ಬಸ್ ಕಂದಕಕ್ಕೆ ಬಿದ್ದು 10 ಸಾವು
ಇಂಪಾಲ, ಮಾ.27 : ಮಣಿಪುರದ ಸೆನಾಪತಿ ಜಿಲ್ಲೆಯಲ್ಲಿ ಬಸ್ಸೊಂದು ಕಂದಕಕ್ಕೆ ಉರುಳಿದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದು 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಕಾನ್ ಮತ್ತು ಚಕುಮೈ ಬಳಿಯ ಇಂಪಾಲ-ಧಿಮಾಪುರ್ ರಾಷ್ಟ್ರೀಯ ಹೆದ್ದಾರಿ 39ರಲ್ಲಿ ಬೆಳ್ಳಂ ಬೆಳಗ್ಗೆ 3.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು 25 ಮಂದಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಇಂಪಾಲದ ಕಡೆ ಬರುತ್ತಿದ್ದಾಗ ದುರಂತ ಸಂಭವಿಸಿದೆ.
ಮಿನಿ ಟ್ರಕ್ ಉರುಳಿ 11 ಸಾವು
ಭೂಪಾಲ್, ಮಾ.27 : ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮಿನಿ ಟ್ರಕ್ ವೊಂದು ಉರುಳಿ ಬಿದ್ದ ಪರಿಣಾಮ 11 ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ಮಿನಿ ಟ್ರಕ್ ವೊಂದು 50 ಮಂದಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿತ್ತು. ಛರ್ಗವನ್ ಪೆÇಲೀಸ್ ಠಾಣಾ ವ್ಯಾಪ್ತಿಗೆ ಬರುವ ಕಮಥಿಯಾ ಗ್ರಾಮದ ಬಳಿ ಬರುತ್ತಿದ್ದಂತಯೇ ಮಿನಿಟ್ರಕ್ ಉರುಳಿ ಬಿದ್ದಿದೆ. ಪರಿಣಾಮ ಟ್ರಕ್ ನಲ್ಲಿದ್ದ 50 ಮಂದಿಯ ಪೈಕಿ 11 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಗಾಯಾಳುಗಳಿಗೆ ಜಬಲ್ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 20 ಗಾಯಾಳುಗಳ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಜಬಲ್ಪುರ ಪೆÇಲೀಸ್ ಅಧಿಕಾರಿ ಎಸ್. ವರ್ಮಾ ತಿಳಿಸಿದ್ದಾರೆ.
ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್ ಕಡ್ಡಾಯವಲ್ಲ
ನವದೆಹಲಿ, ಮಾ.27 : ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಸವಲತ್ತು ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ. ಸರ್ಕಾರ ತನ್ನ ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಆಧಾರ್ ಕಡ್ಡಾಯ ಮಾಡಬಾರದು ಎಂದು ಕೋರ್ಟ್ ನಿರ್ದೇಶನ ನೀಡಿದೆ. ಆದರೆ, ಬ್ಯಾಂಕ್ ಖಾತೆ ತೆರೆಯುವಂತಹ ಯೋಜನೆಗಳಲ್ಲಿ ಆಧಾರ್ ಬಳಕೆ ನಿಲ್ಲಿಸಬಾರದು ಎಂದು ಕೋರ್ಟ್ ತಿಳಿಸಿದೆ.
ಮರಳು ಮಾಫಿಯಾ : ಜಿಲ್ಲಾಧಿಕಾರಿ ಹತ್ಯೆಗೆ ಯತ್ನ
ಕಲಬುರಗಿ, ಮಾ.27 : ಅಕ್ರಮ ಮರಳು ಮಾಫಿಯಾ ತಡೆಯಲು ಮುಂದಾಗಿದ್ದ ಜಿಲ್ಲಾಧಿಕಾರಿ ಮೇಲೆ ಟಿಪ್ಪರ್ ಹರಿಸಿ ಕೊಲ್ಲಲು ಯತ್ನಿಸಿದ ಆಘಾತಕಾರಿ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ನಡೆದಿದೆ. ಚಿತ್ತಾಪುರದ ದಂಡೋತಿ ಬಳಿಯ ಕಾಗಿಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರು ತಮ್ಮ ಅಧಿಕಾರಿಗಳ ಜೊತೆ ಕಾರಿನಲ್ಲಿ ತೆರಳಿದ್ದ ಸಂದರ್ಭ ಅವರ ಕಾರಿನ ಮೇಲೆ ಟಿಪ್ಪರ್ ಹರಿಸಲು ಯತ್ನಿಸಿದ ಘಟನೆ ನಡೆದಿರುವದಾಗಿ ಸ್ವತಃ ಜಿಲ್ಲಾಧಿಕಾರಿಯೇ ವಿವರಿಸಿದ್ದಾರೆ. ಸ್ಥಳೀಯ ಅಧಿಕಾರಿಗಳ ಕುಮ್ಮಕ್ಕಿನಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿರುವ ಜಿಲ್ಲಾಧಿಕಾರಿ, ತಮ್ಮ ಕಾರಿನ ವಾಹನ ಚಾಲಕ ದಿಢೀರನೇ ಕಾರನ್ನು ಕೆಳಗಿಳಿಸಿದ ಪರಿಣಾಮ ತಾವು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿಸಿದ್ದಾರೆ. ಕಲಬುರಗಿ ಜಿಲ್ಲಾಧಿಕಾರಿ ಘೋಷ್ ಮೇಲೆ ಟಿಪ್ಪರ್ ಹಾಯಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಗಡಿಯಲ್ಲಿ ಪಾಕ್ ಆಗಂತುಕನ ಹತ್ಯೆ
ಅಮೃತ್ಸರ, ಮಾ.27 : ಇಂದು ನಸುಕಿನ ವೇಳೆ ಪಂಜಾಬ್ನಲ್ಲಿ ಅಂತರರಾಷ್ಟ್ರೀಯ ಗಡಿಯಲ್ಲಿ ಭಾರತದೊಳಗೆ ನುಸುಳಿ ಬಂದ ಪಾಕ್ ವ್ಯಕ್ತಿಯನ್ನು ಗಡಿ ಭದ್ರತಾ ಪಡೆ ಸಿಬ್ಬಂದಿಗಳು ಗುಂಡಿಕ್ಕಿ ಸಾಯಿಸಿದರು. ಗುರದಾಸ್ಪುರದ ಗಡಿ ಹೊರಠಾಣೆ ಸಮೀಪದ ಪಹಾಡಿಪುರದಲ್ಲಿ ಗಡಿ ಬೇಲಿಯಾಚೆ ಶಂಕಾಸ್ಪದ ಚಲನವಲನಗಳನ್ನು ಸಿಬ್ಬಂದಿಗಳು ಗುರುತಿಸಿದರು. ಗಡಿ ದಾಟಿ ಒಳನುಸುಳಿ ಬಂದ ಆಗಂತುಕನನ್ನು ನಿಲ್ಲುವಂತೆ ಬಿಎಸ್ಎಫ್ ಯೋಧರು ಹೇಳಿದಾಗ ಅದನ್ನಾತ ಲೆಕ್ಕಿಸದೆ ಮುಂದುವರಿದು ಬಂದ. ತಕ್ಷಣ ಯೋಧರು ಆತನನ್ನು ಗುಂಡಿಕ್ಕಿ ಕೊಂದರು. ಆಗಂತುಕನನ್ನು ಗುಂಡಿಕ್ಕಿ ಸಾಯಿಸಲಾದ ಸ್ಥಳವನ್ನು ಯೋಧರು ತಕ್ಷಣ ಸುತ್ತುವರಿದು ಶವವನ್ನು ಪರಿಶೀಲಿಸಿದರಲ್ಲದೆ ಇತರ ಶಂಕಿತರು ಇಲ್ಲದಿರುವದನ್ನು ಖಚಿತಪಡಿಸಿಕೊಂಡರು.
ಜಿಎಸ್ಟಿಗೆ ಸಂಬಂಧಿಸಿದ 4 ಮಸೂದೆ ಮಂಡನೆ
ನವದೆಹಲಿ, ಮಾ.27 : ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಜಿಎಸ್ಟಿಗೆ ಸಂಬಂಧಿಸಿದ 4 ಮಸೂದೆಗಳನ್ನು ಮಂಡಿಸಿದ್ದಾರೆ. ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತ ಬಳಿಕ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ (ಸಿ.ಜಿ.ಎಸ್.ಟಿ) ಮಸೂದೆ 2017, ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಕೇಂದ್ರಾಡಳಿತ ಪ್ರದೇಶ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಜಿಎಸ್ ಟಿ ಮಸೂದೆ (ರಾಜ್ಯಗಳಿಗೆ ಪರಿಹಾರ ನೀಡುವ ಮಸೂದೆ)-2017 ಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಜಿಎಸ್ ಟಿ ಜಾರಿಯ (ಜುಲೈ.1 ರಿಂದ) ಒಳಗಾಗಿ ಈ ಮಸೂದೆಗಳನ್ನು ರಾಜ್ಯದ ವಿಧಾನಸಭೆಗಳಲ್ಲೂ ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಾಗುತ್ತದೆ. ಜಿಎಸ್ ಟಿ ಜಾರಿಯಿಂದ ಆರ್ಥಿಕ ಬೆಳವಣಿಗೆ ಶೇ.0.5 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
ಭಾರತ ಮಹಿಳಾ ಹಾಕಿ ತಂಡಕ್ಕೆ ಸೋಲು
ವೆಸ್ಟ್ ವ್ಯಾಂಕೋವರ್ ಮಾ.27 : ಮಹಿಳಾ ಹಾಕಿ ವಿಶ್ವ ಲೀಗ್ ನ ಎರಡನೇ ಸುತ್ತಿನ ಎರಡನೇ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಕೆನಡಾ ವಿರುದ್ಧ 1-3 ಅಂತರಲ್ಲಿ ಪರಾಭವಗೊಂಡಿದೆ. ಪಂದ್ಯದ ಆರಂಭದ 8 ನೇ ನಿಮಿಷದಲ್ಲಿಯೇ ಕೆನಡದಾ ಆಟಗಾರ್ತಿ ನಿಕ್ಕಿ ವುಡ್ ಕ್ರಾಫ್ಟ್ ಗೋಲು ಗಳಿಸಿ 1-0 ಅಂತರ ಕಾಯ್ದುಕೊಳ್ಳುವುದಕ್ಕ ಸಹಕರಿಸಿದ್ದಾರೆ. 19 ನೇ ನಿಮಿಷದಲ್ಲಿ ನೊಲ್ರ್ಯಾಅಂಡರ್ ಗಳಿಸಿದ ಗೋಲಿನಿಂದ ಈ ಅಂತರ 2-0 ಆಗಿದೆ. ಪಂದ್ಯದ ಮಧ್ಯ ಅಂತರದಲ್ಲಿ ಕೆನಡಾ ಇದೆ ಅಂತರವನ್ನು ಉಳಿಸಿಕೊಂಡು ಆತ್ಮವಿಶ್ವಾಸದಿಂಗ ದ್ವಿತೀಯಾರ್ಧಕ್ಕೆ ಕಾಲಿಟ್ಟಿದೆ. 34 ನೇ ನಿಮಿಷದಲ್ಲಿ ಪ್ರವಾಸದಲ್ಲಿರುವ ಭಾರತೀಯ ತಂಡದ ಆಟಗಾರ್ತಿ ಗುರ್ಜಿತ್ ಕೌರ್ ಒಂದು ಗೋಲು ಗಳಿಸಿದ್ದೆ ಸಮಾಧಾನಕರ ಸಂಗತಿಯಾಗಿತ್ತು. ಆದರೆ 49 ನೇ ನಿಮಿಷದಲ್ಲಿ ಕೆನಡಾ ಆಟಗಾರ್ತಿ ಕರ್ಲಿ ಜೋಹಾನ್ಸನ್ ಗಳಿಸಿದ ಗೋಲಿನಿಂದ, ಕೆನಡಾ 3-1 ಅಂತರದಿಂದ ಪಂದ್ಯ ಗೆದ್ದಿದೆ.