ಮಡಿಕೇರಿ, ಮಾ. 24: ಪಶ್ಚಿಮ ಘಟ್ಟ ಪ್ರದೇಶವನ್ನು ಸೂಕ್ಷ್ಮ ಪರಿಸರ ತಾಣ ಎಂದು ಘೋಷಿಸಲು ಮುಂದಾಗಿರುವ ಡಾ. ಕಸ್ತೂರಿ ರಂಗನ್ ವರದಿಯ ಕುರಿತಾಗಿ ಬೆಳೆಗಾರರು ಸೇರಿದಂತೆ ಇತರ ಅನೇಕರು ಒಪ್ಪಲು ತಯಾರಿಲ್ಲ. ಈ ಬಗ್ಗೆ ವ್ಯಾಪಕ ವಿರೋಧವಿದ್ದರೂ ಇದನ್ನು ಸಮರ್ಥವಾದದೊಂದಿಗೆ ಕೇಂದ್ರ ಸರಕಾರಕ್ಕೆ ಮುಟ್ಟಿಸುವಲ್ಲಿ ಕರ್ನಾಟಕ ರಾಜ್ಯ ವಿಫಲವಾಗಿದೆ. ಕೇರಳದ ಜನತೆ ಹಾಗೂ ಸರಕಾರ ಈ ಬಗ್ಗೆ ಸಂಘಟನಾತ್ಮಕವಾಗಿ ವ್ಯವಹರಿಸಿ ಅಲ್ಲಿ ಎದುರಾಗಲಿದ್ದ ಸಮಸ್ಯೆಯನ್ನು ಕಡಿಮೆ ಮಾಡಿ ಕೊಳ್ಳುವಲ್ಲಿ ಯಶಸ್ವಿಯಾಗಿರುವದು ಗಮನಾರ್ಹವಾಗಿದ್ದು, ಇದೇ ಮಾದರಿಯಲ್ಲಿ ಕರ್ನಾಟಕದ ರಾಜ್ಯದಿಂದ ಸಮರ್ಥನೀಯ ಪ್ರಯತ್ನ ನಡೆಯಬೇಕಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ.
ನಗರದಲ್ಲಿಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರು ರಾಜ್ಯ ಸರಕಾರ ಹಾಗೂ ಕೇಂದ್ರದ ನಡುವೆ ರಾಜ್ಯವನ್ನು ಪ್ರತಿನಿಧಿಸುವ ಸಂಸದರುಗಳು ಇಂತಹ ಪ್ರಯತ್ನವನ್ನು ಸರಿಯಾಗಿ ಮಾಡಿಲ್ಲ. ಈ ಬಗ್ಗೆ ಪಕ್ಷಾತೀತವಾದ ಮಹತ್ವದ ಹೋರಾಟ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸೂಕ್ಷ್ಮ ಪರಿಸರ ವಲಯದ ಸಮಸ್ಯೆಯನ್ನು ಅತೀ ಕಾಳಜಿಯಿಂದ ಅಧ್ಯಯನ ಮಾಡಿದ ಕೇರಳ ಸರ್ಕಾರ ಇದನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಕರ್ನಾಟಕ ರಾಜ್ಯವಾಗಲಿ ಅಥವಾ ರಾಜ್ಯದ ಸಂಸದರುಗಳಾಗಲಿ ಯಾವದೇ ಪ್ರಾಮಾಣಿಕ ಪ್ರಯತ್ನ ಮಾಡದಿರುವ ದರಿಂದ ಆತಂಕ ಮುಂದುವರಿದಿದೆ ಎಂದು ಒಕ್ಕೂಟದ ಅಧ್ಯಕ್ಷ ಬಿ.ಎಸ್. ಜಯರಾಂ ಆರೋಪಿಸಿದರು.
ಹಾಸನ, ಕೊಡಗು, ಚಿಕ್ಕಮಗಳೂರು ಭಾಗದ ಬೆಳೆಗಾರರು ಹಾಗೂ ರೈತರು ತಮ್ಮ ಬೆಳೆಗಳ ಮೂಲಕವೇ ಪರಿಸರ ರಕ್ಷಣೆಯನ್ನು ಮಾಡುತ್ತಾ ಬಂದಿದ್ದಾರೆ ಎಂದರು.
ಸಂಘÀದ ಉಪಾಧ್ಯಕ್ಷ ನಂದಾ ಬೆಳ್ಯಪ್ಪ ಮಾತನಾಡಿ, ಕರ್ನಾಟಕ ಸರ್ಕಾರ ಕೇರಳದ ರೀತಿಯಲ್ಲಿ ಯಾವದೇ ಪ್ರಯತ್ನಗಳನ್ನು ಮಾಡಿಲ್ಲ. ಸೂಕ್ಷ್ಮ ಪರಿಸರ ವಲಯಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸಭೆ ನಡೆದಾಗ ಪಶ್ಚಿಮ ಘಟ್ಟ ವ್ಯಾಪ್ತಿಯ
(ಮೊದಲ ಪುಟದಿಂದ) ರಾಜ್ಯದ ಸಂಸದರು ಪಾಲ್ಗೊಂಡಿರಲಿಲ್ಲ. ಜನಪ್ರತಿನಿಧಿಗಳ ಮತ್ತು ಸರ್ಕಾರಗಳ ನಡುವಿನ ಹೊಂದಾಣಿಕೆಯ ಕೊರತೆಯಿಂದ ಮತ್ತೆ ಕರಡು ಅಧಿಸೂಚನೆ ಹೊರಬಿದ್ದಿದೆ ಎಂದರು.
ರಾಜ್ಯ ಒಕ್ಕೂಟದ ಸದಸ್ಯ ಕೆ.ಕೆ.ವಿಶ್ವನಾಥ್ ಮಾತನಾಡಿ, ಕೇರಳ ರಾಜ್ಯ ಸರ್ಕಾರ ಡಾ| ಕಸ್ತೂರಿ ರಂಗನ್ ವರದಿಯನ್ನು ಮಲೆಯಾಳಂ ಭಾಷೆಯಲ್ಲಿ ಮುದ್ರಿಸಿ 5 ಸಾವಿರ ಪ್ರತಿಗಳನ್ನು ಗ್ರಾಮ ಪಂಚಾಯ್ತಿಗಳಿಗೆ ಹಂಚುವ ಮೂಲಕ ಸೂಕ್ಷ್ಮ ಪರಿಸರ ವಲಯದ ಪಟ್ಟಿಗೆ ಸೇರುವ ಗ್ರಾಮ ಪಂಚಾಯಿತಿಗಳ ಸಂಖ್ಯೆಯನ್ನು 119ಕ್ಕೆ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಆದರೆ, ಕರ್ನಾಟಕ ರಾಜ್ಯದಲ್ಲಿ 1470 ಗ್ರಾಮಗಳು ಸೂಕ್ಷ್ಮ ವಲಯಕ್ಕೆ ಸೇರಲ್ಪಡುತ್ತಿದ್ದರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಟೀಕಿಸಿಕೊಳ್ಳುತ್ತಿವೆ ಹೊರತು ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ ವೆಂದು ಬೇಸರ ವ್ಯಕ್ತಪಡಿಸಿದರು. ಸೂಕ್ಷ್ಮ ಪರಿಸರ ವಲಯವೆಂದು ಘೋಷಣೆಯಾದರೆ ಸರಕಾರ ಕಂದಾಯ ಭೂಮಿಯ ಹಕ್ಕನ್ನು ಕಳೆದುಕೊಳ್ಳಲಿದೆ ಎಂದೂ ಅವರು ಸೂಚನೆಯಿತ್ತರು.
ರಾಜ್ಯದ ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ಸೂಕ್ಷ್ಮ ಪರಿಸರ ವಲಯಕ್ಕೆ ಸಂಬಂಧಿಸಿದ ಜಾಗದ ಭೌತಿಕ ಸರ್ವೆ ಕಾರ್ಯ ನಡೆದಿಲ್ಲ. ರಾಜ್ಯ ಸರ್ಕಾರ ಸರ್ವೆಗೆ ಮುಂದಾದಲ್ಲಿ ಬೆಳೆÉಗಾರರು ಇದಕ್ಕೆ ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದರು. ಗ್ರಾಮಗಳ ಗಡಿಯನ್ನು ಗುರುತಿಸುವಂತೆ ಒತ್ತಾಯಿಸಿದ ಅವರು, ಕೊಡಗು ಜಿಲ್ಲೆಯಲ್ಲಿ ಗುರುತಿಸ ಲ್ಪಟ್ಟಿರುವ 55 ಗ್ರಾಮಗಳಲ್ಲಿ ಉಂಟಾ ಗಿರುವ ಭಯದ ವಾತಾವರಣವನ್ನು ದೂರ ಮಾಡಬೇಕೆಂದರು.
ಹಾಸನ ಒಕ್ಕೂಟದ ಕಾರ್ಯದರ್ಶಿ ಎಂ.ಹೆಚ್. ಪ್ರಕಾಶ್ ಮಾತನಾಡಿ, ಸೂಕ್ಷ್ಮ ಪರಿಸರ ವಲಯವೆಂದು ಘೋಷಣೆಯಾದರೆ ಮಾನವರು ಹಾಗೂ ಪ್ರಾಣಿಗಳು ಒಟ್ಟಿಗೆ ಜೀವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದೆಂದರು. ಈಗಾಗಲೆ ಪ್ರಾಣಿ ಮಾನವ ಸಂಘರ್ಷದಿಂದ ಸಾಕಷ್ಟು ಸಂಕಷ್ಟ ಎದುರಾಗಿದೆ. ಸೂಕ್ಷ್ಮ ಪರಿಸರ ವಲಯವನ್ನು ಗುರುತಿಸುವದಾದರೆ ನೆಲೆ ನಿಂತಿರುವ ಗ್ರಾಮಸ್ಥರಿಗೆ ಹಾಗೂ ರೈತರಿಗೆ ಪರ್ಯಾಯ ಭೂಮಿ ಮತ್ತು ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಶನಿವಾರಸಂತೆ ಒಕ್ಕೂಟದ ಅಧ್ಯಕ್ಷ ಆರ್.ಪಿ. ಲಕ್ಷ್ಮಣ್ ಹಾಗೂ ಸೋಮವಾರಪೇಟೆ ಅಧ್ಯಕ್ಷ ಎಸ್.ಇ. ಪ್ರಕಾಶ್ ನಂದಿನೆರವಂಡ ದಿನೇಶ್ ಉಪಸ್ಥಿತರಿದ್ದರು.