*ಗೋಣಿಕೊಪ್ಪಲು, ಮಾ. 24: ಕಾವೇರಿ ಕಾಲೇಜು ವಿದ್ಯಾರ್ಥಿಗಳ ಮೇಲೆ ಆನೆ ಧಾಳಿ ನಡೆಸಿ ವಿದ್ಯಾರ್ಥಿನಿಯೋರ್ವಳು ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ತಿತಿಮತಿ ದೇವರಪುರ ಬಳಿಯ ನೆಲ್ಲಿಕಾಡು ಎಂಬಲ್ಲಿ ನಡೆದಿದೆ. ಗೋಣಿಕೊಪ್ಪ ಕಾವೇರಿ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಸಫಾನ (19) ಮೃತ ದುರ್ದೈವಿಯಾಗಿದ್ದು, ಆಕೆಯ ಸಹೋದರ ಅಂತಿಮ ಬಿ.ಎ. ವಿದ್ಯಾರ್ಥಿ ಶಕೀರ್ (21) ಪ್ರಾಣಾಪಾಯದಿಂದ ಪಾರಾಗಿ ಪ್ರಜ್ಞಾಹೀನತೆಯಿಂದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇವರು ತಾರಿಕಟ್ಟೆ ನಿವಾಸಿ ಮುಸ್ತಾಫ ಹಾಗೂ ಸೈನಾ ದಂಪತಿಯ ಮಕ್ಕಳಾಗಿದ್ದಾರೆ.ಬೆಳಗ್ಗೆ 9.00 ಗಂಟೆಗೆ ಸಹೋದರ ಸಹೋದರಿ ಯರಿಬ್ಬರು ದ್ವಿಚಕ್ರ ವಾಹನದಲ್ಲಿ ತಾರಿಕಟ್ಟೆಯಲ್ಲಿರುವ ತಮ್ಮ ಮನೆಯಿಂದ ಎಂದಿನಂತೆ
(ಮೊದಲ ಪುಟದಿಂದ) ಕಾಲೇಜಿಗೆ ತೆರಳುತ್ತಿದ್ದ ಸಂದರ್ಭ ಕಾಫಿ ತೋಟದಿಂದ ಎದುರಾದ ಆನೆ ಹಿಂಬದಿಯಲ್ಲಿ ಕುಳಿತಿದ್ದ ಸಫಾನಳ ಮೇಲೆ ಏಕಾಎಕಿ ಧಾಳಿ ನಡೆಸಿದೆ. ದ್ವಿಚಕ್ರ ಚಾಲನೆ ಮಾಡುತ್ತಿದ್ದ ಅಣ್ಣ ಶಕೀರ್ ಕೂದಲೆಳೆಯಲ್ಲಿ ಪಾರಾಗಿ ದ್ದಾನೆ.
ಕಾಫಿ ತೋಟದಿಂದ ರಸ್ತೆ ದಾಟಲು ವೇಗವಾಗಿ ಬರುತ್ತಿದ್ದ ಆನೆಗೆ ದ್ವಿಚಕ್ರದಲ್ಲಿ ಬರುತ್ತಿದ್ದ ವಿದ್ಯಾರ್ಥಿಗಳು ಎದುರಾಗಿದ್ದಾರೆ. ಈ ಸಂದÀರ್ಭ ಆನೆ ವಿದ್ಯಾರ್ಥಿಗಳ ಮೇಲೆ ಧಾಳಿ ನಡೆಸಿದೆ. ಹಿಂಬದಿಯಲ್ಲಿ ಕುಳಿತ್ತಿದ್ದ ಸಫಾನಳ ಮುಖದ ಭಾಗಕ್ಕೆ ಕೊಂಬಿನಿಂದ ತಿವಿದಿದೆ. ಈ ವೇಳೆ ರಸ್ತೆಗುರುಳಿದ ಸಫಾನ ಗಂಭೀರ ಗಾಯ ಮತ್ತು ತೀವ್ರ ರಕ್ತ ಸ್ರಾವದಿಂದ ಆಕೆ ಸ್ಥಳದಲ್ಲೆ ಮೃತಪಟ್ಟಿದ್ದಾಳೆ. ಆನೆ ತಿವಿದ ರಭಸಕ್ಕೆ ಆನೆಯ ದಂತ ಕೂಡ ತುಂಡಾಗಿದೆ. ತೋಟ ಕಾರ್ಮಿಕರು ಘಟನೆಯನ್ನು ಕಂಡು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಘಟನೆ ನಡೆಯುವ ಕೆಲ ಹೊತ್ತಿಗೆ ಮುನ್ನ ಇತರ ಶಾಲಾ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಈ ಮೊದಲು 3 ಆನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹೋಗಲು ರಸ್ತೆ ದಾಟಿದ್ದವು. ಕೆಲ ನಿಮಿಷಗಳ ನಂತರ ಮತ್ತೊಂದು ಆನೆ ಗಾಬರಿಯಿಂದ ಓಡಿ ಬಂದು ವಿದ್ಯಾರ್ಥಿಯನ್ನು ತಿವಿದಿದೆ.
ಘಟನೆಯ ಸ್ಥಳಕ್ಕೆ ಕ್ಷಣಾರ್ಧದಲ್ಲಿ ಸಾವಿರಾರು ಜನರು ಆಗಮಿಸಿ ಘಟನೆಯನ್ನು ನೆನೆದು ಕಂಬನಿ ಮಿಡಿದರು. ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಅರಣ್ಯಾಧಿಕಾರಿಗಳು ತಕ್ಷಣ 2 ಲಕ್ಷದ ಪರಿಹಾರ ಚೆಕ್ ನೀಡಿ, ನಂತರ ಶೀಘ್ರದಲ್ಲೆ ರೂ. 3 ಲಕ್ಷ ನೀಡುವ ಭರವಸೆ ನೀಡಿದರು. ಇದಕ್ಕೆ ಒಪ್ಪದ ಸಾರ್ವಜನಿಕರು ಸ್ಥಳದಲ್ಲೆ ತಕ್ಷಣ ಪರಿಹಾರ ನೀಡಲೇಬೇಕು ಎಂದು ಪಟ್ಟು ಹಿಡಿದು ಕುಳಿತರು. ಕೆಲ ನಿಮಿಷಗಳ ಕಾಲ ಅರಣ್ಯ ಅಧಿಕಾರಿಗಳು ಹಾಗೂ ಜನರ ನಡುವೆ ವಾಗ್ವಾದಗಳು ನಡೆದು ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಆನೆ ಹಿಡಿಯುವ ಕಾರ್ಯಾ ಚರಣೆಗೆ ಜಿಲ್ಲೆಯಾದ್ಯಂತ ಮುಂದಾಗಿ ದ್ದರೂ, ತಿತಿಮತಿ ಭಾಗದಲ್ಲಿ ಆನೆ ಹಿಡಿಯಲು ಮುಂದಾಗಿಲ್ಲ. ಈ ಭಾಗದಲ್ಲಿ ಒಂದು ವರ್ಷದೊಳಗೆ 7-8 ಜನರನ್ನು ಆನೆ ಬಲಿ ಪಡೆದು ಕೊಂಡಿದೆ. ಸರಕಾರದಿಂದ ಮೃತ ಕುಟುಂಬಕ್ಕೆ ಪರಿಹಾರ ನೀಡುತ್ತಿದೆಯೇ ಹೊರತು ಆನೆ ಹಿಡಿದು ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು ಸ್ಥಳೀಯ ಜನಪ್ರತಿ ನಿಧಿಗಳು ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿ ದ್ದಾರೆ. ಆನೆಯಿಂದ ಉಂಟಾಗುವ ಸಮಸ್ಯೆಯಿಂದ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಅರಣ್ಯ ವೈದ್ಯಾಧಿಕಾರಿ ಡಾ. ಉಮಾಶಂಕರ್, ಎ.ಸಿ.ಎಫ್ ಶ್ರೀಪತಿ, ಆರ್.ಎಫ್.ಓ. ಗೋಪಾಲ್ ಮತ್ತು ಸಿಬ್ಬಂದಿಗಳು, ತಾಲೂಕು ಪೊಲೀಸ್ ಉಪ ಆಧೀಕ್ಷಕ ನಾಗಪ್ಪ, ಕುಟ್ಟ ವೃತ್ತ ನಿರೀಕ್ಷಕ ದಿವಾಕರ್, ಗೋಣಿಕೊಪ್ಪ ಠಾಣಾಧಿಕಾರಿ ಗೋವಿಂದರಾಜು ಪೊನ್ನಂಪೇಟೆ ಠಾಣಧಿಕಾರಿ ಜಯರಾಮ್, ಮತ್ತು ಸಿಬ್ಬಂಧಿಗಳು ಹಾಜರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಸ್ಥಳಕ್ಕೆ ಆಗಮಿಸಿ ತಮ್ಮ ಸ್ನೇಹಿತಳಿಗೆ ಆದ ದುರ್ಘಟನೆಯನ್ನು ನೆನೆದು ಕಂಬನಿ ಮಿಡಿದರು.
ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಸಂದರ್ಭ ಸಾವಿರಾರು ಜನರು ಮತ್ತು ಕಾಲೇಜು ವಿದ್ಯಾರ್ಥಿಗಳು ಶವಾಗಾರದ ಎದುರು ಜಮಾಯಿಸಿದರು. ಶವಾಗಾರಕ್ಕೆ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ, ತಾಲೂಕು ದಂಡಾಧಿಕಾರಿ ಮಹದೇವಸ್ವಾಮಿ ಭೇಟಿ ನೀಡಿದರು.
ತಕ್ಷಣ ಪರಿಹಾರಕ್ಕೆ ಆಗ್ರಹ
ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಶಾಸಕ ಕೆ.ಜಿ. ಬೋಪಯ್ಯ ಅವರು ಮೃತರ ಕುಟುಂಬಕ್ಕೆ ತಕ್ಷಣ ಬಾಕಿ ಪರಿಹಾರ ಹಣ ಒದಗಿಸುವಂತೆ ಆಗ್ರಹಿಸಿದ್ದಾರೆ. ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಕಾಡಾನೆ ಧಾಳಿಗೆ ಬಲಿಯಾಗಿರುವದು ವಿಷಾದಕರ ಎಂದಿರುವ ಅವರು, ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುವದಾಗಿ ತಿಳಿಸಿದ್ದಾರೆ. ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೋಂಡ ವಿಜು ಸುಬ್ರಮಣಿ ಅವರು ಕಾಡಾನೆ ನಿಯಂತ್ರಣಕ್ಕೆ ಸರಕಾರ, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಜನತೆಯನ್ನು ಸಂಘಟಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.