ವೈವಿಧ್ಯಮಯ ಪರಿಸರ ಚಟುವಟಿಕೆಗಳನ್ನು ಅಳವಡಿಸಿ ಕೊಂಡು, ಹಚ್ಚಹಸುರಿನ ಪ್ರಕೃತಿ ಸೌಂದರ್ಯದ ನಡುವೆ ಸ್ವಚ್ಛತೆಗೆ ಆದ್ಯತೆ ಕಲ್ಪಿಸುತ್ತಾ ಕಂಗೊಳಿಸುತ್ತಿರುವ ಗರಗಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಿಲ್ಲಾ ಮಟ್ಟದ ಪರಿಸರ ಮಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಪ್ರಶಸ್ತಿ ಯೊಂದಿಗೆ ರೂ. 30 ಸಾವಿರ ನಗದು ಬಹುಮಾನವನ್ನು ಕೂಡ ಪಡೆದು ಕೊಂಡಿದೆ. ಕಳೆದ 60 ವರ್ಷಗಳ ಹಿಂದೆ ಸ್ಥಾಪನೆ ಗೊಂಡ ಈ ಸರ್ಕಾರಿ ಶಾಲೆ ಆರಂಭದಲ್ಲಿ ಕಿರಿಯ ಪ್ರಾಥಮಿಕ ವಾಗಿದ್ದು, 1993-94ನೇ ಸಾಲಿನಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಟ್ಟಿತು. ಕಳೆದ 20 ವರ್ಷಗಳ ಹಿಂದೆ ಸೋಮವಾರಪೇಟೆ ವಿಭಾಗದ ಅರಣ್ಯ ಇಲಾಖೆಯವರು ಸಾಮಾಜಿಕ ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಆಗಿನ ಮುಖ್ಯೋಪಾಧ್ಯಾಯ ಎಂ. ಪಿ. ವಸಂತ್ ಅವರ ಅಧಿಕಾರವಧಿ ಯಲ್ಲಿ 400 ಸಸಿಗಳನ್ನು ನೆಟ್ಟು ಶಾಲಾ ವನ ನಿರ್ಮಾಣ ಮಾಡಿದರು. ಈ ಶಾಲಾ ವನವನ್ನು 2005-6ರಲ್ಲಿ ಹರದೂರು ಗ್ರಾಮ ಪಂಚಾಯಿತಿ ವತಿಯಿಂದ ಅಭಿವೃದ್ಧಿ ಪಡಿಸಿ ಶಾಲೆಗೆ ವಹಿಸಿ ಕೊಡಲಾಗಿದೆ.

ಶಾಲೆಯ ಮುಖ್ಯೋಪಾಧ್ಯಾ ಯಿನಿ ಹೆಚ್. ಕೆ. ಪಾರ್ವತಿ ಅವರ ಪರಿಸರ ಕಾಳಜಿ, ಸಹ ಶಿಕ್ಷಕರುಗಳ ಸಹಕಾರ ಹಾಗೂ ವಿದ್ಯಾರ್ಥಿಗಳ ಕ್ರಿಯಾಶೀಲಾ ಚಟುವಟಿಕೆಯ ಫಲವಾಗಿ ಶಾಲಾ ಆವರಣವು ಹೂವು, ಹಣ್ಣು, ತರಕಾರಿಗಳು ಹಾಗೂ ವಿವಿಧ ಔಷಧೀಯ ಸಸ್ಯಗಳನ್ನೊಳಗೊಂಡಿವೆ. ಮಾದಾಪುರ ಹಾಗೂ ಸುಂಟಿಕೊಪ್ಪ ಮಾರ್ಗದಲ್ಲಿರುವ ಈ ಸರಕಾರಿ ಶಾಲೆಯನ್ನು ಪ್ರವೇಶಿಸಿದಂತೆ ಸುಂದರ ಪರಿಸರ ಎದುರಾಗುತ್ತದೆ. ಔಷಧೀಯ ಸಸ್ಯಗಳನ್ನು ಗುರುತಿಸುವ ಸಲುವಾಗಿ ಪ್ರಮುಖ ಸಸ್ಯಗಳ ಸಮೀಪದಲ್ಲಿ ಅದರ ಹೆಸರಿನ ನಾಮಫಲಕ ಅಳವಡಿಸಲಾಗಿದೆ. ಶಾಲಾ ವನದಲ್ಲಿ ಸಿಲ್ವರ್ ಮಾವು, ತೆಂಗು, ನೇರಳೆ, ಸೀಬೆ, ರಾಮಫಲ ಮುಂತಾದ ಮರಗಳಿವೆ.

176 ವಿದ್ಯಾರ್ಥಿಗಳು 8 ಮಂದಿ ಶಿಕ್ಷಕರು, ಮೂವರು ಅಡುಗೆ ಸಿಬ್ಬಂದಿಗಳನ್ನೊಳ ಗೊಂಡಿರುವ ಈ ಶಾಲೆಯಲ್ಲಿ ನಿತ್ಯ ಉತ್ಪತ್ತಿಯಾಗುವ ಕಸವನ್ನು ಜೈವಿಕ ಹಾಗೂ ಅಜೈವಿಕ ಕಸವನ್ನಾಗಿ ವಿಂಗಡಿಸಲಾಗುತ್ತದೆ. ಅಡುಗೆ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ ಹಾಗೂ ಜೈವಿಕ ಕಸದಿಂದ ಕಾಂಪೋಸ್ಟ್ ತಯಾರಿಸ ಲಾಗುತ್ತಿದೆ. ಘನ ತ್ಯಾಜ್ಯ ಸಂಗ್ರಹಿಸಿ ಸಮರ್ಪಕವಾಗಿ ವಿಲೇವಾರಿ ಮಾಡಲಾಗುತ್ತದೆ. ಶಾಲಾ ಹಿಂಭಾಗ ಬೆಳೆದು ನಿಂತಿರುವ ಎತ್ತರದ ಮರಗಳನ್ನೊಳಗೊಂಡ ಶಾಲಾ ವನದ ನೆರಳು ಕೂಡ ವಿದ್ಯಾರ್ಥಿಗಳ ಆಟೋಟಗಳಿಗೆ ನೆರವಾಗುತ್ತಿದೆ.

ಮಕ್ಕಳಲ್ಲಿ ‘ಹಸಿರೇ ಉಸಿರು’ ಎಂಬ ಅರಿವು ಮೂಡಿಸಿ ಅದರ ಅವಶ್ಯಕತೆ ಹಾಗೂ ಹಸಿರು ಪೋಷಣೆಯ ಕುರಿತು ವಿದ್ಯಾರ್ಥಿ ಗಳಿಗೆ ವಿಚಾರ ಸಂಕಿರಣ, ಚಿತ್ರ ಕಲೆ, ಪ್ರಬಂಧ, ಕಿರುನಾಟಕ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ನೀರಿನ ಮಿತ ಬಳಕೆ ಹಾಗೂ ಮರು ಬಳಕೆಯ ಬಗ್ಗೆ ವಿದ್ಯಾರ್ಥಿ ಗಳಿಗೆ ಅರಿವನ್ನು ಮೂಡಿಸ ಲಾಗುತ್ತಿದ್ದು, ಬಕೆಟ್‍ಗಳಲ್ಲಿ ನೀರು ತುಂಬಿ ತಟ್ಟೆ, ಲೋಟ ತೊಳೆಯಲು, ಕೈಕಾಲುಗಳನ್ನು ಶುಚಿಗೊಳಿಸಲು ಬೇಕಷ್ಟು ಮಾತ್ರ ಬಳಕೆ ಆಗುವಂತೆ ನೋಡಿಕೊಳ್ಳ ಲಾಗುತ್ತಿದೆ. ಹೀಗೆ ತೊಳೆದ ನೀರು ಅಲ್ಲಿನ ಸಸ್ಯರಾಶಿಗಳ ಬುಡಕ್ಕೆ ಹರಿದು ಹೋಗುವ ವ್ಯವಸ್ಥೆಯನ್ನು ಕೂಡ ಮಾಡ ಲಾಗಿದೆ. ಸೂಕ್ತ ಚರಂಡಿ ಹಾಗೂ ಇಂಗು ಗುಂಡಿಯ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಶಾಲಾ ವಿದ್ಯಾರ್ಥಿಗಳು ಆಟೋಟ, ಪ್ರತಿಭಾ ಕಾರಂಜಿ, ಕಲಿಕೋತ್ಸವ ಗಳಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸು ವಂತೆ ನೋಡಿಕೊಳ್ಳಲಾಗುತ್ತಿದೆ. ಜಿಲ್ಲಾ ಮಟ್ಟದ ವಿಕಲ ಚೇತನರ ಆಟೋಟಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ ಆದ ಕೀರ್ತಿಯು ಈ ಶಾಲೆಗೆ ದೊರೆತಿದೆ. 2002-03ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿ ಗಳಿಸಿದ ಶಾಲೆಯು, 2014-15ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ‘ಹಸಿರು ಮಿತ್ರ’ ಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡಿದೆ. ಗರಗಂದೂರು ಶಾಲೆಯ ಅಧ್ಯಾಪಕ ಹಾಗೂ ವಿದ್ಯಾರ್ಥಿ ಸಮೂಹದವರ ಪರಿಸರ ಪ್ರಜ್ಞೆ, ಸ್ವಚ್ಛತೆಗೆ ಆದ್ಯತೆ ಜಿಲ್ಲೆಯ ಇತರ ಶಾಲೆಗಳಿಗೆ ಮಾದರಿಯಂತಿದೆ.

ಶಾಲೆಗೆ ಶಾಶ್ವತ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಹಾಗೂ ಶಾಲಾವರಣದ ರಕ್ಷಣೆಗೆ ಅನುಕೂಲವಾಗುವಂತೆ ಉಳಿದಿರುವ ತಡೆಗೋಡೆ ನಿರ್ಮಾಣಗೊಳಿಸಿ ಸಹಕರಿಸು ವಂತೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಹಾಗೂ ಸಮಿತಿ ಸದಸ್ಯರುಗಳು ಸಂಬಂಧಿಸಿದ ಅಧಿಕಾರಿಗಳನ್ನು ‘ಶಕ್ತಿ’ಯ ಮೂಲಕ ವಿನಂತಿಸಿ ಕೊಂಡಿದ್ದಾರೆ.

?ಯಮ್ಮಿ