ಕೂಡಿಗೆ, ಮಾ. 16: ಜಿಲ್ಲೆಯಲ್ಲಿ ಸಹಕಾರ ಸಂಘಗಳ ಮೂಲಕ ಕಳೆದ 25 ವರ್ಷಗಳಿಂದ ರೈತರು ಪಡೆದ ಸಾಲದ ಜೊತೆಯಲ್ಲಿ ವರ್ಷಂಪ್ರತಿ ಸಾಲ ಮರು ಪಾವತಿ ಮಾಡುವ ಸಂದರ್ಭ ಬೆಳೆ ವಿಮೆಯನ್ನು ಪಡೆಯುತ್ತಿರುವದು ಸಹಕಾರ ಸಂಘಗಳಲ್ಲಿ ಸಾಮಾನ್ಯವಾಗಿದೆ.
ಜಿಲ್ಲೆಯ ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬೆಳೆ ಕಳೆದುಕೊಂಡರು ಅಂತಹ ರೈತರುಗಳಿಗೆ ಬೆಳೆ ವಿಮೆ ಪಾವತಿ ಮಾಡಲು ಸಹಕಾರ ಸಂಘಗಳಾಗಲಿ ಜಿಲ್ಲಾ ಕೇಂದ್ರ ಬ್ಯಾಂಕಿನವರಾಗಲಿ ಪ್ರಯತ್ನಿಸದಿರುವದು ರೈತರಲ್ಲಿ ಅಸಮಾಧಾನ ಉಂಟಾಗಿದೆ.
ಈಗಾಗಲೇ ಜಿಲ್ಲೆಯ ವಿವಿಧ ಸಹಕಾರ ಸಂಘಗಳು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಲಕ್ಷಗಟ್ಟಲೇ ಹಣವನ್ನು ಪಡೆದು ರೈತರಿಗೆ ಕೆಸಿಸಿ ಸಾಲದ ರೂಪದಲ್ಲಿ ವಿತರಣೆ ಮಾಡಿ ರೈತರ ಪ್ರಗತಿಗೆ ಸಹಕಾರಿಗಳಾಗಿದ್ದಾರೆ. ಆದರೆ, ಮರುಪಾವತಿ ಮಾಡಲು ಕೊನೆ ತಿಂಗಳು ಇದಾಗಿದೆ.
ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸಿದ್ದರೂ ಇಲ್ಲಿಯ ರೈತರು ಜಮೀನಿನಲ್ಲಿ ಸಮರ್ಪಕವಾಗಿ ಬೆಳೆ ಬಾರದೆ ನಷ್ಟ ಅನುಭವಿಸಿದ್ದರೂ ಇದೀಗ ಬೇರೆ ಕಡೆಗಳಲ್ಲಿ ಕೈಸಾಲ ಮಾಡಿ ಸಹಕಾರ ಸಂಘಕ್ಕೆ ಮರುಪಾವತಿ ಮಾಡುವ ಸಂದರ್ಭ ಸಹಕಾರ ಬ್ಯಾಂಕಿನವರು ಬಡ್ಡಿ ರಹಿತ ಹಣದ ಜೊತೆಗೆ ಬೆಳೆ ವಿಮೆಯನ್ನು ಕಟ್ಟಲು ಹೇಳುತ್ತಿರುವದು ಸರಿಯಾದ ಕ್ರಮವಲ್ಲ ಎಂದು ಕೂಡಿಗೆ, ಕೂಡುಮಂಗಳೂರು ವ್ಯಾಪ್ತಿಯ ನೂರಾರು ರೈತರು ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿರುವ ನೂರಾರು ಸಹಕಾರ ಸಂಘಗಳಲ್ಲಿ ಇದುವರೆಗೆ ಸಹಕಾರ ಸಂಘಗಳ ಮೂಲಕ ಸಾಲ ಪಡೆದ ರೈತರುಗಳಿಂದ ಕಳೆದ 2 ವರ್ಷಗಳಿಂದಲೂ ಬೆಳೆ ವಿಮೆ ಪಡೆದರು ಜಿಲ್ಲೆಯ ರೈತರುಗಳಿಗೆ ಬೆಳೆ ವಿಮೆ ವಿತರಣೆಯಾಗಿಲ್ಲ. ಈ ಹಣವನ್ನು ಬೇರೆ ಬರಗಾಲ ಪೀಡಿತ ಜಿಲ್ಲೆಗಳಿಗೆ ನೀಡಲಾಗಿದೆ ಎಂಬ ಸುದ್ದಿ ಜನವಲಯದಲ್ಲಿ ಕೇಳಿ ಬರುತ್ತಿದೆ.
ಬೆಳೆ ವಿಮೆಯನ್ನು ಕಟ್ಟಲು ಸಾಧ್ಯವಿಲ್ಲ ಎಂದು ರೈತರು ಆರೋಪಿಸಿದ ಹಿನ್ನೆಲೆ ತೊರೆನೂರು ಸಹಕಾರ ಬ್ಯಾಂಕಿನ ಮಾಸಿಕ ಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾ ಕೇಂದ್ರ ಬ್ಯಾಂಕಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಸಹಕಾರ ಸಂಘಕ್ಕೆ ಸಾಲ ನೀಡುವದರ ಬಗ್ಗೆ ಹಿಂದೇಟು ಹಾಕುವ ಪ್ರಸಂಗ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಎದುರಾಯಿತು. ಈ ಹಿನ್ನೆಲೆ ರೈತರು ಹಿಂದಿನಿಂದಲೂ ಕೃಷಿ ಬೆಳೆ ವಿಮೆಯನ್ನು ಕಟ್ಟುತ್ತಾ ಬಂದಿರುತ್ತಾರೆ. ರಾಜ್ಯ ಸರ್ಕಾರ ಕೊಡಗು ಜಿಲ್ಲೆಯನ್ನು ಬರಗಾಲ ಪ್ರದೇಶ ಎಂದು ಘೋಷಿಸಿದ ಹಿನ್ನೆಲೆ ಕೃಷಿ ಬೆಳೆ ವಿಮೆಯನ್ನು ಪಡೆಯದಂತೆ ರೈತರ ಕೃಷಿ ಸಾಲ ಮರುಪಾವತಿಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಹಕರಿಸಬೇಕೆಂದರು ತೊರೆನೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೃಷ್ಣೇಗೌಡ ತಿಳಿಸಿದರು.
ಇದೀಗ ಕಂದಾಯ ಇಲಾಖೆಯ ವತಿಯಿಂದ ಜಿಲ್ಲೆಯ ರೈತರಿಂದ ಬೆಳೆ ನಷ್ಟದ ಬಗ್ಗೆ ಅರ್ಜಿ ಸ್ವೀಕರಿಸಿದ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯವರು ಅರ್ಜಿಗಳನ್ನು ಪರಿಶೀಲಿಸಿ , ರಾಜ್ಯ ಸರ್ಕಾರ ಬರಗಾಲ ಪ್ರದೇಶ ಎಂದು ಘೋಷಿಸಿದ ಪ್ರಕಾರ ಜಿಲ್ಲಾಧಿಕಾರಿಗಳ ನಿಯಮದನುಸಾರ ಇದೀಗ ರೈತರುಗಳಿಗೆ ಅವರವರ ಆರ್‍ಟಿಸಿ ಅನುಗುಣವಾಗಿ ಪರಿಹಾರ ವಿತರಣೆಯಾಗುತ್ತಿದೆ.
ಆದರೂ ಜಿಲ್ಲೆಯು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿರುವದರಿಂದ ಸಹಕಾರ ಬ್ಯಾಂಕುಗಳಲ್ಲಿ ರೈತರಿಂದ ಬೆಳೆ ವಿಮೆ ಹಣವನ್ನು ಪಡೆಯಬಾರದೆಂದು ಕೂಡಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ, ಸ್ಥಳೀಯ ಪ್ರಗತಿಪರ ರೈತರುಗಳಾದ ಕೆ.ಸಿ. ನಂಜುಂಡಸ್ವಾಮಿ, ನಾಗರಾಜ ಶೆಟ್ಟಿ, ಮಹೇಶ್ ಕುಮಾರ್, ನಂಜುಂಡ, ಗಿರೀಶ್ ಒತ್ತಾಯಿಸಿದ್ದಾರೆ.