ಮಡಿಕೇರಿ, ಏ. 16: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ಸರ್ಕಾರದ 2017-18ನೇ ಸಾಲಿನ ‘ಜನಪರ ಜನಪ್ರಿಯ’ ಬಜೆಟ್ ಕಾರ್ಯಕ್ರಮಗಳ ಮಾಹಿತಿ ಒಳಗೊಂಡ ವಿಶೇಷ ಪ್ರಚಾರಾಂದೋಲನಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ ತಿಂಗಳಲ್ಲಿ ಮಂಡಿಸಿದ ಬಜೆಟ್‍ನ ಪ್ರಮುಖ ಅಂಶಗಳ ಮಾಹಿತಿಯನ್ನು ಜಿಲ್ಲೆಯ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಬಜೆಟ್ ವಿಶೇಷ ಪ್ರಚಾರಾಂದೋಲನ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಎಲ್ಲಾ ಹೋಬಳಿ ಕೇಂದ್ರಗಳು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ವಾರ್ತಾ ಇಲಾಖೆಯಿಂದ ಹೊರತರಲಾಗಿರುವ ಪುಸ್ತಕಗಳನ್ನು ವಿತರಿಸುವದು, ಸರ್ಕಾರ ಘೋಷಿಸಿರುವ ಜನಪರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಅನ್ನಭಾಗ್ಯ ಯೋಜನೆಯಡಿ 7 ಕೆ.ಜಿಗೆ ಅಕ್ಕಿ ಹೆಚ್ಚಳ, ವಿದ್ಯಾರ್ಥಿಗಳಿಗೆ 5 ದಿನ ಕ್ಷೀರಭಾಗ್ಯ ಯೋಜನೆಯಡಿ ಹಾಲು ವಿತರಣೆ, ಶುದ್ದ ಕುಡಿಯುವ ನೀರು ಘಟಕ ಸ್ಥಾಪನೆ, ಶೌಚಾಲಯ ನಿರ್ಮಾಣ, ಪ್ರತೀ ಜಿಲ್ಲಾ ಕೇಂದ್ರದಲ್ಲಿ ಗಾಂಧೀ ಭವನ ನಿರ್ಮಾಣ ಮತ್ತಿತರ ಮಾಹಿತಿಯನ್ನು ಕ್ಷೇತ್ರ ಪ್ರಚಾರ ವಾಹನ ಒಳಗೊಂಡಿದೆ ಎಂದು ವಾರ್ತಾಧಿಕಾರಿ ಚಿನ್ನಸ್ವಾಮಿ ತಿಳಿಸಿದ್ದಾರೆ.