ಕುಶಾಲನಗರ, ಏ. 16: ಕುಶಾಲನಗರ ಪಟ್ಟಣವನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕುಡಾ ಅಧ್ಯಕ್ಷ ಮಂಜುನಾಥ್ ಗುಂಡೂರಾವ್ ಹೇಳಿದ್ದಾರೆ. ಅವರು ಕುಡಾ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಶಾಲನಗರ ಪಟ್ಟಣ ಪಂಚಾಯಿತಿ ಸೇರಿದಂತೆ ನೆರೆಯ ಗ್ರಾಮಗಳನ್ನು ಸೇರ್ಪಡೆಗೊಳಿಸಿ ಯೋಜನೆ ರೂಪಿಸಲಾಗಿದೆ ಎಂದರು.

ಕುಶಾಲನಗರ ಪಟ್ಟಣದಲ್ಲಿ ಒಳಾಂಗಣ ಕ್ರೀಡಾಂಗಣವೊಂದನ್ನು ನಿರ್ಮಾಣ ಮಾಡಲು ರೂ. 10 ಕೋಟಿ ಅನುದಾನಕ್ಕೆ ಸರಕಾರವನ್ನು ಕೋರಿದ್ದು ಪ್ರಸ್ತಾವನೆ ಪ್ರಗತಿಯಲ್ಲಿದೆ. ಈ ಸಂಬಂಧ ಕುಶಾಲನಗರ ಪಟ್ಟಣ ಪಂಚಾಯಿತಿ ಜಾಗ ಮೀಸಲಿರಿಸಿದೆ. ಕುಶಾಲನಗರ ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸುವದರೊಂದಿಗೆ ಇಎಸ್‍ಐ ಆಸ್ಪತ್ರೆ ನಿರ್ಮಾಣಕ್ಕೆ ಕೂಡ ಸರಕಾರದ ಗಮನ ಸೆಳೆಯಲಾಗುವದು ಎಂದು ತಿಳಿಸಿದ್ದರು.

ಈ ಎಲ್ಲಾ ಯೋಜನೆಗಳಿಗೆ ಸ್ಥಳೀಯ ಜನಪ್ರತಿನಿಧಿಗಳಲ್ಲದೆ ಸಂಸತ್ ಸದಸ್ಯರ ಸಹಕಾರ ಅಗತ್ಯವಿದೆ ಎಂದ ಅವರು ಸಂಸತ್ ಸದಸ್ಯ ಪ್ರತಾಪ್‍ಸಿಂಹ ಅವರಿಂದ ಕೊಡಗು ಜಿಲ್ಲೆಗೆ ಶೂನ್ಯ ಸಾಧನೆಯಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಕುಶಾಲನಗರ ಮೂಲಕ ಮಡಿಕೇರಿಗೆ ರೈಲ್ವೇ ಮಾರ್ಗದ ಯೋಜನೆಯ ಅಗತ್ಯವಿಲ್ಲ ಎಂದ ಅವರು ಕಾವೇರಿ ನದಿ ಮಾಲಿನ್ಯಗೊಳ್ಳುತ್ತಿರುವ ಬಗ್ಗೆ ಸರಕಾರ ಜನರಿಗೆ ಅರಿವು ಮೂಡಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ. ಈ ಸಂಬಂಧ ಕಾವೇರಿ ನದಿ ಸ್ವಚ್ಛತೆಗಾಗಿ ಸರಕಾರದ ಮೂಲಕ 1 ರೂ.ಗಳ ಸೆಸ್ ಸಂಗ್ರಹ ಮಾಡುವ ಬಗ್ಗೆ ಚಿಂತನೆ ಹರಿಸಬೇಕು. ಕುಶಾಲನಗರ ಸೇರಿದಂತೆ ಕುಡಾ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವದು. ತಾವರೆಕೆರೆ, ಸೋಮೇಶ್ವರ ಕೆರೆಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಕುಶಾಲನಗರ ಪಟ್ಟಣದಲ್ಲಿ ಅಕ್ರಮವಾಗಿ ನಿಯಮ ಬಾಹಿರವಾಗಿ ನಿರ್ಮಾಣಗೊಂಡಿರುವ ಬಹುಮಹಡಿ ಕಟ್ಟಡಗಳ ತೆರವಿಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಇದು ಸ್ಥಳೀಯ ಆಡಳಿತಗಳ ಅಧಿಕಾರಿಗಳ ವೈಫಲ್ಯವಾಗಿದೆ. ಕಟ್ಟಡ ನಿರ್ಮಾಣ ಸಂದರ್ಭ ಆಗಿಂದಾಗ್ಗೆ ಪರಿಶೀಲನೆ ನಡೆಸಿದಲ್ಲಿ ಇಂತಹ ಅಕ್ರಮಗಳು ನಡೆಯಲು ಅಸಾಧ್ಯ ಎಂದರು. ಕಸ್ತೂರಿ ರಂಗನ್ ವರದಿ ಮೂಲಕ ಜಿಲ್ಲೆಗಳ ಪ್ರಮುಖ ಗ್ರಾಮಗಳನ್ನು ವನ್ಯ ಪರಿಸರ ಸೂಕ್ಷ್ಮ ಪರಿಸರ ತಾಣ ಎಂದು ಘೋಷಿಸುವ ಕರಡು ಪ್ರತಿಯ ಬಗ್ಗೆ ಮಂಜುನಾಥ್ ಅವರಲ್ಲಿ ಪ್ರತಿಕ್ರಿಯೆ ಬಯಸಿದಾಗ ಈ ಬಗ್ಗೆ ತನಗೆ ವರದಿಯ ಮಾಹಿತಿ ಕೊರತೆ ಇರುವದಾಗಿ ತಿಳಿಸಿದರು.

ಕುಡಾ ಸದಸ್ಯ ಕಾರ್ಯದರ್ಶಿ ಕುಶಾಲನಗರ ಕಚೇರಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಇದರಿಂದ ಕಚೇರಿಯ ಕೆಲಸ ಕಾರ್ಯ ಕುಂಠಿತಗೊಂಡಿದೆ ಎಂದು ಒಪ್ಪಿದರಲ್ಲದೆ, ಈ ಬಗ್ಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವದಾಗಿ ಹೇಳಿದರು. ಕುಡಾ ಕಚೇರಿ ಬಡಾವಣೆಯೊಂದರ ಮನೆಯ ಕಟ್ಟಡದಲ್ಲಿ ನಡೆಯುತ್ತಿದ್ದು, ಸದ್ಯದಲ್ಲಿಯೇ ನೂತನ ಕಟ್ಟಡ ನಿರ್ಮಾಣಕ್ಕೆ ಚಿಂತನೆ ಹರಿಸಲಾಗಿದೆ ಎಂದು ಮಂಜುನಾಥ್ ಪ್ರತಿಕ್ರಿಯಿಸಿದರು.

ಗೋಷ್ಠಿಯಲ್ಲಿ ಕುಡಾ ಸಮಿತಿ ಸದಸ್ಯ ಹೆಚ್.ಕೆ. ಕರಿಯಪ್ಪ ಇದ್ದರು.