ಆಲೂರು-ಸಿದ್ದಾಪುರ, ಮಾ. 25: ರಾಜ್ಯ ಪ್ರಾಥಮಿಕ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಮುಂದಿನ ಹೋರಾಟದ ಹಿನ್ನೆಲೆಯಲ್ಲಿ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಕೊಡಗು ಜಿಲ್ಲಾ ಘಟಕ ಸಿದ್ಧತೆ ನಡೆಸಿದೆ. ಈ ಕುರಿತು ಶನಿವಾರಸಂತೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್. ಚೇತನ್, ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ಕೇವಲ ಶಿಕ್ಷಕರ ಆರ್ಥಿಕ ಬೇಡಿಕೆಗಳಿಗಾಗಿ ಹೋರಾಟ ಮಾಡದೇ ಶಿಕ್ಷಣವನ್ನು ಅಭಿವೃದ್ಧಿಪಡಿಸುವದು ಹಾಗೂ ಶಿಕ್ಷಕರ ಸ್ಥಾನಮಾನವನ್ನು ಹೆಚ್ಚಿಸುವ ಪ್ರಯತ್ನಗಳನ್ನು ಕಳೆದ 50 ವರ್ಷಗಳಿಂದಲೂ ಮಾಡಿಕೊಂಡು ಬರುತ್ತಿದೆ. ಆದರೆ ಬಹುತೇಕ ಪ್ರಾಥಮಿಕ ಶಿಕ್ಷಕರ ಬೇಡಿಕೆಗಳು ಈಡೇರಿಲ್ಲ. ಅಷ್ಟೇಯಲ್ಲದೆ ಗುಣಾತ್ಮಕ ಶಿಕ್ಷಣವನ್ನು ಕೊಡಿಸುವಲ್ಲಿ ಸಂಘಟನೆ ಪ್ರಯತ್ನಿಸುತ್ತಿದೆ ಎಂದರು.

2004 ರಿಂದ ಜಾರಿಗೆ ತಂದಿರುವ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವದು, ಕೇಂದ್ರ ವೇತನ ಆಯೋಗದ ಯೋಜನೆಯನ್ನು ಜಾರಿಗೆ ತರುವದು, 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಎಲ್ಲಾ ರಾಜ್ಯಗಳಲ್ಲಿ ಜಾರಿಗೊಳಿಸುವದು, ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿಗಾಗಿ ಪ್ರಾಥಮಿಕ ಶಿಕ್ಷಣ ಮಂಡಳಿ ಸ್ಥಾಪನೆ, ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ಎಲ್‍ಕೆಜಿ, ಯುಕೆಜಿ) ಆರಂಭಿಸಬೇಕು. ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಕನಿಷ್ಟ ಒಬ್ಬ ಶಿಕ್ಷಕ ಅಥವಾ ಶಿಕ್ಷಕಿ, ಶಾಲೆಯ ಹಾಜರಾತಿ ಅನುಪಾತ 1:3 ರಂತೆ ಶಾಲೆಗೆ ಒಬ್ಬ ಮುಖ್ಯ ಶಿಕ್ಷಕರನ್ನು ನಿಯುಕ್ತಿಗೊಳಿಸಬೇಕು.

ಸರಕಾರ ಈ ಎಲ್ಲಾ ಬೇಡಿಕೆಗಳಿಗೆ ತಾ. 31 ರೊಳಗೆ ಸ್ಪಂದಿಸದಿದ್ದಲ್ಲಿ ರಾಜ್ಯದ ಎಲ್ಲಾ ಶಾಸಕರಿಗೆ ಮನವಿ ಪತ್ರ ಸಲ್ಲಿಸಲಾಗುವದು. ಇದಕ್ಕೂ ಸ್ಪಂದನೆ ದೊರೆಯದಿದ್ದಲ್ಲಿ ಏ. 25 ರಂದು ಸಂಘಟನೆಯಿಂದ 1 ದಿನದ ಸಾಂಕೇತಿಕ ಧರಣಿ ಕಾರ್ಯಕ್ರಮ ಹಮ್ಮಿಕೊಂಡು ಕ್ಷೇತ್ರ ಶಿಕ್ಷಣ ಅಧಿಕಾರಿ ಮೂಲಕ ಮುಖ್ಯಮಂತ್ರಿ, ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವದು. ಸರಕಾರ ಬೇಡಿಕೆಗಳಿಗೆ ಸ್ಪಂದಿಸಿದ್ದಲ್ಲಿ ಸೆ. 5 ರಂದು ಶಿಕ್ಷಕರ ದಿನಾಚರಣೆಯನ್ನು ಬಹಿಷ್ಕರಿಸಿ ಸಾಂಕೇತಿಕವಾಗಿ ಧರಣಿ ನಡೆಸಿ ರಾಜ್ಯ ಮತ್ತು ರಾಷ್ಟ್ರದ ಜನಪ್ರತಿನಿಧಿಗಳಿಗೆ ಮತ್ತೆ ಮನವಿ ಸಲ್ಲಿಸಲಿದ್ದು, ಇದಕ್ಕೂ ಸ್ಪಂದಿಸದಿದ್ದಲ್ಲಿ ಅಕ್ಟೋಬರ್ 5 ರಂದು ನವದೆಹಲಿಯ ಜಂತರ್-ಮಂತರ್‍ನಲ್ಲಿ ಶಿಕ್ಷಕರನ್ನು ಸೇರಿಸಿ ಪಾರ್ಲಿಮೆಂಟ್ ಚಲೋ ಕಾರ್ಯಕ್ರಮ ಹಮ್ಮಿಕೊಂಡು ಅಲ್ಲಿ ಪ್ರಧಾನಮಂತ್ರಿ ಮತ್ತು ಹಣಕಾಸು ಸಚಿವರಿಗೆ ಮನವಿ ನೀಡಲಾಗುವದು. ನಂತರ ಅಲ್ಲಿ ನ್ಯಾಯ ಸಿಗುವ ತನಕ ಹೋರಾಟ ಮಾಡಲು ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್. ಮಂಜುನಾಥ್, ಶಿಕ್ಷಕರ ಸಂಘದ ವಿವಿಧ ಘಟಕಗಳ ಪದಾಧಿಕಾರಿಗಳಾದ ಸಿ.ಕೆ. ಶಿವಕುಮಾರ್, ಟಿ.ಕೆ. ಬಸವರಾಜು, ಎಸ್.ಎ. ಯೋಗೇಶ್ ಹಾಜರಿದ್ದರು.