ಕುಶಾಲನಗರ, ಮಾ. 31: ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ವತಿಯಿಂದ ನಿರ್ಮಾಣಗೊಂಡ ಸುವರ್ಣ ಭವನದ ಕಟ್ಟಡ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಸರಕಾರಿ ಪಾಲಿಟೆಕ್ನಿಕ್ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಅಂದಾಜು ರೂ. 40 ಲಕ್ಷ ವೆಚ್ಚದಲ್ಲಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ನಿರ್ಮಾಣಗೊಂಡಿದೆ.

ಅಂದಾಜು 500 ಮಂದಿ ಏಕಕಾಲದಲ್ಲಿ ಆಸೀನರಾಗುವ ಸಾಮಥ್ರ್ಯವುಳ್ಳ ಕಾವೇರಿ ಸಭಾಂಗಣ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿದ್ದು, ತಾ. 2 ರಂದು ಉದ್ಘಾಟನೆಗೆ ಸಜ್ಜುಗೊಂಡಿದೆ. 2015 ರ ಅಂತ್ಯದಲ್ಲಿ ಕಟ್ಟಡಕ್ಕೆ ಭೂಮಿಪೂಜೆ ನಡೆಸಲಾಗಿದ್ದು ಕೇವಲ 1 ವರ್ಷ 4 ತಿಂಗಳ ಅವಧಿಯಲ್ಲಿ ಆಕರ್ಷಕ ಕಟ್ಟಡವನ್ನು ನಿರ್ಮಾಣಗೊಳಿಸಲಾಗಿದೆ.

ವಿಧಾನ ಪರಿಷತ್ ಸಭಾಪತಿ, ಕ್ಷೇತ್ರ ಶಾಸಕರ ನಿಧಿಯ ಅನುದಾನ, ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಹಣ ಸಂಗ್ರಹಿಸಿ ಅತ್ಯುತ್ತಮ ಸಮುದಾಯ ಭವನವೊಂದನ್ನು ನಿರ್ಮಿಸುವಲ್ಲಿ ಸಂಸ್ಥೆಯ ಪ್ರಮುಖರು ಶ್ರಮಿಸಿದ್ದಾರೆ.

ಸರಕಾರಿ ಪಾಲಿಟೆಕ್ನಿಕ್‍ನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಾಂಸ್ಕøತಿಕ ಚಟುವಟಿಕೆಗಳಿಗೆ ಈ ಭವನ ಬಹಳ ಅನುಕೂಲ ಕಲ್ಪಿಸಿದಂತಾಗಿದೆ. ರಾಜ್ಯದ ತಾಂತ್ರಿಕ ಶಿಕ್ಷಣ ಕೇಂದ್ರಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಸಹಕಾರದಿಂದ ನಿರ್ಮಾಣಗೊಂಡ ಆಕರ್ಷಕ ಸಮುದಾಯ ಭವನ ಎಂಬ ಖ್ಯಾತಿ ಈ ಕಟ್ಟಡಕ್ಕೆ ಲಭಿಸಿದೆ.

ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ 50 ಸಂವತ್ಸರ ಸಂದ ಸಂದರ್ಭದಲ್ಲಿ ಸುವರ್ಣ ಭವನ ಕಟ್ಟಡಕ್ಕೆ ಚಿಂತನೆ ಹರಿಸಲಾಗಿತ್ತು. ಪ್ರಾಂಶುಪಾಲರಾದ ಹೆಚ್.ವಿ. ಶಿವಪ್ಪ ಮಾರ್ಗದರ್ಶನದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಎಂ.ಕೆ. ದಿನೇಶ್ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಪಾಲಿಟೆಕ್ನಿಕ್ ಕಾಲೇಜಿನ ಬೋಧಕ ವರ್ಗದ ಸಹಕಾರದೊಂದಿಗೆ ಈ ನೂತನ ಸುವರ್ಣ ಭವನ ಏಪ್ರಿಲ್ 2 ರಂದು ಲೋಕಾರ್ಪಣೆಗೆ ಸಿದ್ಧಗೊಂಡಿದೆ ಎಂದು ಸಂಘದ ಕಾರ್ಯದರ್ಶಿ ಎನ್.ಎಸ್. ಲೋಕೇಶ್ ತಿಳಿಸಿದ್ದಾರೆ.

ಸಭಾಂಗಣಕ್ಕೆ ಕಾವೇರಿ ವೇದಿಕೆ ಎಂದು ನಾಮಕರಣ ಮಾಡಲಾಗಿದ್ದು, ಅತ್ಯುತ್ತಮ ವೇದಿಕೆ ಈ ಭವನದಲ್ಲಿ ನಿರ್ಮಾಣಗೊಂಡಿದೆ. ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಈ ಭವನದಲ್ಲಿ ಕಾಲೇಜಿನ ಸಿಬ್ಬಂದಿಗಳ ಕುಟುಂಬ ಸದಸ್ಯರ ಕಾರ್ಯಕ್ರಮ ಏರ್ಪಡಿಸಲು ಉಚಿತವಾಗಿ ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ಹರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಕೆ. ದಿನೇಶ್ ತಿಳಿಸಿದ್ದಾರೆ.

ಸುವರ್ಣ ಭವನದ ಉದ್ಘಾಟನೆ ತಾ. 2 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು ವಿಧಾನ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಉದ್ಘಾಟಿಸಲಿದ್ದಾರೆ. ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಹೆಚ್.ಯು. ತಳವಾರ್ ಕಾವೇರಿ ವೇದಿಕೆ ಉದ್ಘಾಟನೆ ನಡೆಸುವರು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ. ಇದೇ ಸಂದರ್ಭ ಕಾವೇರಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ ಜರುಗಲಿದೆ. ಸಮಾರೋಪ ಸಮಾರಂಭವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಉದ್ಘಾಟಿಸುವರು.

- ಚಂದ್ರಮೋಹನ್