ಮಡಿಕೇರಿ ಮಾ.31 : ಜೀವನದಿ ಕಾವೇರಿಯಲ್ಲಿ ದಿನ ಕಳೆದಂತೆ ನೀರಿನ ಹರಿವು ಕ್ಷೀಣಿಸುತ್ತಿದ್ದು, ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿರುವದರಿಂದ ಕೊಡಗು ಜಿಲ್ಲಾ ವ್ಯಾಪ್ತಿಯ ನದಿ ತಟಗಳಲ್ಲಿ ಮುಂದಿನ ಎರಡು ತಿಂಗಳ ಕಾಲ ವಾಣಿಜ್ಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕೆಂದು ಕಾವೇರಿ ನದಿ ಸ್ವಚ್ಛತಾ ಆಂದೋಲನಾ ಸಮಿತಿ ಒತ್ತಾಯಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ದೇವರ ಪೂಜೆಗೂ ನದಿ ನೀರು ಲಭ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರಿಸರ ಕಾಳಜಿಯೊಂದಿಗೆ ಕಾವೇರಿ ನದಿಯ ಸಂರಕ್ಷಣೆಯಾಗಬೇಕಾಗಿದೆ ಎಂದು ಹೇಳಿದರು.

ಪ್ರವಾಸೋದ್ಯಮದ ನೆಪದಲ್ಲಿ ಪರಿಸರ ನಾಶವಾಗುತ್ತಿರುವದಲ್ಲದೆ, ಕಾವೇರಿ ನದಿ ತಟ ಸಂಪೂರ್ಣವಾಗಿ ಮಲಿನವಾಗುತ್ತಿದೆ. ನೈಸರ್ಗಿಕವಾಗಿ ಹರಿಯುವ ನೀರಿಗೆ ರೆಸಾರ್ಟ್‍ಗಳು ತಡೆಗೋಡೆ ನಿರ್ಮಿಸುತ್ತಿರುವದರಿಂದ ನದಿಗೆ ನೀರು ಹರಿಯದೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಆರೋಪಿಸಿದ ಅವರು, ಮುಂದಿನ ದಿನಗಳಲ್ಲಿ ಆತಂಕಕಾರಿ ಜಲಕ್ಷಾಮ ವನ್ನು ರಾಜ್ಯದ ಜನ ಎದುರಿಸಬೇಕಾದ ಸ್ಥಿತಿ ಉದ್ಭವಿಸಬಹುದೆಂದು ಎಚ್ಚರಿಕೆ ನೀಡಿದರು.

ಪ್ರವಾಸಿ ಕೇಂದ್ರಗಳಾದ ದುಬಾರೆ, ಕಾವೇರಿ ನಿಸರ್ಗಧಾಮ, ಕಣಿವೆ ಸೇರಿದಂತೆ ಪುಣ್ಯ ಕ್ಷೇತ್ರಗಳಲ್ಲಿ ಪ್ರವಾಸಿಗರಿಂದ ನದಿ ನೀರು ಕಲುಷಿತಗೊಳ್ಳದಂತೆ ಸ್ಥಳೀಯ ಆಡಳಿತ ವ್ಯವಸ್ಥೆ ಕಠಿಣ ಕ್ರಮ ಕೈಗೊಳ್ಳಬೇಕು, ಮುಂದಿನ ಎರಡು ತಿಂಗಳ ಕಾಲ ಕಾವೇರಿ ನದಿ ತಟಗಳಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುವ ರ್ಯಾಫ್ಟಿಂಗ್ ಹಾಗೂ ಬೋಟಿಂಗ್ ಚಟುವಟಿಕೆಗಳನ್ನು ಜಿಲ್ಲಾಧಿಕಾರಿಗಳು ನಿರ್ಬಂಧಿಸಬೇಕು, ಜಿಲ್ಲೆಯಲ್ಲಿರುವ ಎಲ್ಲಾ ಜಲಮೂಲಗಳ ಸಂರಕ್ಷಣೆಗೆ ಸ್ಥಳೀಯ ಆಡಳಿತ ವ್ಯವಸ್ಥೆ ಕಾರ್ಯ ಯೋಜನೆಯನ್ನು ರೂಪಿಸಬೇಕು, ನಿಯಮ ಬಾಹಿರವಾಗಿ ನೈಸರ್ಗಿಕ ನೀರಿಗೆ ತಡೆಯೊಡ್ಡಿರುವ ರೆಸಾರ್ಟ್‍ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನದಿ ತಟದಲ್ಲಿ ನಿರ್ಮಾಣಗೊಂಡಿರುವ ಪೂಜಾ ಮಂದಿರಗಳ ಹಾಗೂ ಸಮುದಾಯ ಕೇಂದ್ರಗಳ ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕವಾದ ಶಾಶ್ವತ ಯೋಜನೆಯನ್ನು ರೂಪಿಸುವ ಮೂಲಕ ನದಿ ಕಲುಷಿತಗೊಳ್ಳುವದನ್ನು ತಡೆಯಬೇಕು. ಅಘೋಷಿತ ಪ್ರವಾಸಿ ಕೇಂದ್ರಗಳ ವಿರುದ್ಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿರುವದಾಗಿ ಚಂದ್ರಮೋಹನ್ ತಿಳಿಸಿದರು.

ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ನದಿ ತಟದಲ್ಲಿ ಯಾವದೇ ರೀತಿಯ ಅಕ್ರಮ ಚಟುವಟಿಕೆಗಳು, ಕೈಗಾರಿಕಾ ಸ್ಥಾವರಗಳು, ನದಿ ನೀರನ್ನು ಕಲುಷಿತಗೊಳಿಸುವ ಘಟಕಗಳು ಸ್ಥಾಪನೆಯಾಗದಂತೆ ಎಚ್ಚರ ವಹಿಸಬೇಕೆಂದ ಅವರು, ನದಿ ತಟಗಳಲ್ಲಿ ಮಾಂಸ ಮಾರಾಟ ಮಳಿಗೆಗಳನ್ನು ತೆರೆಯದಂತೆ ಈಗಾಗಲೇ ಸ್ಥಳೀಯ ಆಡಳಿತ ಸಂಸ್ಥೆಗಳು ಕ್ರಮ ಕೈಗೊಂಡಿದ್ದು, ಇದು ಸ್ವಾಗತಾರ್ಹವೆಂದರು.

ಶುಂಠಿ ತೊಳೆಯುವ ಘಟಕಗಳಿಂದ ಹರಿಬಿಡುವ ನೀರು ಕೂಡ ವಿಷಕಾರಿಯಾಗಿದ್ದು, ಇವುಗಳನ್ನು ನಿಯಂತ್ರಿಸುವ ಅಗತ್ಯವಿದೆ. ದುಬಾರೆ ಒಂದು ಸಾಕಾನೆ ಶಿಬಿರವಾಗಿದೆ. ಆದರೆ, ಇದನ್ನು ಪ್ರವಾಸಿ ಕೇಂದ್ರದಂತೆ ಪ್ರತಿಬಿಂಬಿಸಿ ಪ್ರವಾಸಿಗರಿಂದ ಕೋಟಿಗಟ್ಟಲೆ ಹಣ ಸಂಗ್ರಹಿಸಲಾಗುತ್ತಿದೆ. ಕೊಡಗಿನಲ್ಲಿ ಪ್ರವಾಸಿ ತಾಣಗಳಲ್ಲಿ ಯಾವದೇ ಭದ್ರತೆಯ ವ್ಯವಸ್ಥೆ ಇಲ್ಲವೆಂದು ಚಂದ್ರಮೋಹನ್ ಆರೋಪಿಸಿದರು.

ಪ್ರಾಣಿ ಪಕ್ಷಿಗಳು ಕೂಡ ನೀರು ಕುಡಿಯಲು, ಮನುಷ್ಯರ ಅನುಮತಿ ಪಡೆಯಬೇಕಾದ ಪರಿಸ್ಥಿತಿ ಬಂದೊದಗಿದೆ. ಕಾವೇರಿ ನದಿ ಸಂರಕ್ಷಣೆ ಮತ್ತು ಸ್ವಚ್ಛತೆಗಾಗಿ ಬಜೆಟ್‍ನಲ್ಲಿ ನಿರೀಕ್ಷಿತ ಯೋಜನೆಯನ್ನು ಘೋಷಿಸಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.

ಸಮಿತಿಯ ಪ್ರಮುಖ ಕೆ.ಜಿ. ಮನು ಮಾತನಾಡಿ, ಕುಶಾಲನಗರ ಪಟ್ಟಣಕ್ಕೆ ಕಳೆದ 45 ವರ್ಷಗಳಿಂದ ಮರಳು ತಡೆಗೋಡೆಯನ್ನಷ್ಟೇ ನಿರ್ಮಿಸಿ ಕಾವೇರಿ ನದಿಯಿಂದ ನೀರು ಪಡೆಯಲಾಗುತ್ತಿದೆ. ಇದೀಗ 12 ಕೋಟಿ ರೂ. ವೆಚ್ಚದಲ್ಲಿ ಹಾರಂಗಿಯ ಮೂಲಕ ಕುಡಿಯುವ ನೀರು ಪಡೆಯಲು ಮುಂದಾಗಿರುವದು ದುಂದು ವೆಚ್ಚದ ಯೋಜನೆಯಾಗಿದೆ ಎಂದು ಆರೋಪಿಸಿದರು. ಕಾವೇರಿ ನದಿ ನೀರನ್ನೇ ಬಳಸಿಕೊಳ್ಳಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ನದಿ ಜಾಗೃತಿ ಸಮಿತಿ ಅಧ್ಯಕ್ಷರಾದ ಡಿ.ಆರ್. ಸೋಮಶೇಖರ್, ಮಂಡೇಪಂಡ ಬೋಸ್ ಮೊಣ್ಣಪ್ಪ ಹಾಗೂ ನಿಡ್ಯಮಲೆ ದಿನೇಶ್ ಉಪಸ್ಥಿತರಿದ್ದರು.