ಶ್ರೀಮಂಗಲ, ಮಾ. 24: ಶ್ರೀಮಂಗಲದಿಂದ ಹುದಿಕೇರಿ ಮೂಲಕ ಪೊನ್ನಂಪೇಟೆ ರಸ್ತೆ ನಡುವೆ ಹಲವೆಡೆ ಮರುಡಾಂಬರೀಕರಣ ಮಾಡಲಾಗಿದ್ದು ಈ ಸಂದÀರ್ಭ ರಸ್ತೆಯ ಎರಡು ಬದಿಯ ಕಾಡುಗಳನ್ನು ತೆರವುಗೊಳಿಸುವ ಸಂದರ್ಭ ಜೆ.ಸಿ.ಬಿ. ಯಂತ್ರ ಬಳಸಲಾಗಿದೆ. ಹಲವೆಡೆ ರಸ್ತೆಯ ಎರಡು ಬದಿ ಗುಂಡಿ ಬಿದ್ದಿದ್ದು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಮಾರ್ಗದ ಬೇಗೂರು ಕೊಲ್ಲಿ ಹಾಗೂ ಹುದಿಕೇರಿ ಸಮೀಪ ರಸ್ತೆಯ ಎರಡು ಬದಿ ಹಳ್ಳ ಬಿದ್ದಿದ್ದು, ಡಾಂಬರೀಕರಣ ಮಾಡಿದ ರಸ್ತೆಯ ಒತ್ತಿನಲ್ಲಿಯೇ ಹಳ್ಳ ಉಂಟಾಗಿದೆ. ಎದುರಿನಿಂದ ಬರುವ ವಾಹನಗಳಿಗೆ ಸ್ಥಳಾವಕಾಶ ಮಾಡಿಕೊಡುವ ಸಂದರ್ಭ ಡಾಂಬರು ರಸ್ತೆ ಬಿಟ್ಟು ಮಣ್ಣಿನ ರಸ್ತೆಗೆ ಇಳಿದರೆ ವಾಹನ ಗುಂಡಿಗೆ ಬಿದ್ದು ಅಪಘಾತ ಉಂಟಾಗುವ ಅಪಾಯ ಎದುರಾಗಿದೆ. ಇನ್ನೊಂದು ಕಡೆ ಎದುರು ಬದುರಾಗಿ ಬರುವ ವಾಹನಕ್ಕೆ ಸ್ಥಳಾವಕಾಶ ಮಾಡಿ ಕೊಡದೆ ಡಾಂಬರು ರಸ್ತೆಯಲ್ಲಿಯೇ ಉಳಿದುಕೊಂಡರೂ ರಸ್ತೆಯ ಅಗಲ ಸಾಕಾಗದೆ ಮುಖಾಮುಖಿ ಡಿಕ್ಕಿ ಸಂಭವಿಸುವ ಅಪಾಯವಿದೆ.
ಹಳ್ಳ ಬಿದ್ದಿರುವ ರಸ್ತೆಯ ಎರಡು ಭಾಗಕ್ಕೆ ಮಣ್ಣುಗಳನ್ನು ತಂದು ಹಳ್ಳ ಮುಚ್ಚಿ ಸರಿಪಡಿಸಿ ಅಪಾಯ ತಪ್ಪಿಸಲು ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈಗಾಗಲೇ ಈ ಮಾರ್ಗದಲ್ಲಿ ಹಲವಾರು ಅಪಘಾತಗಳು ಉಂಟಾಗಿದ್ದು ಡಾಂಬರು ರಸ್ತೆಯಿಂದ ಒಂದು ಬದಿಗೆ ಇಳಿಸುವದು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದ್ದು ಎದುರಿನಿಂದ ಬರುವ ಭಾರೀ ವಾಹನಗಳಿಗೆ ಜಾಗ ಬಿಟ್ಟುಕೊಡುವ ಸಂದÀರ್ಭ ಡಾಂಬರು ರಸ್ತೆಯಿಂದ ನೆಲಕ್ಕೆ ಇಳಿಸುವದು ಅನಿವಾರ್ಯ ವಾಗಿದೆ.
ಈ ಅಪಾಯವಿರುವದರಿಂದ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಸ್ಥಳೀಯ ಸವಾರರು ವಾಹನವನ್ನು ಚಾಲನೆ ಮಾಡುತ್ತಿದ್ದು ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಇತ್ತ ಗಮನಹರಿಸಿ ದುರಂತಗಳನ್ನು ತಪ್ಪಿಸಬೇಕಾಗಿದೆ. ತಾ. 21 ರಂದು ಈ ಹಳ್ಳಬಿದ್ದಿರುವ ರಸ್ತೆಯಲ್ಲಿಯೇ ಲಾರಿ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದೆ. ಈ ಅಪಘಾತಕ್ಕೆ ಹಳ್ಳ ಬಿದ್ದಿರುವ ರಸ್ತೆಯೇ ಪ್ರಮುಖ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ.