ್ಳುತ್ತಿವೆ. ಈಗಾಗಲೇ ಜೀವರಸಾಯನ ಶಾಸ್ತ್ರ (ಎಂ.ಎಸ್ಸಿ) ಸೂಕ್ಷ್ಮಾಣು ಜೀವಶಾಸ್ತ್ರ (ಎಂ.ಎಸ್ಸಿ), ವಾಣಿಜ್ಯ (ಎಂ.ಕಾಂ), ಕನ್ನಡ (ಎಂ.ಎ) ಇತಿಹಾಸ (ಎಂ.ಎ) ರಾಜ್ಯಶಾಸ್ತ್ರ (ಎಂ.ಎ) ಸಮಾಜ ಕಾರ್ಯ (ಎಂ.ಎಸ್.ಡಬ್ಲ್ಯೂ) ಪದವಿ ತರಗತಿಗಳನ್ನು ಹೊಂದಿದ್ದು, ಈ 2017ರ ಶೈಕ್ಷಣಿಕ ವರ್ಷದಲ್ಲಿ ಎಂ.ಎಸ್ಸಿ ಕಂಪ್ಯೂಟರ್, ಎಂ.ಎಸ್ಸಿ ಪತ್ರಿಕೋದ್ಯಮ, ಎಂ.ಎಸ್ಸಿ ಪರಿಸರ ಸಂಬಂಧಪಟ್ಟ ವಿಭಾಗಗಳು ಪ್ರಾರಂಭಗೊಳ್ಳಲಿದ್ದು, ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಪದವಿ ತರಗತಿಗಳು ಆರಂಭಗೊಳ್ಳಲಿವೆ ಎಂದು ಇಲ್ಲಿನ ಪ್ರಬಾರ ನಿರ್ದೇಶಕ ಡಾ. ವಿ. ರವೀಂದ್ರಾಚಾರಿ ತಿಳಿಸಿದರು.

80 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಸ್ನಾತಕೋತ್ತರ ಕೇಂದ್ರದಲ್ಲಿ ಇದೀಗ 350 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಹಾಗೂ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸ್ನಾತಕೋತ್ತರ ಕೇಂದ್ರಕ್ಕೆ ಸೇರಿದ ಎರಡು ವಿದ್ಯಾರ್ಥಿ ನಿಲಯಗಳಲ್ಲಿ ಒಂದು ಪುರುಷರಿಗೆ ಮತ್ತೊಂದು ಮಹಿಳಾ ವಿದ್ಯಾರ್ಥಿಗಳಿಗೆ ಬಳಸಲಾಗುತ್ತಿತ್ತು. ಇದೀಗ 250ಕ್ಕೂ ಹೆಚ್ಚು ವಿದ್ಯಾರ್ಥಿನಿಯರೆ ಇರುವದರಿಂದ ಈ ಎರಡು ವಿದ್ಯಾರ್ಥಿ ನಿಲಯಗಳು ಮಹಿಳಾ ವಿದ್ಯಾರ್ಥಿಗಳಿಗೆ ಬಳಕೆಯಾಗುತ್ತಿದೆ. ಕೂಡಿಗೆಯ ಡಯಟ್ ಕೇಂದ್ರದಲ್ಲಿದ್ದ ವಿದ್ಯಾರ್ಥಿ ನಿಲಯವನ್ನು 100 ಪುರುಷ ವಿದ್ಯಾರ್ಥಿಗಳು ಬಳಸುತ್ತಿದ್ದಾರೆ.

ಇದರ ಜೊತೆಯಲ್ಲಿ ಜಿಲ್ಲೆಯ ಮೂಲೆ ಮೂಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಂಗಳೂರು ವಿಶ್ವವಿದ್ಯಾನಿಲಯದಿಂದ 2 ಬಸ್ ವ್ಯವಸ್ಥೆ ಮಾಡಲಾಗಿದೆ. ಕುಶಾಲನಗರದಿಂದ ಸ್ನಾತಕೋತ್ತರ ಕೇಂದ್ರಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಕೂಡಿಗೆ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.

ಈ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಲ್ಲದೆ, ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಪದವಿ ವಿದ್ಯಾರ್ಥಿಗಳನ್ನೊಳಗೊಂಡಂತೆ ವಿವಿಧ ಕ್ರೀಡಾಚಟುವಟಿಕೆಗಳು, ಸಾಂಸ್ಕøತಿಕ ಚಟುವಟಿಕೆಗಳು ಆಯಾಯಾ ವಿಭಾಗದ ವಿಷಯಕ್ಕೆ ಸಂಬಂಧಿಸಿದಂತೆ ಸ್ಪರ್ಧಾ ಚಟುವಟಿಕೆಗಳು ನಡೆಯುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳು ಓದಿನ ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗುವ ಅವಕಾಶ ಈ ಕೇಂದ್ರದಲ್ಲಿದೆ.

ರಾಜ್ಯ ಸರ್ಕಾರ ಬಿಡುಗಡೆಗೊಳಿಸಬೇಕಾಗಿದ್ದ ಹಣವನ್ನು ಆದಷ್ಟು ಬೇಗ ಬಿಡುಗಡೆಗೊಳಿಸಿದ್ದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಹಣದ ಜೊತೆಯಲ್ಲಿ ಕೇಂದ್ರವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಸಹಕಾರಿಯಾಗುತ್ತದೆ.

ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಕೆ. ಭೈರಪ್ಪ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಉತ್ತಮ ಮಟ್ಟದಲ್ಲಿ ಸಾಗುತ್ತಿದ್ದು, ಅನುಭವಿ ಹಾಗೂ ಉತ್ಸಾಹಿ ಉಪನ್ಯಾಸಕರ ಮತ್ತು ಬೋಧಕೇತರ ಸಿಬ್ಬಂದಿಗಳ ಶ್ರಮದೊಂದಿಗೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ.