ಸೋಮವಾರಪೇಟೆ, ಮಾ. 25: ವೈದ್ಯರು, ಶುಶ್ರೂಷಕಿಯರು ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಮೊದಲೇ ನರಳುತ್ತಿರುವ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಹೊಸದೊಂದು ಸಮಸ್ಯೆ ಸೇರ್ಪಡೆಯಾಗಿದ್ದು, ಆಸ್ಪತ್ರೆಯ ಆವರಣ ಸಾರ್ವಜನಿಕರ ವಾಹನ ನಿಲುಗಡೆ ಸ್ಥಳವಾಗಿ ಮಾರ್ಪಟ್ಟಿದೆ.

ಪರಿಣಾಮ ಆಸ್ಪತ್ರೆಗೆ ತೆರಳುವ ಹಾಗೂ ಹೊರಬರುವ ಸಾರ್ವಜನಿಕರು ಮತ್ತು ವಾಹನಗಳ ಓಡಾಟಕ್ಕೆ ತೀವ್ರ ತೊಂದರೆ ಎದುರಾಗಿದೆ. ಸಂತೆ ದಿನವಾದ ಸೋಮವಾರದಂದು ಆಸ್ಪತ್ರೆಗೆ ತೆರಳುವದೇ ಕಷ್ಟಸಾಧ್ಯವಾಗಿದೆ. ಗ್ರಾಮೀಣ ಭಾಗ ಸೇರಿದಂತೆ ನಗರದ ಹಲವಷ್ಟು ವಾಹನಗಳು ಆಸ್ಪತ್ರೆಯ ಮುಂಭಾಗದಲ್ಲಿ ನಿಲುಗಡೆಯಾಗುವದರಿಂದ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಸಾಗಿಸುವ ವಾಹನಗಳಿಗೆ ಸ್ಥಳಾವಕಾಶದ ಕೊರತೆ ಎದುರಾಗುತ್ತಿದೆ.

ಸೋಮವಾರದಂದು ಸಂತೆಗೆ ಆಗಮಿಸುವ ಮಂದಿ, ನಗರದ ಕೆಲವು ಅಂಗಡಿಗಳ ಮಾಲೀಕರು, ದೂರದೂರಿಗೆ ತೆರಳುವ ಮಂದಿ ತಮ್ಮ ವಾಹನಗಳನ್ನು ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲಿಸಿ ತೆರಳುತ್ತಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ನಿಲುಗಡೆಯಾಗುತ್ತಿರುವದರಿಂದ ಇತರ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ.

ಇದರಿಂದಾಗಿ 108 ಸೇರಿದಂತೆ ನಗುಮಗು ವಾಹನ, ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಕರೆತರುವ ವಾಹನಗಳ ಓಡಾಟಕ್ಕೂ ಅಡಚಣೆಯಾಗಿದ್ದು, ಪ್ರಜ್ಞಾವಂತರೇ ಸಮಸ್ಯೆಯನ್ನು ಅರ್ಥಮಾಡಿಕೊಂಡು ತಮ್ಮ ವಾಹನಗಳನ್ನು ಬೇರೆಡೆ ನಿಲ್ಲಿಸಬೇಕು ಎಂದು ಆಂಬ್ಯುಲೆನ್ಸ್‍ನ ಚಾಲಕರು ಪತ್ರಿಕೆಯೊಂದಿಗೆ ಅಭಿಪ್ರಾಯಪಟ್ಟಿದ್ದಾರೆ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳಿದ್ದು, ಕನಿಷ್ಟ ವಾರದ ಸಂತೆ ದಿನವಾದ ಸೋಮವಾರದಂದು ಈ ಸ್ಥಳದಲ್ಲಿ ಓರ್ವರನ್ನು ನಿಯೋಜಿಸಿ ಎಲ್ಲೆಂದರಲ್ಲಿ ವಾಹನ ನಿಲುಗಡೆಗೊಳ್ಳುವದನ್ನು ನಿರ್ಬಂಧಿಸಬೇಕೆಂದು ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ರೋಗಿಗಳ ಪಾಲಕರು ಮನವಿ ಮಾಡಿದ್ದಾರೆ.

- ವಿಜಯ್ ಹಾನಗಲ್