ಮಡಿಕೇರಿ, ಮಾ. 24: ಮಡಿಕೇರಿ ನಗರಸಭೆಯ ಆಳ್ವಿಕೆಗೆ ಒಳಪಟ್ಟು, ಶತಮಾನ ಕಂಡಿರುವ ಮೂರು ಪ್ರಾಥಮಿಕ ಶಾಲೆಗಳು ನಗರದ ಮೂರು ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ನೂರಾರು ಮಕ್ಕಳು ಕಲಿಯುತ್ತಿರುವ ಈ ಮೂರು ಶಾಲೆಗಳಲ್ಲಿ ತಲಾ ಇಬ್ಬರಂತೆ ಆರು ಮಂದಿ ಗೌರವ ಶಿಕ್ಷಕರಿಗೆ ಮಾಸಿಕ ರೂ. 1 ಸಾವಿರದಂತೆ ಸಂಭಾವನೆ ನೀಡಲಾಗುತ್ತಿದೆ. ಈ ಒಂದು ಸಾವಿರವನ್ನು ಕೂಡಾ ಕಳೆದ ಅಕ್ಟೋಬರ್‍ನಿಂದ ಶಿಕ್ಷಕರಿಗೆ ನೀಡದೆ ವಂಚಿಸಲಾಗಿದೆ.

ಕುಟುಂಬ ನಿರ್ವಹಣೆಯೊಂದಿಗೆ ಮಕ್ಕಳ ಭವಿಷ್ಯದ ಹೊಣೆ ಹೊತ್ತಿರುವ ಈ ಆರು ಮಂದಿ ಶಿಕ್ಷಕರು ಕನಿಷ್ಟ ಸಂಭಾವನೆ ರೂ. 1 ಸಾವಿರ ಮೊತ್ತ ಕೈಸೇರದಿರುವ ಕಾರಣ ತೀವ್ರ ಆತಂಕಗೊಂಡಿದ್ದಾರೆ. ತಿಂಗಳುಗಟ್ಟಲೆ ಶಾಲೆಯಲ್ಲಿ ದುಡಿಮೆಯೊಂದಿಗೆ ಬರಿಗೈನಲ್ಲಿ ಮನೆ ಮಂದಿಗೂ ಮುಖ ತೋರಿಸಲು ದಿಗಿಲುಗೊಂಡಿದ್ದಾರೆ.

ಮಡಿಕೇರಿ ನಗರಸಭಾ ಆಡಳಿತ ಒಂದು ರೀತಿಯಲ್ಲಿ ಈ ಮೂರು ಶಾಲೆಗಳನ್ನು ಒಣಪ್ರತಿಷ್ಠೆಗಾಗಿ ಉಳಿಸಿಕೊಂಡು, ಮಕ್ಕಳೊಂದಿಗೆ ಶಿಕ್ಷಕರ ಭವಿಷ್ಯದ ಕಡೆಗೆ ಕಿಂಚಿತ್ತೂ ಗಮನಹರಿಸುತ್ತಿಲ್ಲ ಎನ್ನುವದು ಆ ಶಾಲೆಗಳ ಮಕ್ಕಳ ಪೋಷಕರ ಅಳಲು.

ಜನರಲ್ ತಿಮ್ಮಯ್ಯ ರಸ್ತೆಗೆ ಹೊಂದಿಕೊಂಡಿರುವ ನಗರಸಭಾ ಶಾಲೆಯಲ್ಲಿ ನಿವೃತ್ತ ಸೈನಿಕರೊಬ್ಬರ ಮಡದಿ ಗೌರವ ಶಿಕ್ಷಕಿಯಾಗಿ ಕಳೆದ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರದಿಂದ ಎಂದಾದರೂ ತಮ್ಮ ಕೆಲಸ ಖಾಯಂಗೊಂಡು, ಸಂಬಳ ಹೆಚ್ಚಾಗಬಹುದು ಎಂದು ಕನಸು ಕಟ್ಟಿಕೊಂಡಿದ್ದಾರೆ.

ಇನ್ನೋರ್ವ ಶಿಕ್ಷಕಿ ತನ್ನ ಆರು ತಿಂಗಳ ಪುಟ್ಟ ಕಂದಮ್ಮಳನ್ನು ಮನೆಯಲ್ಲಿ ಬಿಟ್ಟು ಬಂದು, ಭವಿಷ್ಯದ ಕನಸು ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಗರಸಭೆ ಸಂಬಳ ನೀಡದೆ ಇದ್ದರೂ, ಗೋಳಿನ ಜೀವನ ಯಾರೊಂದಿಗೂ ಹಂಚಿಕೊಳ್ಳಲಾರದೆ ಮೂಕ ವೇದನೆ ಅನುಭವಿಸುತ್ತಿದ್ದಾರೆ.

ರೂ. 1 ಬಾಡಿಗೆ...!

ಈ ಶಾಲೆಯಲ್ಲಿ ಮುಖ್ಯೋಪಾಧ್ಯಾಯರ ಸಹಿತ ಇಬ್ಬರು ಮಾತ್ರ ಖಾಯಂ ಶಿಕ್ಷಕಿಯರಿದ್ದು, 1 ರಿಂದ 7ನೇ ತರಗತಿಗಳೊಂದಿಗೆ 56 ಮಂದಿ ಬಡ ಮಕ್ಕಳು ಕಲಿಯುತ್ತಿದ್ದಾರೆ. ಈ ಶಾಲೆ 1907 ರಲ್ಲಿ ಸ್ಥಾಪನೆಗೊಂಡಿದ್ದು, ಅಂದಿನಿಂದ ಇಂದಿನವರೆಗೆ ಸಂಬಂಧಿಸಿದ ಕಟ್ಟಡಕ್ಕೆ ‘ಮಿಷನರಿ ಸಂಸ್ಥೆ’ಗೆ ರೂ. 1 ರಂತೆ ನಗರಸಭೆ ವಾರ್ಷಿಕ (ಮಾಸಿಕ ಗೊಂದಲ) ಬಾಡಿಗೆ ಪಾವತಿಸುತ್ತಿದೆ ಎಂಬದು ಅಸ್ಪಷ್ಟ.

ಎ.ವಿ. ಶಾಲೆ

ಇನ್ನು ನಗರಸಭೆಗೆ ಸಂಬಂಧಿಸಿದ ಇನ್ನೊಂದು ಶಾಲೆ ಬನ್ನಿ ಮಂಟಪ ಬಳಿ ಇದೆ. ಎ.ವಿ. ಶಾಲೆಯೆಂದೇ ಇದಕ್ಕೆ ಖ್ಯಾತಿ, (ಆ್ಯಂಗ್ಲೋ ವರ್ಣಕುಲಂ) ಈ ಶಾಲೆ 1914 ರಲ್ಲಿ ಪ್ರಾರಂಭಗೊಂಡು ಪ್ರಸಕ್ತ 7 ತಿಂಗಳಿನಿಂದ ಯಾವ ಸಂಭಾವನೆಯಿಲ್ಲದೆ ಇಬ್ಬರು ಗೌರವ ಶಿಕ್ಷಕರು ದುಡಿಯುತ್ತಿದ್ದಾರೆ. ಇಲ್ಲಿ ಕೂಡಾ 1 ರಿಂದ 7ನೇ ತರಗತಿ ತನಕ ಒಟ್ಟು 61 ಮಕ್ಕಳು ಕಲಿಯುತ್ತಿದ್ದು, ನಗರಸಭೆ ವಿದ್ಯೆ ಕಲಿಸುವ ಶಿಕ್ಷಕರನ್ನು ಕಡೆಗಣಿಸಿರುವದು ಸ್ಪಷ್ಟ.

ರಾಜರ ಕಾಲದಲ್ಲಿ ಕುದುರೆ ದೊಡ್ಡಿಯಾಗಿದ್ದ ಈ ಕಟ್ಟಡವನ್ನು ಅಂದಿನ ಸ್ಥಳೀಯ ಸಂಸ್ಥೆ, ಸ್ವಾತಂತ್ರ್ಯ ಪೂರ್ವದಲ್ಲೇ ಶಾಲೆಯಾಗಿ ಪರಿವರ್ತಿಸಿದ್ದಾಗಿದೆ. ಇಲ್ಲಿ ಇಂದಿಗೂ ವೀರರಾಜೇಂದ್ರ ‘ಲಾಂಛನ’ ಹಾಗೂ ಆನೆಯ ಎರಡು ಸುಂದರ ಆಕೃತಿಗಳು ಗೋಚರಿಸುತ್ತಿವೆ.

ಹಿಂದೂಸ್ತಾನಿ ಶಾಲೆ

ನಗರದ ಕನಕದಾಸ ರಸ್ತೆ ಅಂಚಿನಲ್ಲಿ ಇನ್ನೊಂದು ಹಿಂದೂಸ್ತಾನಿ ಶಾಲೆ ನಗರಸಭೆಗೆ ಒಳಪಟ್ಟಿದೆ. ಇಲ್ಲಿಯೂ ಮೂವರು ಶಿಕ್ಷಕರಿಗೆ ಸಂಬಳವಿಲ್ಲ. 1918 ರಲ್ಲಿ ಸ್ಥಾಪನೆಗೊಂಡಿರುವ ಈ ಶಾಲೆಯಲ್ಲಿ 1 ರಿಂದ 7ನೇ ತರಗತಿಗಳು ನಡೆಯುತ್ತಿದ್ದು, ಪ್ರಸಕ್ತ 31 ಮಕ್ಕಳು ಕಲಿಯುತ್ತಿದ್ದಾರೆ.

ಇಲ್ಲಿಯ ಗೌರವ ಶಿಕ್ಷಕಿಯರಿಗೂ ನಗರಸಭೆ ಹಣ ನೀಡದೆ ಅನೇಕರು ಕೆಲಸ ಬಿಟ್ಟು ಹೋಗಿದ್ದಾರೆ. ಪ್ರಸಕ್ತ 3 ಮಂದಿ ಕರ್ತವ್ಯದಲ್ಲಿದ್ದು ಖಾಯಂ ಮುಖ್ಯ ಶಿಕ್ಷಕರೊಬ್ಬರು ಇಲ್ಲಿದ್ದಾರೆ.

ಸದಸ್ಯ ಸ್ಪಂದನ

ಈ ಶಾಲೆಯೇ ಒಂದು ಮತಗಟ್ಟೆ ಕೇಂದ್ರವಾಗಿರುವ ಹಿನ್ನೆಲೆ, ಇದೇ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ನಗರಸಭಾ ಸದಸ್ಯ ಪೀಟರ್ ಅವರು, 3 ಮಂದಿ ಶಿಕ್ಷಕಿಯರಿಗೆ ಕೈಲಾದಷ್ಟು ಗೌರವ ಸಂಭಾವನೆ ನೀಡುತ್ತಾ, ಮಕ್ಕಳಿಗೆ ಅನ್ಯಾಯವಾಗದಂತೆ ಮಾನವೀಯತೆ ತೋರುತ್ತಿದ್ದಾರೆ.

ಒಟ್ಟಿನಲ್ಲಿ ನಗರಸಭೆ ತನ್ನ ಹೆಸರಿನಲ್ಲಿ ಮೂರು ನಾಮಫಲಕಗಳನ್ನು ನೇತಾಡಿಸಿಕೊಂಡಿರುವ, ಈ ಶಾಲೆಗಳ ಶಿಕ್ಷಕರು - ವಿದ್ಯಾರ್ಥಿಗಳ ಬವಣೆ ಕೇಳುತ್ತಿಲ್ಲ. ಇತ್ತ ನಗರಸಭಾ ಸದಸ್ಯರು ಕೂಡಾ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ. - ಶ್ರೀಸುತ