ಮಡಿಕೇರಿ, ಮಾ. 23: ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದ ಬಳಿ ಹರಿಯುವ ತೋಡಿನ ಸಮೀಪ ಇದ್ದಕ್ಕಿದ್ದಂತೆ ಇಂದು ಸಂಜೆ ವೇಳೆಗೆ ಜನಜಂಗುಳಿ ಕಂಡು ಬಂತು. ಏನಾಯ್ತೋ...? ಎಂಬ ಕುತೂಹಲದೊಂದಿಗೆ ಅಲ್ಲಿ ತೆರಳಿ ನೋಡಿದಾಗ ವ್ಯಕ್ತಿಯೊಬ್ಬ ತೋಡಿಗೆ ಬಿದ್ದು ಗಡಗಡ ನಡುಗುತ್ತಾ ಜನರನ್ನೇ ದಿಟ್ಟಿಸುತ್ತಾ ಮಲಗಿದ್ದ.
ಏನಾಗಿದ್ದು ? ಏನಾಗಿದ್ದು ? ಎಂದು ಯಾರನ್ನೂ ಕೇಳಿದರೂ ಸ್ಪಷ್ಟ ಉತ್ತರವಿಲ್ಲ. ಒಂದೆರಡು ಮಂದಿ ಮಾತ್ರ ‘ಅವ್ನಾಗೆ ಬಿದ್ದ’ ಸರ್ ಎಂದು ಹೇಳಿದರು. ಇನ್ನೂ ಕೆಲವರು ಫೋಟೋ ಕ್ಲಿಕ್ಕಿಸುವದರಲ್ಲೆ ನಿರತರಾಗಿದ್ದರು. ಅಷ್ಟರಲ್ಲೇ ಪೊಲೀಸರ ಆಗಮನವೂ ಆಯಿತು. ಗೃಹ ರಕ್ಷಕದಳದ ಸಿಬ್ಬಂದಿಯೋರ್ವ ಆತನನ್ನು ಮೇಲೆತ್ತಲು ತೋಡಿಗೆ ಇಳಿದರು. ಇಬ್ಬರು ಯುವಕರು ಸಹಕರಿಸಿದರು. ಆತನನ್ನು ಮೇಲೆತ್ತುವ ವೇಳೆ ಬಾಯಿಯಿಂದ ನೊರೆ ಬರಲಾರಂಭಿಸಿತ್ತು. ಈ ಸಂದರ್ಭ ಪೊಲೀಸ್ ಸಿಬ್ಬಂದಿಯೊಬ್ಬರು ಆತನ ಜತೆಗಿದ್ದ ಮಹಿಳೆ ಬಸ್ ನಿಲ್ದಾಣದ ಎದರು ನಿಂತಿದ್ದಾಳೆ ಎಂದರು.
ಆಕೆಯ ಬಳಿ ಹೋಗಿ ವಿಚಾರಿಸಿದಾಗÀ ‘ನಾನ್ ಸಲ್ಮಾ ಅಂತ ಸಾರ್’ ನಮ್ಮೂರು ಹುಣಸೂರು ಅವ್ನು ಕಾರ್ತಿಕ್ ಅಂತ ಮಂಡ್ಯದೋನು ನನ್ ಜೊತೆಗೆ ಇದ್ದ. ಅವ್ನ್ ಹೀಗೇನೆ ಸರ್ ಎಲ್ ಹೋದ್ರು ಒಂದಲ್ಲಾ ಒಂದು ತೊಂದ್ರೆಕೊಡ್ತಾನೆ. ಕುಡ್ದು ಹಾಳಾಗ್ತಾನೆ ? ಎಂದು ನಿರ್ಲಿಪ್ತವಾಗಿ ನುಡಿದಳು. ನಂತರ ಪೊಲೀಸರ ಸಮ್ಮುಖದಲ್ಲಿ ಆತನನ್ನು ಆಸ್ಪತ್ರೆಗೆ ಆಟೋವೊಂದರಲ್ಲಿ ಸಾಗಿಸಲಾಯಿತು. ಚಿಕಿತ್ಸೆಯ ಬಳಿಕ ಆತ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಆದರೆ ಕೆಲವರು ಆತ ತೋಡಿಗೆ ಯಾಕಾಗಿ ಬಿದ್ದ? ಹೇಗೆ ಬಿದ್ದ ಎಂದು ಪ್ರಶ್ನೆಗೆ ಒಬ್ಬೊಬ್ಬರಿಂದ ಒಂದೊಂದು ರೀತಿ ಉತ್ತರ ಸಿಕ್ಕಿತಾದರೂ ನೈಜ ಕಾರಣ ತಿಳಿದು ಬರಲಿಲ್ಲ.