ಕುಶಾಲನಗರ, ಮಾ. 24: ಎನ್‍ಎಸ್‍ಎಸ್ ಶಿಬಿರಾರ್ಥಿಗಳು ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ವಿ. ರವೀಂದ್ರಾಚಾರಿ ತಿಳಿಸಿದರು.
ಕುಶಾಲನಗರ ಹೋಬಳಿ ಚಿಕ್ಕ ಅಳುವಾರದಲ್ಲಿನ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಮಂಗಳ ಗಂಗೋತ್ರಿ ಘಟಕದ ವತಿಯಿಂದ ‘ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ’ ಧ್ಯೇಯದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಶ್ರದ್ಧೆ, ಶಿಸ್ತು ಹಾಗೂ ಸಂಯಮದಿಂದ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಿ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಉಪನ್ಯಾಸಕ ಜûಮೀರ್ ಅಹಮದ್ ಮಾತನಾಡಿ, ಶಿಬಿರಾರ್ಥಿಗಳು ಕ್ರಿಯಾಶೀಲತೆಯನ್ನು ಮೈಗೂಡಿಸಿ ಕೊಳ್ಳಬೇಕೆಂದರು. ಈ ಸಂದರ್ಭ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ಡಾ. ತ್ರಿವೇಣಿ ಪ್ರಾಸ್ತಾವಿಕ ನುಡಿಗಳಾಡಿದರು. ಕಾರ್ಯಕ್ರಮದಲ್ಲಿ ಆಡಳಿತ ವರ್ಗದ ಸಿಬ್ಬಂದಿಗಳಾದ ಸವಿತಾ, ಗಣೇಶ್, ಯತೀಶ್ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.