ಮಡಿಕೇರಿ, ಮಾ. 23: ವ್ಯಾಪಾರದ ಸೋಗಿನಲ್ಲಿ ಮನೆ ಮನೆಗೆ ತೆರಳುತ್ತಾ ಒಂಟಿ ಮಹಿಳೆಯಿದ್ದ ಮನೆಗೆ ತೆರಳಿ ಆಕೆಯ ದೂರವಾಣಿ ಸಂಖ್ಯೆ ಕೇಳಿ ಅಸಭ್ಯವಾಗಿ ವರ್ತಿಸಿದ ಯುವಕ ನೋರ್ವರಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಪ್ರಕರಣ ನಡೆದಿದೆ.

ಇಲ್ಲಿನ ಇಂದಿರಾನಗರಕ್ಕೆ ಇಂದು ಮಧ್ಯಾಹ್ನ ಪಂಜಾಬ್ ಮೂಲದ ತುಲ್‍ಫೆಕ್ ಎಂಬ ಯುವಕ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡಲೆಂದು ತೆರಳಿದ್ದಾನೆ. ಈ ಸಂದರ್ಭ ಒಂದು ಮನೆಯಲ್ಲಿ ಒಂಟಿ ಮಹಿಳೆ ಹಾಗೂ ಪುಟ್ಟ ಮಗು ಇದ್ದು, ಆಕೆ ತನಗೆ ಯಾವದೇ ಸಾಮಗ್ರಿ ಬೇಡವೆಂದು ಹೇಳಿದ್ದಾಳೆ. ಅಲ್ಲಿಂದ ತೆರಳಿದ ಆಕೆಯನ್ನು ಮಾತಿಗೆಳೆದು ದೂರವಾಣಿ ಸಂಖ್ಯೆ ಕೇಳಿದ್ದಾನೆ. ಈ ಸಂದರ್ಭ ಆಕೆ ತನ್ನ ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಕೂಡಲೇ ಪತಿ ಹಾಗೂ ಗೆಳೆಯರು ಮನೆಯತ್ತ ಬಂದಿದ್ದಾರೆ. ವಿಷಯ ತಿಳಿದ ಅಕ್ಕ-ಪಕ್ಕದವರು ಕೂಡ ಸೇರಿ ಹುಡುಕಾಡಿದಾಗ ಈತ ಅಲ್ಲೇ ಸನಿಹದಲ್ಲಿ ಪತ್ತೆಯಾಗಿದ್ದು, ಆತನನ್ನು ವಿಚಾರಿಸಿ ಧರ್ಮದೇಟು ನೀಡಿದ್ದಾರೆ. ನಂತರ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ಆತನನ್ನು ವಿಚಾರಿಸಿದ ಬಳಿಕ ಆತ ವಾಸವಿದ್ದ ಮನೆಯ ಮಾಲೀಕರು ಬದು ಆತನನ್ನು ಬಿಡಿಸಿಕೊಂಡು ಕರೆದೊಯ್ದಿದ್ದಾರೆ. ಆತನಿಂದ ಮುಚ್ಚಳಿಕ ಬರೆಸಿಕೊಂಡು ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.