ಸೋಮವಾರಪೇಟೆ, ಮಾ.27: ಅಡ್ಡಾದಿಡ್ಡಿ ವಾಹನಗಳ ನಿಲುಗಡೆ, ಸಂಚಾರ ನಿಯಮಗಳನ್ನು ಮೀರಿದ ಚಾಲನೆಯಿಂದಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ವಾಹನ ಸಂಚಾರ ಮತ್ತು ನಿಲುಗಡೆಯನ್ನು ತಹಬದಿಗೆ ತರಲು ಪೊಲೀಸ್ ಸಿಬ್ಬಂದಿಗಳೇ ರಸ್ತೆಗಿಳಿದರು.
ಸಂತೆ ದಿನದಂದು ನೂರಾರು ವಾಹನಗಳು ನಗರಕ್ಕೆ ಆಗಮಿಸುವ ಹಿನ್ನೆಲೆ ಎಲ್ಲಾ ರಸ್ತೆಗಳಲ್ಲೂ ವಾಹನಗಳು ಗಿಜಿಗಿಡುತ್ತಿದ್ದವು. ಇದರೊಂದಿಗೆ ಸಂಚಾರ ನಿಯಮಗಳನ್ನು ಪಾಲಿಸದ ಅದೆಷ್ಟೋ ವಾಹನಗಳಿಂದ ಸೋಮವಾರಪೇಟೆ ಪಟ್ಟಣ ಕಿಷ್ಕಿಂಧೆಯಂತಾಗುತ್ತಿತ್ತು.
ಈ ಬಗ್ಗೆ ಪಟ್ಟಣ ಪಂಚಾಯಿತಿ ಯಲ್ಲಿ ಆಯೋಜಿಸಿದ್ದ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ದೂರುಗಳ ಸುರಿಮಳೆಗೈದಿ ದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸ್ಥಳೀಯ ಪೊಲೀಸರು ಸಂತೆ ದಿನದಂದು ಬೆಳಗ್ಗಿನಿಂದ ಸಂಜೆಯವರೆಗೂ ಪಟ್ಟಣದ ಎಲ್ಲಾ ರಸ್ತೆಗಳಲ್ಲಿ ತಿರುಗಿ ಸಂಚಾರಿ ಅವ್ಯವಸ್ಥೆಯನ್ನು ಸರಿಪಡಿಸಿ ಸಾರ್ವಜನಿಕರಿಂದ ಭೇಷ್ ಎನಿಸಿಕೊಂಡರು.
ಠಾಣಾಧಿಕಾರಿಯವರ ಜೀಪಿನಲ್ಲಿ ನಗರದಲ್ಲಿ ಸಂಚರಿಸಿದ ಪೊಲೀಸರು, ಮೈಕ್ ಮೂಲಕ ವಾಹನ ಚಾಲಕರಿಗೆ ಸೂಚನೆ ನೀಡಿದರು. ಸಂಚಾರಿ ನಿಯಮಗಳನ್ನು ಮೀರಿದ ಕೆಲವೊಂದು ವಾಹನ ಚಾಲಕರಿಗೆ ಎಚ್ಚರಿಕೆ ನೀಡಿದರು.
ಇಲ್ಲಿನ ಸಿ.ಕೆ. ಸುಬ್ಬಯ್ಯ ರಸ್ತೆಯ ಎರಡೂ ಬದಿಯಲ್ಲಿ ನಡೆಯುತ್ತಿದ್ದ ವ್ಯಾಪಾರ ವಹಿವಾಟನ್ನು ಬಂದ್ ಮಾಡಿದ್ದರಿಂದ ವಾಹನ ಹಾಗೂ ಪಾದಚಾರಿಗಳಿಗೆ ಯಾವದೇ ಸಮಸ್ಯೆಯಾಗಲಿಲ್ಲ.
ಇದರೊಂದಿಗೆ ಮಡಿಕೇರಿ ರಸ್ತೆ,ಕ್ಲಬ್ ರಸ್ತೆ, ಮುಖ್ಯರಸ್ತೆ ಸೇರಿದಂತೆ ಪಟ್ಟಣದ ಒಳಗಿನ ಪ್ರಮುಖ ರಸ್ತೆಗಳಲ್ಲಿ ಒಂದೇ ಬದಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿದ್ದರಿಂದ ಟ್ರಾಫಿಕ್ ಸಮಸ್ಯೆ ಕಂಡುಬರಲಿಲ್ಲ. ಪೊಲೀಸರೊಂದಿಗೆ ಗೃಹ ರಕ್ಷಕ ದಳದ ಸಿಬ್ಬಂದಿಗಳು ಬೆಳಗ್ಗಿನಿಂದಲೂ ಕಾರ್ಯನಿರ್ವಹಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.