ಮಡಿಕೇರಿ, ಮಾ. 27: ಮೂರ್ನಾಡು ಸಮೀಪದ ಎಂ. ಬಾಡಗ ಗ್ರಾಮ ವ್ಯಾಪ್ತಿಯ ಕಾವೇರಿ ಹೊಳೆಯಲ್ಲಿ ಕಳೆದ ಜ. 11 ರಂದು ತೇಲುತ್ತಿದ್ದ ಅಪರಿಚಿತ ವ್ಯಕ್ತಿಯ ಶವವನ್ನು; ಗುರುತು ಪತ್ತೆಯೊಂದಿಗೆ ಈ ವ್ಯಕ್ತಿಯನ್ನು ಕೊಲೆಗೈದು ಹೊಳೆಯಲ್ಲಿ ಎಸೆದಿರುವ ದುಷ್ಕರ್ಮಿ ಗಳ ಸುಳಿವಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕಳೆದ ಜನವರಿ 11 ರಂದು ಕಾವೇರಿ ಹೊಳೆಯಲ್ಲಿ ತೇಲುತ್ತಿದ್ದ ಅಂದಾಜು 35 ರಿಂದ 40 ವರ್ಷದೊಳಗಿನ ಈ ಅಪರಿಚಿತನನ್ನು ಯಾರೋ ಕೊಲೆಗೈದು ಬಳಿಕ ವಾಹನದಲ್ಲಿ ತಂದು ಮೃತದೇಹವನ್ನು ನೀರಿನೊಳಗೆ ಮುಳುಗಿಸಿರುವ ಬಗ್ಗೆ ತನಿಖೆ ವೇಳೆ ಪೊಲೀಸರಿಗೆ ಸುಳಿವು ಲಭಿಸಿದೆ.

ನಾಲ್ಕೈದು ದಿನಗಳ ಹಿಂದೆ ದುಷ್ಕøತ್ಯ ಎಸಗಿರುವ ಕೊಲೆ ಗಡುಕರು; ವಾಹನಗಳ ಒಳಭಾಗದಲ್ಲಿ ಅಳವಡಿಸುವ ‘ರಬ್ಬರ್ ಹಾಸು’ (ಮ್ಯಾಟ್)ವಿನಲ್ಲಿ; ಹೊಳೆ ಬದಿಗೆ ಶವವನ್ನು ಎತ್ತಿಕೊಂಡು ಹೋಗಿ ಆ ಮ್ಯಾಟ್ ಸಹಿತ ಎಸೆದಿರುವ ಕುರುಹು ಪೊಲೀಸರಿಗೆ ಖಾತರಿಯಾಗಿದೆ. ಈ ಕೃತ್ಯ ನಡೆದು ನಾಲ್ಕೈದು ದಿನಗಳ ಬಳಿಕ ಕಾವೇರಿ ಹೊಳೆಯಲ್ಲಿ ಶವ ತೇಲುತ್ತಿದ್ದ ಸ್ಥಳದಿಂದ ಸುಮಾರು 100 ಮೀಟರ್ ಹಿಂದೆ; ಮರವೊಂದರ ಸಹಾಯದಿಂದ ಮೃತ ಶರೀರವನ್ನು ನೀರಿನೊಳಗೆ ಹಾಕಿರುವ ಸಂಗತಿ ದೃಢಪಟ್ಟಿದ್ದು; ಅಲ್ಲಿ ಗೋಚರಿಸಿದ ರಕ್ತದ ಕಲೆಗಳು ಕೊಲೆಯ ಸುಳಿವು ನೀಡಿದೆ. ಸ್ಥಳದಲ್ಲಿ ದೊರೆತ ಕುರುಹುಗಳೊಂದಿಗೆ ಪೊಲೀಸರು ಹಂತಕರ ಜಾಡನ್ನು ಬೆನ್ನು ಹತ್ತಿದ್ದಾರೆ.

ಕೊಲೆಯಾದಾತನ ಎರಡು ಕಡೆ ಕತ್ತು ಹಾಗೂ ಕಿವಿ ಭಾಗಕ್ಕೆ ಕತ್ತಿಯಿಂದ ಕಡಿಯಲಾಗಿದ್ದು; ಎಡಗೈ ಕೂಡ ಕತ್ತಿ ಏಟಿನಿಂದ ಗಾಯಗೊಂಡಿರುವದು ಗೋಚರಿಸಿದೆ ಎಂದು ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಅವರು ಸುಳಿವು ನೀಡಿದ್ದಾರೆ.

ಶವ ಪತ್ತೆಯಾದ ಸಂದರ್ಭ ಕಪ್ಪುಮಿಶ್ರಿತ ಬೂದು ಬಣ್ಣದ ಟೀ ಶರ್ಟ್ ಹಾಗೂ ನೀಲಿ ಜೀನ್ಸ್ ಪ್ಯಾಂಟ್ ಮೃತನ ಮೈಮೇಲಿದ್ದು, ಬಲಗೈನಲ್ಲಿ ‘ಒ’ ಎಂದು ಹಚ್ಚೆ ಹಾಕಿಸಿಕೊಂಡಿರುವದು ಗೋಚರಿಸಿದ್ದಾಗಿ ಅವರು ಮಾಹಿತಿ ನೀಡಿದ್ದಾರೆ. ಹೊರ ರಾಜ್ಯದಿಂದ ಕೊಡಗಿನಲ್ಲಿ ಕೆಲಸಕ್ಕೆ ಈತ ಬಂದಿರುವ ವೇಳೆ ಯಾವದೋ ಕಾರಣದಿಂದ; ವ್ಯವಸ್ಥಿತ ರೀತಿಯಲ್ಲಿ ಕೊಲೆ ಮಾಡಿ ಹೊಳೆಯಲ್ಲಿ ಎಸೆಯಲಾಗಿದೆ ಎಂದು ಸುಳಿವು ನೀಡಿದ ಅವರು, ಹಂತಕರಿಗಾಗಿ ಬಲೆಬೀಸಿರುವದಾಗಿ ಖಚಿತ ಪಡಿಸಿದರು.

ಅಲ್ಲದೆ ಯಾರಾದರೂ ಸತ್ತ ವ್ಯಕ್ತಿಯ ಸಂಬಂಧಿಕರು ಅಥವಾ ಕೊಲೆ ಕೃತ್ಯದ ಸುಳಿವು ಲಭಿಸಿದರೆ ಪೊಲೀಸ್ ಇಲಾಖೆಯ 08272- 228330 ಹಾಗೂ 9480804931 ರಲ್ಲಿ ಸಂಪರ್ಕಿಸುವಂತೆ ಪ್ರಕರಣದ ತನಿಖಾಧಿಕಾರಿಯೂ ಆಗಿರುವ ವೃತ್ತ ನಿರೀಕ್ಷಕ ಪ್ರದೀಪ್ ಅವರು ಸಲಹೆ ಮಾಡಿದ್ದಾರೆ.