ಸಿದ್ದಾಪುರ, ಏ. 16: ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘದ ವತಿಯಿಂದ ಐ.ಪಿ.ಎಲ್ ಮಾದರಿಯ ಕೊಡಗು ಚಾಂಪಿಯನ್ಸ್ ಲೀಗ್‍ನ 2ನೇ ಆವೃತ್ತಿಗೆ ಶಾಸಕ ಕೆ.ಜಿ ಬೋಪಯ್ಯ ಸಿದ್ದಾಪುರದ ಪ್ರೌಢಶಾಲಾ ಮೈದಾನದಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ವಿಭಿನ್ನ ರೀತಿಯಲ್ಲಿ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದು, ನೂರಾರು ಕ್ರೀಡಾಪಟುಗಳಿಗೆ ಪಂದ್ಯಾವಳಿಯಿಂದ ಅವಕಾಶ ದೊರೆತಿದೆ. ಐ.ಪಿ.ಎಲ್. ಮಾದರಿಯಲ್ಲಿ ಪಂದ್ಯಾವಳಿಯನ್ನು ಹಮ್ಮಿಕೊಂಡಿರುವದು ಶ್ಲಾಘನೀಯ ಎಂದರು.

ಜಿ.ಪಂ ಅಧ್ಯಕ್ಷ ಬಿ.ಎ ಹರೀಶ್ ಮಾತನಾಡಿ, ಪುಟ್ಟ ಜಿಲ್ಲೆ ಕೊಡಗಿನಲ್ಲಿ ದೊಡ್ಡ ಮಟ್ಟದಲ್ಲಿ ಕ್ರೀಡಾಕೂಟವನ್ನು ಹಮ್ಮಿಕೊಂಡಿರುವದು ಅಭಿನಂದನಾರ್ಹ ಎಂದರು. ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಮಾತನಾಡಿ, ಕ್ರೀಡೆಯು ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿ ಎಂದರು.

ವೇದಿಕೆಯಲ್ಲಿ ಕೂಡ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಕರ್ನಾಟಕ ರಣಜಿ ತಂಡದ ಆಟಗಾರ ಕೆ.ಬಿ. ಪವನ್, ಕನ್ನಡ ಚಿತ್ರನಟ ಕಿಶನ್ ಉತ್ತಪ್ಪ, ಹಾಸ್ಯನಟ ಅಜಿತ್, ಹೊಸೂರು ಗ್ರಾ.ಪಂ. ಸದಸ್ಯ ನರಸಿಂಹ, ಕಾಫಿ ಬೆಳೆಗಾರರಾದ ಅನಿಲ್ ಶೆಟ್ಟಿ, ಮರದ ವ್ಯಾಪಾರಿ ಶಮೀರ್, ಬಿ.ಜೆ.ಪಿ. ಮುಖಂಡ ಮಲ್ಲಂಡ ಮಧು ದೇವಯ್ಯ ಇದ್ದರು.

ಇದಕ್ಕೂ ಮೊದಲು ಸಿದ್ದಾಪುರದ ಪ್ಲಾಟಿನಂ ಪ್ಲಾಜದಿಂದ ಸಿದ್ದಾಪುರದ ಪ್ರೌಢಶಾಲಾ ಮೈದಾನದವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ 14 ತಂಡದ ಆಟಗಾರರು ಸಮವಸ್ತ್ರದೊಂದಿಗೆ ಪಾಲ್ಗೊಂಡರು. ಡೊಳ್ಳುಕುಣಿತ, ಗೊಂಬೆಗಳು ಮೆರವಣಿಗೆಗೆ ಮೆರುಗು ನೀಡಿದವು. ಅತರ್ರಾಷ್ಟ್ರೀಯ ಮ್ಯಾರಥಾನ್ ಪಟು ಹೊಸೋಕ್ಲು ಚಿಣ್ಣಪ್ಪ ಕ್ರೀಡಾಜ್ಯೋತಿಯನ್ನು ಮೈದಾನಕ್ಕೆ ತಂದು ಬೆಳಗಿಸಿದರು.

ಪತ್ರಕರ್ತರ ತಂಡಕ್ಕೆ ಗೆಲುವು

ಕೊಡಗು ಚಾಂಪಿಯನ್ಸ್ ಲೀಗ್ 2ನೇ ಆವೃತಿಯ ಪ್ರದರ್ಶನ ಪಂದ್ಯಾಟ ಕೊಡಗು ಪೊಲೀಸ್ ತಂಡ ಹಾಗೂ ಕೊಡಗು ಪತ್ರಕರ್ತರ ತಂಡದ ನಡುವೆ ನಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪತ್ರಕರ್ತರ ತಂಡ ನಿಗದಿತ 5 ಓವರ್‍ಗಳಿಗೆ 3 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕೊಡಗು ಪೊಲೀಸ್ ತಂಡ ನಿಗದಿತ 5 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಲಷ್ಟೆ ಶಕ್ತವಾಯಿತು. ಪತ್ರಕರ್ತರ ಪರ ಮುಸ್ತಫ 16 ಗಳಿಸಿದರು.