*ಗೋಣಿಕೊಪ್ಪಲು, ಮಾ. 27 : ಕಾಡುಕೋಣ ಧಾಳಿಗೆ ತೋಟ ಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ತಿತಿಮತಿ ಸಮೀಪದ ತಾರಿಕಟ್ಟೆಯಲ್ಲಿ ನಡೆದಿದೆ.
ಸುಧೀರ್ (40) ಗಂಭೀರ ಗಾಯಗೊಳಗಾದ ವ್ಯಕ್ತಿ. ಕೂತಂಡ ವಾಣಿ ಪೊನ್ನಪ್ಪ ಎಂಬವರ ಕಾಫಿ ತೋಟದ ಕಾರ್ಮಿಕನಾಗಿರುವ ಸುಧೀರ್ ತೋಟದೊಳಗೆ ಸೌದೆ ತರಲು ಹೋದಾಗ ಕೋಣ ಧಾಳಿ ನಡೆಸಿದೆ. ಪರಿಣಾಮ ಆತನ ತಲೆ, ಕಾಲು, ಬೆನ್ನು ಮತ್ತು ಸೊಂಟದ ಭಾಗಗಳಿಗೆ ಗಾಯಗಳಾಗಿವೆ.
ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಮಧ್ಯಾಹ್ನ ಸೌದೆಗೆಂದು ತೆರಳಿದ ಸುಧೀರ್ ಹಿಂದಿರುಗಿ ಬಾರದನ್ನು ಕಂಡು ಪತ್ನಿ ಹಾಗೂ ಇತರರು ತೋಟಕ್ಕೆ ಹುಡುಕುತ್ತಾ ಹೋದಾಗ ಕಾಫಿ ತೋಟದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಸುಧೀರ್ ಗೋಚರಿಸಿದ್ದಾನೆ. ಕಾಫಿ ತೋಟದಲ್ಲಿ ಬೀಡುಬಿಟ್ಟ ಕಾಡುಕೋಣ ಮತ್ತೆ ಇತರರ ಮೇಲೆ ಧಾಳಿ ನಡೆಸಬಹುದೆಂಬ ಆತಂಕ ಗ್ರಾಮಸ್ಥರಲ್ಲಿ ಎದುರಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡುಕೋಣವನ್ನು ಕಾಡಿಗೆ ಅಟ್ಟುವ ಕಾರ್ಯಕ್ಕೆ ಮುಂದಾಗಿದ್ದಾರೆ.