ಸೋಮವಾರಪೇಟೆ,ಏ.11: 12ನೇ ಶತಮಾನದಲ್ಲೇ ಸ್ತ್ರೀ ಸಮಾನತೆಗೆ ಹೋರಾಟ ಮಾಡಿದ ಅಕ್ಕಮಹಾದೇವಿ ಅವರ ಚಳುವಳಿಗಳು ಆಧುನಿಕ ಯುಗದ ಮಹಿಳೆಯರಿಗೂ ಸ್ಫೂರ್ತಿಯಾಗ ಬೇಕಿದೆ ಎಂದು ತುಮಕೂರಿನ ನಿವೃತ್ತ ಉಪನ್ಯಾಸಕಿ ಅಮೃತಾ ವೀರಭದ್ರಯ್ಯ ಅಭಿಮತ ವ್ಯಕ್ತಪಡಿಸಿದರು. ಇಲ್ಲಿನ ಅಕ್ಕನ ಬಳಗದ ಆಶ್ರಯದಲ್ಲಿ ವೀರಶೈವ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಅಕ್ಕಮಹಾದೇವಿ ಜಯಂತಿ ಹಾಗೂ ಅಕ್ಕನ ಬಳಗದ ಬೆಳ್ಳಿಹಬ್ಬ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದ ಪುರುಷ ಪ್ರಧಾನ ಸಮಾಜದಲ್ಲಿದ್ದ ಲಿಂಗಭೇದ, ಅಸಮಾನತೆ, ಕಂದಾಚಾರಗಳ ನಡುವೆ ಜೀವನದ ಆಸೆ ಆಕಾಂಕ್ಷೆಗಳನ್ನು ತೊರೆದು ಸಮಾಜ ಸುಧಾರಣೆಗೆ ಧುಮುಕಿದ ಮಹಾನ್ ಸಾಧ್ವಿ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮುದ್ದಿನಕಟ್ಟೆ ಮಠಾಧೀಶರಾದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಆಸ್ತಿ, ಐಶ್ವರ್ಯವಿದ್ದರೂ ನೆಮ್ಮದಿ ಹುಡುಕುವಂತಾಗಿದೆ. ದ್ವೇಷ, ಅಸೂಯೆಗಳಿಂದ ಜೀವನ ಜರ್ಝರಿತವಾಗುತ್ತಿದೆ. 12ನೇ ಶತಮಾನದ ಶರಣರ ಜೀವನ ಇಂದಿನ ಜನಾಂಗಕ್ಕೆ ಆದರ್ಶವಾಗಬೇಕು. ಶರಣರ ಸ್ಮರಣೆಯಷ್ಟೆ ಸಾಲದು; ಅವರ ಆಚಾರ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಕೊಳ್ಳ ಬೇಕೆಂದರು.
(ಮೊದಲ ಪುಟದಿಂದ) ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪಟ್ಟಣ ವಿರಕ್ತ ಮಠಾಧೀಶ ವಿಶ್ವೇಶ್ವರ ಸ್ವಾಮೀಜಿ, ಅಧ್ಯಕ್ಷತೆಯನ್ನು ಅಕ್ಕನ ಬಳಗದ ಅಧ್ಯಕ್ಷೆ ಜಲಜಾಶೇಖರ್ ವಹಿಸಿದ್ದರು. ಕಳೆದ 25 ವರ್ಷದ ಅವಧಿಯಲ್ಲಿ ಅಕ್ಕನ ಬಳಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ದಾಕ್ಷಾಯಿಣಿ ಬಸವಕುಮಾರ್, ಆನಂದಮಯಿ ಎಸ್. ಕೆರೆ, ರತ್ನಮ್ಮ ಜಯರುದ್ರಪ್ಪ, ಶಾರದ ಶಂಕರಪ್ಪ, ಸುಮಾ ಸುದೀಪ್, ಉಷಾ ತೇಜಸ್ವಿ, ಭಗವತಿ ದೇಶ್‍ಮುಖ್, ಜಲಜಾ ಶೇಖರ್‍ರವರನ್ನು ಸನ್ಮಾನಿಸಲಾಯಿತು.
ವೀರಶೈವ ಸಮಾಜದ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ತೇಜಸ್ವಿ, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಮಹೇಶ್, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅಕ್ಕನ ಬಳಗದ ಉಪಾಧ್ಯಕ್ಷೆ ಉಮಾ ರುದ್ರಪ್ರಸಾದ್, ಕಾರ್ಯದರ್ಶಿ ಲತಾ ಮಂಜುನಾಥ್, ಸಹ ಕಾರ್ಯದರ್ಶಿ ಜಲಜಾ ವಿಜಯ್‍ಕುಮಾರ್, ನಿರ್ದೇಶಕರು ಗಳಾದ ಕವಿತ ಸಂಜಯ್, ಮಂಗಳಾ ಆನಂದ್, ಭಾಗ್ಯ ಷಡಾಕ್ಷರಿ ಉಪಸ್ಥಿತರಿದ್ದರು.