ಮಡಿಕೇರಿ, ಮಾ. 24: ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ನಾಗರಿಕ ಸೇವೆಯಲ್ಲಿ ಒಂದು ಲಕ್ಷದ ಎರಡು ಸಾವಿರದ ಐದುನೂರ ತೊಂಬತ್ತಮೂರು ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 78029 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಹಾಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಉದ್ಯೋಗಿಗಳಲ್ಲಿ 72806 ಪುರುಷರು ಹಾಗೂ 5223 ಮಹಿಳಾ ಸಿಬ್ಬಂದಿಗಳಿದ್ದಾರೆ. ಅಲ್ಲದೆ 24 ಸಾವಿರದ ಐದುನೂರ ಅರವತ್ತೊಂಬತ್ತು ಹುದ್ದೆಗಳು ಖಾಲಿ ಇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ಸ್ಪಷ್ಪಪಡಿಸಿದ್ದಾರೆ.ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಸದನದಲ್ಲಿ ಸಚಿವರು ಈ ಅಂಕಿ ಅಂಶ ನೀಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ 160 ಪೊಲೀಸ್ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ಪೂರ್ಣ ಗೊಂಡಿದ್ದು, ಉಳಿದಂತೆ ಸುಮಾರು 150 ಹುದ್ದೆಗಳು ಖಾಲಿಯಿವೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ‘ಶಕ್ತಿ'ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಕಾವೇರಿ ಸ್ವಚ್ಛತೆಗೆ ಕ್ರಮ

ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಕಾವೇರಿ ನದಿ ಮಾಲಿನ್ಯ ಬಗ್ಗೆ ಕೇಳಿದ ಮತ್ತೊಂದು ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಉತ್ತರಿಸಿ, ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಕಾವೇರಿ ಉಗಮ ಸ್ಥಳದಲ್ಲಿ ನೆಡುತೋಪುವಿಗೆ ಈಗಾಗಲೇ ರೂ. 15 ಲಕ್ಷ ಬಿಡುಗಡೆಗೊಳಿಸಿರುವದಾಗಿಯೂ ಸ್ಪಷ್ಟನೆ ನೀಡಿದ್ದಾರೆ.