ಮಡಿಕೇರಿ, ಮಾ. 23: ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಾಯಿಯ ಗರ್ಭದೊಳಿರುವ ಭ್ರೂಣ ಸಹಿತ; ಹುಟ್ಟುವ ಮಗುವಿನಿಂದ; ಚಟ್ಟಕ್ಕೆ ಏರುವ ವೃದ್ಧಾಪ್ಯ ಜೀವಗಳಿಗೂ ನೆಮ್ಮದಿಯ ಬದುಕಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಾ ಬಂದಿವೆ.ಇಂತಹ ಯೋಜನೆಗಳನ್ನು ಪರಿಣಾಮಕಾರಿಯಾಗಿ ರೂಪಿಸುವಲ್ಲಿ ಗ್ರಾ.ಪಂ.ನಿಂದ ಸಂಸÀತು ತನಕ ಜನಪ್ರತಿನಿಧಿಗಳು ಗಮನಹರಿಸು ವವರಿದ್ದಾರೆ. ಕಾರ್ಯಾಂಗ ವ್ಯವಸ್ಥೆ ಇವೆಲ್ಲವನ್ನು ಅನುಷ್ಠಾನ ಮಾಡಬೇಕಿದೆ.

ಪ್ರತಿಯೊಂದು ಯೋಜನೆಯ ಹಿಂದೆ ಒಂದೊಂದು ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಕೆಲವೊಮ್ಮೆ ಎಷ್ಟು ಇಲಾಖೆಗಳು ಮತ್ತು ಯಾವ ಕೆಲಸಗಳನ್ನು ಯಾರು ಮಾಡುತ್ತಿದ್ದಾರೆ ? ಎಂಬದು ನಮ್ಮ ಜನಪ್ರತಿನಿಧಿಗಳಿಗೆ ಗೊತ್ತಿರುವದಿಲ್ಲ!

ಇದಕ್ಕೆ ಉದಾಹರಣೆಯಾಗಿ ಕೊಡಗು ಜಿಲ್ಲಾ ಶಿಶು ಕಲ್ಯಾಣ ಹಾಗೂ ಮಹಿಳಾ ಸಬಲೀಕರಣ ಇಲಾಖೆಯ ಕೆಲಸ ಕಾಣಬರುತ್ತದೆ. ಈ ಜವಾಬ್ದಾರಿಯುತ ಇಲಾಖೆಯನ್ನು ಸಮರ್ಪಕವಾಗಿ ನೋಡಿಕೊಳ್ಳಲು ಜಿಲ್ಲಾಮಟ್ಟದ ಅಧಿಕಾರಿಯೇ ಇಲ್ಲ. ಕಿರಿಯ ಹಂತದಲ್ಲಿರುವವರೇ ಒಟ್ಟಾರೆ ಎಲ್ಲದಕ್ಕೂ ಪ್ರಬಾರಿಯಷ್ಟೆ.

ಲೆಕ್ಕವಿಲ್ಲ !: ಇಲಾಖೆಯಡಿ ಜಿಲ್ಲೆಯಾದ್ಯಂತ ನೂರಾರು ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಾವಿರಗಟ್ಟಲೆ ಮಕ್ಕಳು (ಶಿಶುಗಳು) ಇಲ್ಲಿ ಕಲಿಯುತ್ತಾ - ನಲಿಯುತ್ತಾ ಪೌಷ್ಠಿಕ ಆಹಾರ ಸೇವಿಸಿ ಸದೃಢವಾಗಿ ಬೆಳೆಯಬೇಕೆಂದು ಸರಕಾರ ಯೋಜನೆಗಳನ್ನು ರೂಪಿಸಿದ್ದರೂ, ಯಾವದಕ್ಕೂ ಇಲ್ಲಿ ಲೆಕ್ಕವಿಲ್ಲದೆ ಯಾರ್ಯಾರೋ ಮಧ್ಯವರ್ತಿಗಳು ಮುಗ್ದ ಕಂದಮ್ಮಗಳ ಹೆಸರಿನಲ್ಲಿ ತಿಂದು ಬಿಡುತ್ತಾರೆ!

ಆ ಜಾಲ ಎಷ್ಟು ಪ್ರಭಾವಿ ಯೆಂದರೆ ಇಲ್ಲಿ ಜಿಲ್ಲಾಧಿಕಾರಿಗಳ ಸಹಿತ ಜನಪ್ರತಿನಿಧಿಗಳನ್ನು ಒಳಗೊಂಡ ಸ್ಥಳೀಯ ಸಂಸ್ಥೆಗಳ ಆಡಳಿತಕ್ಕೂ ಕವಡೆ ಕಿಮ್ಮತ್ತಿನ ಬೆಲೆಯಿಲ್ಲ.

(ಮೊದಲ ಪುಟದಿಂದ)

ಆದೇಶ ಜಾರಿ : ಐದು ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿಗಳು 9.7.2012ರಂದು ಸಂಬಂಧಿಸಿದ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ನಿರ್ದೇಶನ ದೊಂದಿಗೆ ಜನತಾ ಬಜಾರ್ ನಂತಹ ಸಹಕಾರಿ ಸಂಸ್ಥೆಯಿಂದ ಮಕ್ಕಳಿಗೆ ಬೇಕಾಗುವ ಪೌಷ್ಠಿಕ ಆಹಾರವನ್ನು ಗುಣಮಟ್ಟ ದೊಂದಿಗೆ ಖರೀದಿಸಲು ಆದೇಶಿಸಿದ್ದರು.

ಈ ಬಗ್ಗೆ ಅಂದು ಸಚಿವರಾಗಿದ್ದ ಎಂ.ಪಿ. ಅಪ್ಪಚ್ಚು ರಂಜನ್ ಕೂಡ ಮರು ನಿರ್ದೇಶನವನ್ನು ಸಂಬಂಧಪಟ್ಟವರಿಗೆ ನೀಡಿದ್ದಾರೆ. ಈ ನಡುವೆ ಜಿಲ್ಲೆಯಲ್ಲಿ ಬಡತನ ರೇಖೆಯಲ್ಲಿ ಬದುಕು ಕಟ್ಟಿಕೊಂಡಿರುವ ಸ್ತ್ರೀಯರಿಗೆ ಆಸರೆಯಾಗುವಂತೆ, ಅಂಗನವಾಡಿ ಮಕ್ಕಳ ಸಹಿತ ಶೋಷಿತರಿಗೆ ಸಮರ್ಪಕ ಪಡಿತರ ಇತ್ಯಾದಿ ಪೂರೈಸುವ ದಿಸೆಯಲ್ಲಿ ಸರಕಾರದ ನೀತಿಯಡಿ ಎಂ.ಎಸ್.ಪಿ.ಟಿ.ಸಿ. ರಚನೆಗೊಂಡಿದೆ.

ಮಂಕು ಬೂದಿ : ಈ ಪುಟ್ಟ ಕೊಡಗಿನಲ್ಲಿ ಮಾಸಿಕ ಅಂದಾಜು ರೂ. 40 ಲಕ್ಷ ವಹಿವಾಟು ಮಾಡಲಾಗುತ್ತಿದೆ. ಇಂತಹ ಸಂಸ್ಥೆಗಳಿಗೂ ಮಂಕು ಬೂದಿ ಎರಚಿರುವ ಹಿಂದಿನ ಅಧಿಕಾರಿ ನಾಗರಾಜ್ ಎಂಬವರು ಭಾರೀ ಅವ್ಯವಹಾರದಲ್ಲಿ ತೊಡಗಿದ್ದ ಆರೋಪದೊಂದಿಗೆ ಲಂಚಬಾಕತನ ತೋರಿದ ದೃಶ್ಯಾವಳಿಗಳ ದಾಖಲೆ ಸಹಿತ ಜಿಲ್ಲೆಯಿಂದ ‘ಗೇಟ್‍ಪಾಸ್‘ ಪಡೆದಿದ್ದಾರೆ. ಕಾರಣ ರೂ. 40 ಲಕ್ಷದ ವಹಿವಾಟು ಮೈಸೂರಿನಿಂದಲೇ ಈ ಅಧಿಕಾರಿ ಕೇವಲ ತೋರಿಕೆಗೆ ನಡೆಸುತ್ತಿದ್ದ ಆರೋಪವಿತ್ತು.

ಬದಲಾಗದ ವ್ಯವಸ್ಥೆ : ಅಧಿಕಾರಿ ಬದಲಾದ ಮಾತ್ರಕ್ಕೆ ಇಲ್ಲಿ ವ್ಯವಸ್ಥೆ ಬದಲಾಗಿಲ್ಲ. ಹಗರಣ ಸಂಬಂಧ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆದು ಸ್ವತಃ ಜಿ.ಪಂ. ಅಧ್ಯಕ್ಷರು ಹಾಗೂ ಸ್ಥಾಯಿ ಸಮಿತಿಯಿಂದ ಸಂಬಂಧಪಟ್ಟ ಇಲಾಖೆಗೆ ಲಿಖಿತ ಸೂಚನೆಯೊಂದಿಗೆ ಜನತಾ ಬಜಾರ್‍ನಿಂದ ಪಾರದರ್ಶಕವಾಗಿ ಅಂಗನವಾಡಿ ಮಕ್ಕಳಿಗೆ ಪಡಿತರ ಖರೀದಿಸಲು ಆದೇಶಿಸಲಾಗಿದೆ. ಆದರೂ ಹೊರ ಜಿಲ್ಲೆಯಿಂದ ಖರೀದಿಸುತ್ತಿರುವ ಆರೋಪವಿದೆ.

ಹೀಗಿದ್ದು ಕೂಡ ಯಾವದೂ ಕಾರ್ಯರೂಪಕ್ಕೆ ಬಾರದೆ, ಜಿಲ್ಲೆಯಿಂದ ‘ಗೇಟ್‍ಪಾಸ್’ ಪಡೆದಿರುವ ಅಧಿಕಾರಿಯ ಮೂಲಕವೇ ಹಾಲೀ ಉಸ್ತುವಾರಿ ಅಧಿಕಾರಿ ವ್ಯವಹರಿಸುವದರೊಂದಿಗೆ ಅಂಗನವಾಡಿ ಶಿಶುಗಳ ಲೆಕ್ಕದಲ್ಲಿ ಅವ್ಯವಹಾರ ಜಾಲದಲ್ಲಿ ಸಿಲುಕಿರುವ ಆರೋಪವಿದೆ.

ಒಳ ಹೂರಣವಿಷ್ಟೆ...!? : ಕೊಡಗು ಜಿಲ್ಲೆಯಲ್ಲಿ ಸುಮಾರು 871 ಅಂಗನವಾಡಿ ಕೇಂದ್ರಗಳಿವೆ. ಇಲಾಖೆಯ ಲೆಕ್ಕಾಚಾರದಂತೆ ಇಲ್ಲಿ ಒಟ್ಟು 4,300ರಷ್ಟು ಮಕ್ಕಳ ಸಂಖ್ಯೆ ತೋರಿಸಲಾಗುತ್ತಿದೆ. ವಾಸ್ತವದಲ್ಲಿ ಅಷ್ಟು ಮಕ್ಕಳೇ ಇಲ್ಲ. ಇಲ್ಲಿ ಮಕ್ಕಳಿಗೆ ಮಾತ್ರವಲ್ಲದೆ ಸಂಬಂಧಿಸಿದ ವಸತಿ ಪ್ರದೇಶದ ನಾಲ್ಕೈದು ವರ್ಷದೊಳಗಿನ ಎಲ್ಲ ಶಿಶುಗಳು ಹಾಗೂ ಗರ್ಭಿಣಿಯರು, ಬಾಣಂತಿಯರ ಯೋಗಕ್ಷೇಮ ಈ ಇಲಾಖೆಯದ್ದಾಗಿದೆ. ಇವರಿಗಾಗಿ ರೂ. 40 ಲಕ್ಷದ ಅಂದಾಜು ಆಹಾರ ಖರೀದಿ ಲೆಕ್ಕ ತೋರಿಸಲಾಗುತ್ತಿದೆ.

ಇಲ್ಲಿ ಹಾಡಿಗಳಿಂದ ಕಾಡಂಚಿನ ಯಾವ ಗ್ರಾಮಗಳ ತಾಯಂದಿರು ಅಥವಾ ಶಿಶಿಗಳಿಗೆ ಈ ಸವಲತ್ತು ತಲುಪಿಸದೆ; ಕುಳಿತಲ್ಲಿಯೇ ಲಕ್ಷ ಲಕ್ಷ ಕೊಳ್ಳೆ ಹೊಡೆಯಲು ಸುಲಭ ಮಾರ್ಗ ಈ ಪಡಿತರ ಯೋಜನೆ...!?

ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಭ್ರಷ್ಟಾಚಾರ ನಿರ್ಮೂಲನಾ ಆಂದೋಲನಕ್ಕೆ ಇಲ್ಲಿ ಹುಟ್ಟುವ ಶಿಶುವಿನಿಂದಲೇ ಚಾಲನೆ ದೊರಕಬೇಕಿದೆ. ಅತ್ತ ಶಿಶು ಕಲ್ಯಾಣ ಇಲಾಖೆ ಪ್ರಥಮ ಆದ್ಯತೆಯೊಂದಿಗೆ ಜನಸಮೂಹದ ಧನಿಯಾಗಬೇಕಿದೆ. -ಶ್ರೀ ಸುತ