ಸೋಮವಾರಪೇಟೆ, ಮಾ. 23: ದಿನದಿಂದ ದಿನಕ್ಕೆ ವಾಹನ ದಟ್ಟಣೆ ಅಧಿಕಗೊಳ್ಳುತ್ತಿರುವ ಸೋಮವಾರ ಪೇಟೆ ಪಟ್ಟಣದಲ್ಲಿ ಸಂಚಾರ ಸುವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ ಬಗ್ಗೆ ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಯ ಸದಸ್ಯರುಗಳ ಉಪಸ್ಥಿತಿಯಲ್ಲಿ ಜನಸಂಪರ್ಕ ಸಭೆ ನಡೆಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ನಗರದ ಸಂಚಾರಿ ಅವ್ಯವಸ್ಥೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಸಂತೆ ದಿನವಾದ ಸೋಮವಾರದಂದು ನಗರ ಕಿಷ್ಕಿಂಧೆಯಾಗಿ ಮಾರ್ಪಡುವ ಬಗ್ಗೆ ಹಲವರು ಸಭೆಯ ಗಮನಸೆಳೆದರು.
ಡಿವೈಎಸ್ಪಿ ಸಂಪತ್ಕುಮಾರ್ ಅವರ ಉಪಸ್ಥಿತಿಯಲ್ಲಿ ನಗರದ ಸಂಚಾರ, ವಾಹನ ನಿಲುಗಡೆಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ನೂತನ ನಿಯಮಗಳ ಬಗ್ಗೆ ಚರ್ಚೆ ನಡೆಯಿತು. ಮಾರ್ಕೆಟ್ನಲ್ಲಿ ಸಂತೆ ದಿನದಂದು ಭಾರೀ ವಾಹನಗಳು ನಿಲುಗಡೆ ಗೊಳ್ಳುವದರಿಂದ ಸುಗಮ ವ್ಯಾಪಾರಕ್ಕೆ ಅಡಚಣೆಯಾಗಿದೆ. ಬೆಳಿಗ್ಗೆ ನಿಲ್ಲಲ್ಪಡುವ ವಾಹನಗಳು ಸಂಜೆಯಾದರೂ ತೆರವುಗೊಳ್ಳುವದಿಲ್ಲ ಎಂದು ಅಧ್ಯಕ್ಷೆ ವಿಜಯಲಕ್ಷ್ಮೀ ಹೇಳಿದರು.
ಇಂತಹ ವಾಹನಗಳನ್ನು ಆರ್ಎಂಸಿ ಮೈದಾನ ಅಥವಾ ಮುತ್ತಪ್ಪ ದೇವಾಲಯದ ಮುಂಭಾಗಕ್ಕೆ ಸ್ಥಳಾಂತರಗೊಳಿಸುವ ಬಗ್ಗೆ ಪ್ರಸನ್ನ, ನಾಗರಾಜ್, ಸುರೇಶ್ ಅವರುಗಳಿಂದ ಸಲಹೆ ಕೇಳಿಬಂತು. ಸೋಮವಾರ ಪೇಟೆಯ ಸಂಚಾರ ಅವ್ಯವಸ್ಥೆ ಬಗ್ಗೆ ಕಳೆದ 8 ತಿಂಗಳ ಹಿಂದೆಯೇ ಪ.ಪಂ.ಗೆ ಬೆಳೆಗಾರರ ಸಂಘದಿಂದ ಪತ್ರ ಬರೆದು ಗಮನಸೆಳೆಯಲಾಗಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಬಸಪ್ಪ ಅವರು ದೂರಿದರು.
ಮಡಿಕೇರಿ ರಸ್ತೆಯ ಅಮ್ಮಣ್ಣ ಗ್ಯಾರೇಜ್ನಿಂದ ಬ್ಲಾನ್ ಕಾಫಿವರೆಗಿನ ರಸ್ತೆಯಲ್ಲಿ ಒಂದು ಬದಿ ಮಾತ್ರ ವಾಹನ ನಿಲುಗಡೆಗೆ ಅವಕಾಶ ನೀಡಬೇಕು. ಇದೀಗ ಎರಡೂ ಬದಿ ವಾಹನಗಳನ್ನು ನಿಲ್ಲಿಸುತ್ತಿರುವದರಿಂದ ಸಮಸ್ಯೆ ಎದುರಾಗಿದೆ ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಮೋಹನ್ ಸಭೆಯಲ್ಲಿ ತಿಳಿಸಿದರು.
ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ ಮಾತನಾಡಿ, ತಾಲೂಕು ಪಂಚಾಯಿತಿ ಎದುರು ಭಾಗದಲ್ಲಿರುವ ಪ.ಪಂ.ಗೆ ಸೇರಿದ ಸ್ಥಳವನ್ನು ಸಮತಟ್ಟುಗೊಳಿಸಿದರೆ ಹೆಚ್ಚಿನ ವಾಹನಗಳನ್ನು ನಿಲುಗಡೆ ಗೊಳಿಸಬಹುದಾಗಿದೆ. ಇದೀಗ ಗುತ್ತಿಗೆ ದಾರರು ಮರಳು, ಜಲ್ಲಿಗಳನ್ನು ಶೇಖರಿಸಿಡುತ್ತಿದ್ದಾರೆ. ಈ ಬಗ್ಗೆ ಪಂಚಾಯಿತಿ ಗಮನಹರಿಸ ಬೇಕೆಂದರು.
ನಗರದಿಂದ ಮಹದೇಶ್ವರ ಬಡಾವಣೆಗೆ ತೆರಳುವ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಗೊಳ್ಳುತ್ತಿರುವದರಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ತಿಮ್ಮಶೆಟ್ಟಿ ಅವರು ಗಮನಸೆಳೆದರು. ಮೇಲಿನ ಪೆಟ್ರೋಲ್ ಬಂಕ್ನಿಂದ ಬಸವೇಶ್ವರ ದೇವಾಲಯದವರೆಗಿನ ರಸ್ತೆಯಲ್ಲಿ ಒಂದೇ ಬದಿ ನಿಲುಗಡೆಗೆ ಸೂಚನೆ ನೀಡಬೇಕೆಂದು ಪ್ರಸನ್ನ ಹೇಳಿದರು.
ಸದ್ಯ ಗೃಹರಕ್ಷಕ ದಳದವರೇ ನಗರದ ಸಂಚಾರ ವ್ಯವಸ್ಥೆಯನ್ನು ಗಮನಿಸುತ್ತಿದ್ದು, ಇವರೊಂದಿಗೆ ಪೊಲೀಸ್ ಸಿಬ್ಬಂದಿಗಳನ್ನೂ ನಿಯೋಜಿಸಬೇಕು. ನಗರದ ಎಲ್ಲಾ ರಸ್ತೆಗಳಲ್ಲೂ ಕೇವಲ ಒಂದು ಬದಿ ಮಾತ್ರ ಪಾರ್ಕಿಂಗ್ಗೆ ಅವಕಾಶ ನೀಡಬೇಕು ಎಂಬ ಸಲಹೆ ಸಭೆಯಲ್ಲಿ ಕೇಳಿಬಂತು.
ಸಿ.ಕೆ. ಸುಬ್ಬಯ್ಯ ರಸ್ತೆ ಸಂತೆ ದಿನವಾದ ಸೋಮವಾರದಂದು ಏಕಮುಖ ಸಂಚಾರಕ್ಕೆ ಸೀಮಿತವಾ ಗಿದ್ದು, ಈ ರಸ್ತೆಯಲ್ಲಿರುವ ವಿವಿಧೋದ್ದೇಶ ಸಹಕಾರ ಸಂಘದ ಮುಂಭಾಗದಿಂದ ಖಾಸಗಿ ಬಸ್ ನಿಲ್ದಾಣದವರೆಗೆ ರಸ್ತೆಯ ಎರಡೂ ಬದಿಯಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಇದರಿಂದ ವಾಹನ ಹಾಗೂ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗಿದೆ. ರಸ್ತೆ ಬದಿ ವ್ಯಾಪಾರಕ್ಕೆ ಅವಕಾಶ ನೀಡದೇ ಮಾರುಕಟ್ಟೆಯ ಒಳಭಾಗಕ್ಕೆ ಸ್ಥಳಾಂತರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ದೀಪಕ್, ನಗರಾಧ್ಯಕ್ಷ ಮಂಜುನಾಥ್ ಸಲಹೆ ನೀಡಿದರು.
ಇದರೊಂದಿಗೆ ನಗರದ ವಿವಿಧ ರಸ್ತೆಗಳು, ಈಗಿರುವ ವಾಹನ ನಿಲುಗಡೆಯ ಪ್ರದೇಶಗಳ ಬಗ್ಗೆಯೂ ಗಂಭೀರ ಚರ್ಚೆ ನಡೆಯಿತು. ಸಾರ್ವ ಜನಿಕರಿಂದ ಬಂದ ಸಲಹೆಗಳನ್ನು ಕ್ರೋಢೀಕರಿಸಿ ಪಂಚಾಯಿತಿಯ ಸಹಕಾರದೊಂದಿಗೆ ರೂಪುರೇಷೆ ಸಿದ್ದಪಡಿಸಿ ನೋಟಿಫಿಕೇಷನ್ ಮಾಡುವ ಬಗ್ಗೆ ಡಿವೈಎಸ್ಪಿ ಸಂಪತ್ಕುಮಾರ್ ಭರವಸೆ ನೀಡಿದರು.
ಸಭೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಠಾಣಾಧಿಕಾರಿ ಶಿವಣ್ಣ, ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲ, ಸದಸ್ಯರು ಗಳಾದ ಮೀನಾಕುಮಾರಿ, ಶೀಲಾ ಡಿಸೋಜ, ಸುಷ್ಮಾ, ಲೀಲಾ ನಿರ್ವಾಣಿ, ಸುರೇಶ್, ನಾಗರಾಜ್, ಮುಖ್ಯಾಧಿಕಾರಿ ನಾಚಪ್ಪ ಅವರುಗಳು ಉಪಸ್ಥಿತರಿದ್ದರು.
ವಿವಿಧ ಸಂಘಟನೆಗಳ ಮುಖಂಡರುಗಳಾದ ಸಿ.ಸಿ. ನಂದ, ಬಾಲಕೃಷ್ಣ, ಎಸ್.ಆರ್. ಸೋಮೇಶ್, ರಮೇಶ್, ಅನಂತ್ರಾಮ್, ಸೋಮಶೇಖರ್, ದಿವಾಕರ್, ಶೇಷಪ್ಪ, ರಂಗ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.