ಕುಶಾಲನಗರ, ಏ. 16: ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಮುದಾಯ ಅಭಿವೃದ್ಧಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆಯೋಜಿಸಿದ್ದ ವಿವಿಧ ತರಬೇತಿ ಶಿಬಿರದ ಫಲಾನುಭವಿಗಳಿಗೆ ಅರ್ಹತಾ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು. ಕಾಲೇಜು ಪ್ರಾಂಶುಪಾಲ ಹೆಚ್.ವಿ. ಶಿವಪ್ಪ ಅಧ್ಯಕ್ಷತೆಯಲ್ಲಿ ಸುವರ್ಣ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 200 ಕ್ಕೂ ಅಧಿಕ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಇದೇ ಸಂದರ್ಭ ಎಂಬ್ರಾಯಿಡರಿ, ಟೈಲರಿಂಗ್ ಸೇರಿದಂತೆ ವಿವಿಧ ರೀತಿಯ ತರಬೇತಿಗಳನ್ನು ಪಡೆದುಕೊಂಡ ಶಿಬಿರಾರ್ಥಿಗಳ ಮೂಲಕ ತಯಾರಿಸಿದ್ದ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಚೇಂಬರ್ ಆಫ್ ಕಾಮರ್ಸ್ ಜಿಲ್ಲಾ ಉಪಾಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಮಹಿಳೆಯರು ಸಂಘಸಂಸ್ಥೆಗಳ ಮೂಲಕ ನೀಡುವ ಶಿಬಿರಗಳಲ್ಲಿ ಪಾಲ್ಗೊಂಡು ತರಬೇತಿ ಪಡೆದುಕೊಂಡಲ್ಲಿ ಸ್ವ ಉದ್ಯೋಗ ಕೈಗೊಳ್ಳಲು ಸಹಕಾರಿಯಾಗಲಿದೆ. ಮನೆಯಲ್ಲಿಯೇ ನಡೆಸಬಹುದಾದ ಹಲವು ರೀತಿಯ ಸ್ವ ಉದ್ಯೋಗಗಳ ಮೂಲಕ ಆರ್ಥಿಕವಾಗಿ ಸಬಲರಾಗ ಬಹುದು ಎಂದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಎಸ್.ಕೆ. ಸತೀಶ್, ಯೋಜನೆಯ ಪ್ರಮುಖರಾದ ಪರಮೇಶ್ವರ್, ಶಿಬಿರದ ಸಂಯೋಜಕರಾದ ರೂಪಕುಮಾರ್, ಆಯೇಷಾ ಇದ್ದರು.