ಕುಶಾಲನಗರ/ಕೂಡಿಗೆ, ಮಾ. 23: ಕೂಡಿಗೆ ಸೈನಿಕ ಶಾಲೆಯ ಪ್ರಾಂಶುಪಾಲರು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿ ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿ ಉಪವಾಸ ಸತ್ಯಾಗ್ರಹ ಹೂಡಿದ ಘಟನೆ ಗುರುವಾರ ನಡೆದಿದೆ. ಪ್ರಾಂಶುಪಾಲರನ್ನು ತಕ್ಷಣ ವರ್ಗಾವಣೆಗೊಳಿಸುವಂತೆ ಒತ್ತಾಯಿಸಿದ್ದು ಅನಿರ್ದಿಷ್ಟಾವಧಿ ಮುಷ್ಕರ ಹೂಡುವದಾಗಿ ಎಚ್ಚರಿಸಿರುವ ನೌಕರರು ಕೂಡಿಗೆಯ ಸೈನಿಕ ಶಾಲೆಯ ಹಳೆಯ ಕಟ್ಟಡದ ಗೇಟ್ ಬಳಿ ಪ್ರತಿಭಟನೆಯಲ್ಲಿ ತೊಡಗಿದ್ದರು.
ಪ್ರಾಂಶುಪಾಲರಿಂದ ಸಿಬ್ಬಂದಿಗಳಿಗೆ ಮಾನಸಿಕ ಕಿರುಕುಳ, ಅವಾಚ್ಯ ಶಬ್ಧಗಳ ಬಳಕೆ, ಶಿಕ್ಷಕರಿಗೆ ಶೈಕ್ಷಣಿಕವಾಗಿ ಅಸಹಕಾರ ಮತ್ತು ಅಸಂವಿಧಾನಿಕ ಪದಗಳ ಮೂಲಕ ನಿಂದಿಸುವದು ಅಲ್ಲದೆ ಮುಗ್ಧ ಮಕ್ಕಳ ಮೇಲೆ ಒತ್ತಡ ತಂತ್ರದ ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿ ಸಿಬ್ಬಂದಿಗಳು ಇಂದು ಬೆಳಗ್ಗೆ 5.30 ರಿಂದ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿದ್ದರು.
ತಕ್ಷಣ ಪ್ರಾಂಶುಪಾಲರನ್ನು ಶಾಲೆಯಿಂದ ತೆರವುಗೊಳಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಾಯಿಸಿದರು. ಈ ನಡುವೆ ಮಡಿಕೇರಿ ಉಪವಿಭಾಗಾಧಿಕಾರಿ ಡಾ.ನಂಜುಂಡೇಗೌಡ ಅವರು ಸೈನಿಕ ಶಾಲೆಗೆ ಎರಡು ದಿನಗಳ ಹಿಂದೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿರುವದಾಗಿ ಪ್ರತಿಭಟನಾ ನಿರತ ನೌಕರರು ತಿಳಿಸಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ತೆರಳಿದ ಸಂದರ್ಭ ಪ್ರಾಂಶುಪಾಲರು ಸಿಬ್ಬಂದಿಗಳನ್ನು ಪ್ರತ್ಯೇಕವಾಗಿ ಕರೆದು ಸಮಾಧಾನಿಸಲು ಪ್ರಯತ್ನಿಸಿದರೂ ವಿಫಲರಾಗಿ ಶಾಲೆಯ ನೌಕರ ಸಿಬ್ಬಂದಿ ವರ್ಗ ಪ್ರತಿಭಟನೆಗೆ ಮುಂದಾಗಿದೆ ಎಂದು ಹಿರಿಯ ಸಿಬ್ಬಂದಿಗಳಾದ ಎಂ.ರಂಜೂಷಾ ಮತ್ತು ಎಂ.ಎಚ್. ಪ್ರಸಾದ್ ತಿಳಿಸಿದ್ದಾರೆ. ಸಿಬ್ಬಂದಿಗಳ ಕುಟುಂಬ ಸದಸ್ಯರು ಅಪಘಾತಕ್ಕೆ ಒಳಗಾದ ಸಂದರ್ಭ ಪ್ರಾಂಶುಪಾಲರು ಅಮಾನವೀಯ ವರ್ತನೆ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿನದ 24 ಗಂಟೆ ಕಾಲ ಕೆಲಸದ ಒತ್ತಡ ನೀಡುತ್ತಿರುವದು, ಸಿಬ್ಬಂದಿಗಳಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿರುವದು ಈ ಹಿನ್ನಲೆಯಲ್ಲಿ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಕೂಡ ಮುಂದಾಗಿದ್ದರು. ಇನ್ನು ಕೆಲವರು ರಾಜೀನಾಮೆ ನೀಡುವ ಹಂತಕ್ಕೆ ತಲುಪಿದ್ದಾರೆ ಎಂದು ಅಧ್ಯಾಪಕರಾದ ಮಂಜಪ್ಪ ಮತ್ತು ಶಿಕ್ಷಕಿ ಶ್ರೀಲೇಖ ದೂರಿದ್ದಾರೆ.
ಈ ನಡುವೆ ಮಾಹಿತಿ ಸೇನಾ ಸಚಿವಾಲಯದವರೆಗೆ ತಲುಪಿ ಕರ್ನಾಟಕ ರಾಜ್ಯ ಸರಕಾರದ ಸೂಚನೆಯಂತೆ ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಬಸವರಾಜು ಪ್ರತಿಭಟನಾಕಾರರೊಂದಿಗೆ ಸಂಧಾನ ನಡೆಸಲು ಗುರುವಾರ ಆಗಮಿಸಿದರು. ಈ ಸಂದರ್ಭ ಬಸವರಾಜು ಅವರು ಪ್ರತಿಭಟನಾಕಾರರೊಂದಿಗೆ ಚರ್ಚಿಸುವ ಸಂದರ್ಭ ನೌಕರ ವರ್ಗದವರು ವಾಗ್ವಾದಕ್ಕೆ ಇಳಿದ ಪ್ರಸಂಗವೂ ನಡೆಯಿತು. ಈ ಸಂದರ್ಭ ಬಸವರಾಜು ಅವರು ಪ್ರತಿಭಟನಾಕಾರರಲ್ಲಿ ಕ್ಷಮೆಯಾಚಿಸುವ ಪರಿಸ್ಥಿತಿಯು ಒದಗಿಬಂತು.
ಸೈನಿಕ ಶಾಲೆಗೆ ಕಾರ್ಯನಿಮಿತ್ತ ಭೇಟಿ ನೀಡಿದ್ದ ಸೈನಿಕ ಶಾಲೆಗಳ ಸೊಸೈಟಿಯ ತನಿಖಾಧಿಕಾರಿ ಕರ್ನಲ್ ಸುದಂಶು ಆರ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರಾಂಶುಪಾಲರನ್ನು ಒಂದು ತಿಂಗಳ ಕಾಲ ರಜೆಯಲ್ಲಿ ಕಳುಹಿಸುವ ಭರವಸೆ ನೀಡಿದರು. ಇದರೊಂದಿಗೆ 10 ದಿನಗಳ ಅವಧಿಯಲ್ಲಿ ಸಂಪೂರ್ಣ ತನಿಖೆ ನಡೆಸಿ ಅವರನ್ನು ವರ್ಗಾವಣೆಗೊಳಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂಪಡೆದುಕೊಳ್ಳಲಾಯಿತು.
ಪ್ರತಿಭಟನಾ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸುವದಾಗಿಯೂ ಭರವಸೆ ನೀಡಿದ್ದು ಯಾವದೇ ರೀತಿಯ ಕಿರುಕುಳವಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು.
ಈ ನಡುವೆ ಕೊಡಗು ಸೈನಿಕ ಶಾಲೆಯ ಪ್ರಾಂಶುಪಾಲರಾದ ಕ್ಯಾ.ಬೆನ್ ಹೆಚ್ ಬೆರ್ಸನ್ ಅವರು ರಜೆ ಮೇಲೆ ತೆರಳಿದ್ದು ಸುದ್ದಿಗಾರರಿಗೆ ಪ್ರತಿಕ್ರಿಯೆ ಪಡೆಯಲು ಅವಕಾಶ ದೊರೆತಿಲ್ಲ.
-ಎಂ.ಎನ್. ಚಂದ್ರಮೋಹನ್. ಕೆ.ಕೆ. ನಾಗರಾಜ ಶೆಟ್ಟಿ