ಕುಶಾಲನಗರ, ಮಾ. 24: ಕೆಸರಲ್ಲಿ ಸಿಲುಕಿ ನಿತ್ರಾಣಗೊಂಡ ಕಾಡಾನೆಯೊಂದು ಮೃತಪಟ್ಟ ಘಟನೆ ಪಿರಿಯಾಪಟ್ಟಣದ ಮುತ್ತೂರು ಅರಣ್ಯಕ್ಕೆ ಸೇರಿದ ವರ್ತಿಹಾಡಿಯ ಕೆರೆಯೊಂದರಲ್ಲಿ ಸಂಭವಿಸಿದೆ. ಹೆಣ್ಣಾನೆಯೊಂದು ಕೆರೆಯಲ್ಲಿ ಸಿಲುಕಿಕೊಂಡು ಹೊರಬರಲಾರದೆ ಘೀಳಿಡುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸಾಕಾನೆ ಅಭಿಮನ್ಯು ಮೂಲಕ ಹೊರಗೆ ಎಳೆದು ತರಲಾಯಿತಾದರೂ, ನೀರು ಆಹಾರವಿಲ್ಲದೆ ನಿತ್ರಾಣಗೊಂಡಿದ್ದ ಕಾಡಾನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ ಎಂದು ಅರಣ್ಯಾಧಿಕಾರಿ ಗಿರೀಶ್ ತಿಳಿಸಿದ್ದಾರೆ.
ಸ್ಥಳಕ್ಕೆ ಹುಣಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಾಲಚಂದ್ರ ಭೇಟಿ ನೀಡಿದ್ದರು. ಕೆಲ ತಿಂಗಳ ಹಿಂದೆಯಷ್ಟೆ ಇದೇ ವ್ಯಾಪ್ತಿಯಲ್ಲಿ ಆನೆಯೊಂದು ಕೆರೆಯ ಮಧ್ಯೆ ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿತ್ತು.