ಕುಶಾಲನಗರ, ಮಾ. 31: ಲಾರಿ ಮಾಲೀಕರ ಸಂಘಗಳು ಹಲವು ಬೇಡಿಕೆಗಳನ್ನು ಮುಂದಿಟ್ಟು ನಡೆಸುತ್ತಿರುವ ಮುಷ್ಕರ ಇದೀಗ 3ನೇ ದಿನಕ್ಕೆ ಕಾಲಿಟ್ಟಿದೆ. ರಾಷ್ಟ್ರದಾದ್ಯಂತ ನಡೆಯುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ಕುಶಾಲನಗರ ಕಾವೇರಿ ಲಾರಿ ಮಾಲೀಕರ ಸಂಘ ಮತ್ತು ಮಿನಿ ಲಾರಿ ಮಾಲೀಕರ ಸಂಘದ ನೇತೃತ್ವದಲ್ಲಿ ಸ್ಥಳೀಯ ಸರಕು ಸಾಗಾಟ ವಾಹನಗಳು ಸೇರಿದಂತೆ ಕುಶಾಲನಗರ ಮೂಲಕ ಹಾದು ಹೋಗುತ್ತಿದ್ದ 500 ಕ್ಕೂ ಅಧಿಕ ವಾಹನಗಳು ಮುಷ್ಕರದಲ್ಲಿ ಪಾಲ್ಗೊಂಡು ಸರಕಾರದ ಧೋರಣೆ ವಿರುದ್ಧ ಪ್ರತಿಭಟಿಸಿದರು.
ಕುಶಾಲನಗರ ಮಾರುಕಟ್ಟೆ ಆವರಣದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ನೂರಾರು ಚಾಲಕರು, ಮಾಲೀಕರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭ ಮಾತನಾಡಿದ ಕಾವೇರಿ ಲಾರಿ ಮಾಲೀಕರ ಸಂಘದ ಪ್ರಮುಖ ಟಿ.ಕೆ. ಗಣೇಶ್, ಬೇಡಿಕೆ ಈಡೇರುವ ತನಕ ಮುಷ್ಕರ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದರು. ಕಾವೇರಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಸಿ. ನಾಗರಾಜ್, ಕಾರ್ಯದರ್ಶಿ ಲೋಕೇಶ್, ಮಿನಿ ಲಾರಿ ಚಾಲಕರು, ಮಾಲೀಕರ ಸಂಘದ ಅಧ್ಯಕ್ಷ ಕೆ.ಎನ್. ದೊಡ್ಡಣ್ಣ, ಕಾರ್ಯದರ್ಶಿ ಜಗದೀಶ್ ನೇತೃತ್ವದಲ್ಲಿ ಕಳೆದ 2 ದಿನಗಳಿಂದ ಮುಷ್ಕರ ನಡೆಯುತ್ತಿದೆ. ಸರಕು ಸಾಗಾಟ ವಾಹನಗಳ ಮುಷ್ಕರದಿಂದ ಕುಶಾಲನಗರ ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟಿನಲ್ಲಿ ಕೂಡ ಏರುಪೇರು ಕಾಣುವಂತಾಗಿದೆ. ಹೊರಗಿನಿಂದ ಸರಬರಾಜಾಗುವ ಸರಂಜಾಮುಗಳು ತಲುಪದೆ ವ್ಯಾಪಾರಿಗಳು ಪರದಾಡುವ ಸ್ಥಿತಿ ಎದುರಾಗಿದೆ.