ನಾಪೋಕ್ಲು, ಏ. 16: ಸ್ಥಳೀಯ ಬಸ್ ನಿಲ್ದಾಣದಲ್ಲಿ ಕೂಡು ರಸ್ತೆಯ ಬಳಿ ತೀವ್ರ ಅಪಾಯದಲ್ಲಿರುವ ತೆರೆದ ಚರಂಡಿಯೊಂದಿದ್ದು ಜನಸಾಮಾನ್ಯರು ಪರದಾಡುವಂತಾಗಿದೆ. ಪಟ್ಟಣದಿಂದ ಬೇತು ಕಡೆಗೆ ತೆರಳುವ ರಸ್ತೆಯಲ್ಲಿನ ಮೋರಿಯೊಂದರ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯು ಇತ್ತೀಚೆಗೆ ನಡೆಸಿತು. ಆದರೆ ಮೋರಿಯ ಒಂದು ಭಾಗದಲ್ಲಿ ನೀರು ಹರಿಯುವ ಚರಂಡಿಗೆ ಪರ್ಯಾಯ ವ್ಯವಸ್ಥೆ ಮಾಡದಿರುವದು ಸಮಸ್ಯೆಗೆ ಕಾರಣವಾಗಿದೆ. ಇಲ್ಲಿ ಕಬ್ಬಿಣದ ರಾಡುಗಳನ್ನು ಕೆಲಸ ಪೂರ್ಣಗೊಳಿಸದೆ ಹಾಗೆಯೇ ಬಿಟ್ಟಿರುವದರಿಂದ ಕೆಲವರು ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚರಂಡಿಯಲ್ಲಿ ಕೊಳಚೆ ನೀರು ಸಂಗ್ರಹವಾಗಿ ದುರ್ವಾಸನೆ ಬೀರುತ್ತಿದೆ. ಜನಸಾಮಾನ್ಯರು ನಿತ್ಯ ಸಂಚರಿಸುವ ಈ ಮಾರ್ಗದಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೊಂಡು ಸಂಬಂಧಪಟ್ಟವರು ಜೀವಹಾನಿ ತಪ್ಪಿಸಬೇಕಾಗಿದೆ. ಇದೇ ಸ್ಥಳದ ಎದುರುಭಾಗದಲ್ಲಿ ವರ್ಷದ ಹಿಂದೆ ನಿವೃತ್ತ ಶಿಕ್ಷಕರೊಬ್ಬರು ಬಿದ್ದು ಮೃತಪಟ್ಟಿರುವದನ್ನು ನೆನೆಸಿಕೊಳ್ಳಬಹುದು. ಕಾಮಗಾರಿ ಪೂರ್ಣಗೊಳಿಸಲು ಮೀನಾಮೇಷ ಎಣಿಸುತ್ತಿರುವ ಇಲಾಖೆಯ ಬಗ್ಗೆ ಜನಸಾಮಾನ್ಯರು ಆಕ್ರೋಶಗೊಂಡಿದ್ದಾರೆ.